ADVERTISEMENT

ನಂದವರೀಕ ಟ್ರಸ್ಟ್‌ನಿಂದ ವಿದ್ಯಾರ್ಥಿಗಳಿಗೆ ಸತ್ಕಾರ

ಬೆಂಗಳೂರಿನಲ್ಲಿ ₹11 ಕೋಟಿ ವೆಚ್ಚದಲ್ಲಿ ಕಟ್ಟಡ: ನಂದವರೀಕ ಟ್ರಸ್ಟ್‌ನ ಕಾರ್ಯದರ್ಶಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 5:17 IST
Last Updated 12 ಜನವರಿ 2026, 5:17 IST
ಕೋಲಾರ ನಗರದಲ್ಲಿ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ರಾಜ್ಯ ನಂದವರೀಕ ಟ್ರಸ್ಟ್‌ನ ಕಾರ್ಯದರ್ಶಿ ನಂಜುಂಡಶರ್ಮ ಉದ್ಘಾಟಿಸಿದರು
ಕೋಲಾರ ನಗರದಲ್ಲಿ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ರಾಜ್ಯ ನಂದವರೀಕ ಟ್ರಸ್ಟ್‌ನ ಕಾರ್ಯದರ್ಶಿ ನಂಜುಂಡಶರ್ಮ ಉದ್ಘಾಟಿಸಿದರು    

ಕೋಲಾರ: ಬೆಂಗಳೂರಿನಲ್ಲಿ ನಂದವರೀಕ ಟ್ರಸ್ಟ್‌ನಿಂದ ಸುಮಾರು ₹ 11 ಕೋಟಿ ವೆಚ್ಚದಲ್ಲಿ ನಂದವರೀಕ ಕಚೇರಿ, ಸಭಾಂಗಣ, ವಿದ್ಯಾರ್ಥಿನಿಲಯ ಮತ್ತಿತರ ಸೌಲಭ್ಯಗಳುಳ್ಳ ಐದಂತಸ್ತಿನ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕೆ ರಾಜ್ಯದ ವಿವಿಧೆಡೆ ಇರುವ ಟ್ರಸ್ಟ್‌ನ ಸದಸ್ಯರು ಆರ್ಥಿಕ ನೆರವು ಒದಗಿಸಿ ಕೈಜೋಡಿಸಬೇಕು ಎಂದು ರಾಜ್ಯ ನಂದವರೀಕ ಟ್ರಸ್ಟ್‌ನ ಕಾರ್ಯದರ್ಶಿ ನಂಜುಂಡಶರ್ಮ ಮನವಿ ಮಾಡಿದರು.

ನಗರದ ಜಿಲ್ಲಾ ನಂದವರೀಕ ಟ್ರಸ್ಟ್‌ನಿಂದ ‘ನಂದವರೀಕ ಭವನ’ದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ, ಸಾಧಕ ಮಕ್ಕಳನ್ನು ಪುರಸ್ಕರಿಸಿ ಮಾತನಾಡಿದರು.

ಬೆಂಗಳೂರಿನ ನಂದವರೀಕ ಟ್ರಸ್ಟ್ ಕಟ್ಟಡ ಸುಮಾರು 80 ವರ್ಷಗಳಿಗೂ ಹೆಚ್ಚು ಹಳೆಯದಾಗಿದ್ದು, ಪ್ರಸ್ತುತ ಶಿಥಿಲಾವಸ್ಥೆ ತಲುಪಿದೆ. ಶಿಥಿಲವಾದ ಕಟ್ಟಡ ಕೆಡವಲು ಪಾಲಿಕೆಯೂ ಸೂಚಿಸಿರುವ ಹಿನ್ನೆಲೆಯಲ್ಲಿ ನೂತನ ಕಟ್ಟಡ ನಿರ್ಮಾಣ ಅನಿವಾರ್ಯವಾಗಿದೆ ಎಂದರು.

ADVERTISEMENT

ಬೆಂಗಳೂರಿನಲ್ಲಿ ಉತ್ತಮವಾದ ಜಾಗದಲ್ಲಿರುವ ಟ್ರಸ್ಟ್ ಜಾಗವನ್ನು ಉಳಿಸಬೇಕಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ‌ ಎಂದು ತಿಳಿಸಿದರು.

ಕಟ್ಟಡ ನಿರ್ಮಾಣಕ್ಕೆ ಆರ್ಥಿಕವಾಗಿ ಇನ್ನೂ ಹೆಚ್ಚಿನ ನೆರವು ಅಗತ್ಯವಿದೆ. ಈಗಾಗಲೇ ₹ 1.55 ಕೋಟಿ ಸಂಗ್ರಹವಾಗಿದೆ. ಈ ಹಣವನ್ನು ಠೇವಣಿ ಮಾಡಿ ಅದರಿಂದ ಸುಮಾರು ₹ 10 ರಿಂದ 15 ಲಕ್ಷ ಬಡ್ಡಿ ಬರುವಂತೆ ಮಾಡಿಕೊಂಡು ಕಟ್ಟಡ ನಿರ್ಮಾಣ ಮುಂದುವರಿಸಲಾಗುವುದು ಎಂದು ನುಡಿದರು.

ವಿದ್ಯಾರ್ಥಿಗಳ ಶೈಕ್ಷಣಿಕವಾಗಿ ಪ್ರೋತ್ಸಾಹಿಸುತ್ತಾ ಬಂದಿದೆ ಎಂದು ತಿಳಿಸಿ, ಎಲ್ಲರ ಸಹಕಾರ ಕೋರಿದರು.

ನಂದವರೀಕ ಟ್ರಸ್ಟ್‌ನ ಉಪಾಧ್ಯಕ್ಷ ಶಂಕರ ನಾರಾಯಣ ಮಾತನಾಡಿ, ‘ಕೋಲಾರದಲ್ಲಿ ಜಯರಾಂ ಅವರ ಸತತ ಪ್ರಯತ್ನದಿಂದ ಇಂದು ಸಂಘವು ವಾರ್ಷಿಕೋತ್ಸವ ಆಚರಿಸಿಕೊಳ್ಳುವಷ್ಟು ಮಟ್ಟಿಗೆ ಬೆಳೆದಿದೆ. ಸ್ವಂತ ಕಟ್ಟಡ ಹೊಂದುವಂತಾಗಿದೆ’ ಎಂದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ, ಪದವಿ, ಸ್ನಾತಕೋತ್ತರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದೊಂದಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ನಂದವರೀಕ ಟ್ರಸ್ಟ್ ಜಿಲ್ಲಾಧ್ಯಕ್ಷ ಎಂ.ವಿ.ಜಯರಾಂ, ಟ್ರಸ್ಟ್‌ನ ಮಧುಪ್ರಕಾಶ್, ಸುದರ್ಶನ್, ನಂಜುಂಡೇಶ್ವರ ಶರ್ಮ, ಸುಧಾ ಶ್ರೀನಿವಾಸನ್, ವೆಂಕಟನಾರಾಯಣ್, ಸುರೇಶ್ ರಾವ್, ಕಾಳಹಸ್ತಿ ನಾಗರಾಜ್, ನಾರಾಯಣ ಮೂರ್ತಿ, ಎಸ್.ರಾಮಚಂದ್ರಮೂರ್ತಿ, ಭಾಸ್ಕರ್, ಮಂಜುನಾಥ್, ಕಾಮಾಕ್ಷಿ, ರಾಜಕುಮಾರ್, ಆನಂದರಾವ್, ಶಾರದಾ ಶ್ರೀಕಾಂತ್, ಅಣ್ಣಾರಾವ್, ಹಾಬಿ ರಮೇಶ್, ಬೆಗ್ಲಿ ಮುರಳಿ, ಗೋಟೂರಿ ಶ್ರೀನಿವಾಸ್, ದಾನಿಗಳಾದ ಶ್ರೀಕಾಂತ್ ಇದ್ದರು. ಭಾರತಿ ರಾಜಕುಮಾರ್ ಪ್ರಾರ್ಥಿಸಿ, ಗುರುನಾರಾಯಣ ನಿರೂಪಿಸಿ, ರಾಮಪ್ರಸಾದ್ ಸ್ವಾಗತಿಸಿ, ವಾಸುದೇವ ಮೂರ್ತಿ ವಾರ್ಷಿಕ ವರದಿ ವಾಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.