ADVERTISEMENT

ಶಾಸಕ ನಂಜೇಗೌಡರ ಮಿದುಳು ಪಕ್ವವಿಲ್ಲ: ಎಸ್.ಮುನಿಸ್ವಾಮಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 14:44 IST
Last Updated 3 ಜನವರಿ 2020, 14:44 IST
ಎಸ್.ಮುನಿಸ್ವಾಮಿ
ಎಸ್.ಮುನಿಸ್ವಾಮಿ   

ಕೋಲಾರ: ‘ಕೋಚಿಮುಲ್‌ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ನಾನು ದಾಖಲೆಪತ್ರವಿಲ್ಲದೆ ಆರೋಪ ಮಾಡುತ್ತಿಲ್ಲ. ಕೋಚಿಮುಲ್‌ ಅಧ್ಯಕ್ಷರೂ ಆಗಿರುವ ಶಾಸಕ ನಂಜೇಗೌಡರ ಮಿದುಳು ಪಕ್ವವಾಗಿಲ್ಲ. ಅವರ ಬಗ್ಗೆ ಏನು ಮಾತನಾಡಲಿ’ ಎಂದು ಸಂಸದ ಎಸ್.ಮುನಿಸ್ವಾಮಿ ವ್ಯಂಗ್ಯವಾಡಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಂಜೇಗೌಡರ ಬಗ್ಗೆ ಏನೂ ಕೇಳಬೇಡಿ. ಅವರು ಏನೇನು ಮಾಡಿದ್ದಾರೆ ಎಂಬುದನ್ನು ದಾಖಲೆಪತ್ರ ಸಮೇತ ಬಹಿರಂಗಪಡಿಸುತ್ತೇನೆ’ ಎಂದು ತಿಳಿಸಿದರು.

‘ಕೇಂದ್ರ ಸರ್ಕಾರವು ಸದನದಲ್ಲಿ ಬಹುಮತದಿಂದ ಪೌರತ್ವ ಕಾಯ್ದೆ ಅಂಗೀಕರಿಸಿದೆ. ರಾಷ್ಟ್ರಪತಿಯವರ ಅಂಕಿತದೊಂದಿಗೆ ಈ ಕಾಯ್ದೆ ಜಾರಿಯಾಗುತ್ತಿದೆ. ಕಾಯ್ದೆ ಬೆಂಬಲಿಸಿ ಕೋಲಾರದಲ್ಲಿ ಶನಿವಾರ (ಜ.4) ಮೆರವಣಿಗೆ ನಡೆಸುತ್ತಿದ್ದು, ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.

ADVERTISEMENT

‘ಭಾರತೀಯ ಹಿತರಕ್ಷಣಾ ವೇದಿಕೆ ಹೆಸರಲ್ಲಿ ಎಲ್ಲರೂ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದು ಭಾರತೀಯರಿಗೆ ತೊಂದರೆ ಕೊಡುವ ಕಾಯ್ದೆಯಲ್ಲ. ಎಲ್ಲಾ ಜಾತಿ, ಧರ್ಮಗಳ ಪರವಾಗಿದೆ. 130 ಕೋಟಿ ಜನಸಂಖ್ಯೆಗೂ ಇದಕ್ಕೂ ಸಂಬಂಧವಿಲ್ಲ. 2014ರ ಡಿ.31ರೊಳಗೆ ದೇಶದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದವರನ್ನು ಪರಿಶೀಲಿಸಲು ಈ ಕಾಯ್ದೆ ಬಂದಿದೆಯೇ ಹೊರತು ಯಾರಿಗೂ ತೊಂದರೆ ಕೊಡುವುದಕ್ಕಲ್ಲ’ ಎಂದರು.

‘ಪೌರತ್ವ ಕಾಯಿದೆ ವಿರೋಧಿಸಿ ಬೇರೆ ಬೇರೆ ಪಕ್ಷದವರಿಗೆ ಮೆರವಣಿಗೆ ನಡೆಸಲು ಪೊಲೀಸ್ ಇಲಾಖೆ ಅನುಮತಿ ಕೊಟ್ಟಿಲ್ಲ ಎಂಬ ಮಾಹಿತಿಯಿದೆ. ಭಾರತೀಯ ಹಿತರಕ್ಷಣಾ ವೇದಿಕೆ ಮುಖಂಡರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ಮೆರವಣಿಗೆಗೆ ಅನುಮತಿ ಕೋರಿದ್ದಾರೆ’ ಎಂದು ಹೇಳಿದರು.

‘ಕ್ಲಾಕ್ ಟವರ್, ಡೂಂಲೈಟ್ ವೃತ್ತ, ಬಂಗಾರಪೇಟೆ ವೃತ್ತ, ಎಂ.ಜಿ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ವೃತ್ತವು ಭಾರತ ದೇಶದ ಆಸ್ತಿಯೇ ಹೊರತು ಯಾರೊಬ್ಬರ ಸ್ವತ್ತಲ್ಲ. ಈ ಮಾರ್ಗವಾಗಿ ಮೆರವಣಿಗೆ ನಡೆಸಲು ಹಕ್ಕಿದೆ. ನಾವು ಶಾಂತಿಯುತವಾಗಿ ಮೆರವಣಿಗೆ ನಡೆಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.