ADVERTISEMENT

ನರಸಾಪುರ ಸೊಸೈಟಿ ಚುನಾವಣೆ: ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳ ಜಯಭೇರಿ

ಜೆಡಿಎಸ್‌, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:14 IST
Last Updated 29 ಜನವರಿ 2026, 6:14 IST
ಕೋಲಾರ ತಾಲ್ಲೂಕಿನ ನರಸಾಪುರ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಖಾಜಿಕಲ್ಲಹಳ್ಳಿ ಮುನಿರಾಜು ನೇತೃತ್ವದಲ್ಲಿ ಸಂಭ್ರಮಿಸಿದರು
ಕೋಲಾರ ತಾಲ್ಲೂಕಿನ ನರಸಾಪುರ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಖಾಜಿಕಲ್ಲಹಳ್ಳಿ ಮುನಿರಾಜು ನೇತೃತ್ವದಲ್ಲಿ ಸಂಭ್ರಮಿಸಿದರು   

ಕೋಲಾರ: ತಾಲ್ಲೂಕಿನ ನರಸಾಪುರ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಕೂಟದ ಬೆಂಬಲಿತ ಅಭ್ಯರ್ಥಿಗಳಿಗೆ ನಿರಾಸೆ ಆಗಿದೆ.

ಸಂಘದ ಕಚೇರಿಯಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಖಾಜಿಕಲ್ಲಹಳ್ಳಿ ಮುನಿರಾಜು ನೇತೃತ್ವದ ತಂಡ ಗೆದ್ದಿದೆ.

ಒಟ್ಟು 12 ಸ್ಥಾನಗಳ ಪೈಕಿ 11 ಸ್ಥಾನ ಕಾಂಗ್ರೆಸ್‌ ಬೆಂಬಲಿತರ ಪಾಲಾಗಿವೆ. ಏಕೈಕ ಸ್ಥಾನವನ್ನು ಮೈತ್ರಿಕೂಟ ಗೆದ್ದಿದೆ. ಐದು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ಬೆಂಬಲಿತರು ಹಾಗೂ ಮುಖಂಡರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಖಾಜಿಕಲ್ಲಹಳ್ಳಿ ಮುನಿರಾಜು, ‘ನಮ್ಮ 11 ಅಭ್ಯರ್ಥಿಗಳು ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದೇವೆ. ಸಂಘಕ್ಕೆ ದೊಡ್ಡ ಕಟ್ಟಡ ಕಟ್ಟಿದ್ದು ಇದಕ್ಕೆ ಕಾರಣ. ನನ್ನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು 1,005 ವೋಟುಗಳು ಚಲಾವಣೆ ಆಗಿವೆ. ಅದರಲ್ಲಿ 125 ವೋಟು ತಿರಸ್ಕೃತವಾಗಿವೆ. 880 ವೋಟುಗಳ ಪೈಕಿ 670 ವೋಟು ನನಗೆ ಬಂದಿದೆ’ ಎಂದರು.

ಎದುರಾಳಿಗಳು ನಿತ್ಯ ಖ್ಯಾತೆ ತೆಗೆಯುತ್ತಿದ್ದರು. ಈ ಚುನಾವಣೆಯಲ್ಲಿ ನನ್ನನ್ನು ಸೋಲಿಸಿ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸ್ಥಾನ ಕಿತ್ತುಕೊಳ್ಳಲು ಸಂಚು ರೂಪಿಸಿದ್ದರು. ಸಂಘದ ಹಣ ಲೂಟ ಮಾಡಲಾಗಿದೆ ಎಂದು ನನ್ನ ಮೇಲೆ ಆರೋಪಿಸಿದರು. ಪ್ರತಿಭಟನೆ ಮಾಡಿದರು. ಆದರೆ, ಈಗ ಜನರು ನಮ್ಮನ್ನು ಗೆಲ್ಲಿಸುವ ಮೂಲಕ ವಿರೋಧಿಗಳನ್ನು ತಿರಸ್ಕರಿಸಿದ್ದಾರೆ. ನನ್ನನ್ನು ಆರೋಪ ಮುಕ್ತರನ್ನಾಗಿ ಮಾಡಿದ್ದಾರೆ ಎಂದರು.

ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಕೂಟದ ಬೆಂಬಲಿತ ಅಭ್ಯರ್ಥಿಗಳ ಪರ ಮಾಜಿ ಸಚಿವ ವರ್ತೂರು ಪ್ರಕಾಶ್‌, ಜೆಡಿಎಸ್‌ ಪರವಾಗಿ ಕುರ್ಕಿ ರಾಜೇಶ್ವರಿ ಪ್ರಚಾರ ನಡೆಸಿದ್ದರು. ಸಂಘದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದರು. ಈ ಸಂಬಂಧ ಕಾಂಗ್ರೆಸ್‌ ಹಾಗೂ ಮೈತ್ರಿಕೂಟದ ನಡುವೆ ಜಟಾಪಟಿ, ಆರೋಪ, ಪ್ರತ್ಯಾರೋಪ ನಡೆದಿತ್ತು.

ನರಸಾಪುರ ಸಂಘಕ್ಕೆ ಚುನಾಯಿತರು

ಕಾಂಗ್ರೆಸ್‌ ಬೆಂಬಲಿತರು: ಖಾಜಿಕಲ್ಲಹಳ್ಳಿ ಮುನಿರಾಜು‌ ಪೆಮ್ಮಶೆಟ್ಟಹಳ್ಳಿ ಸುರೇಶ್‌ ಚಂದ್ರೇಗೌಡ (ಅಣ್ಣಯ್ಯ) ಎಂ.ನಾರಾಯಣಸ್ವಾಮಿ ಕೆ.ಕೆ.ಮಂಜು (ಸಾಮಾನ್ಯ ಕ್ಷೇತ್ರ) ಆಂಜಿನಮ್ಮ ಜಮುನಾ (ಮಹಿಳಾ ಕ್ಷೇತ್ರ) ಗಣೇಶ್‌ ಮೋಟಪ್ಪ (ಬಿಸಿಎಂ ಎ ಕ್ಷೇತ್ರ) ಆದಿಮೂರ್ತಿ (ಎಸ್‌ಸಿ ಕ್ಷೇತ್ರ) ವೆಂಕಟಪ್ಪ (ಎಸ್‌ಟಿ ಕ್ಷೇತ್ರ). ಮೈತ್ರಿಕೂಟ: ಚಂದ್ರಶೇಖರ್ (ಷೇರುದಾರರ ಕ್ಷೇತ್ರ–ಸಾಲಗಾರರಲ್ಲದ ಕ್ಷೇತ್ರ)

ನನ್ನ ಮೇಲೆ ಸುಳ್ಳು ವಿಡಿಯೊ ಹಾಕಿದ್ದು ದೂರು ನೀಡಿದ್ದೇನೆ. ನನ್ನನ್ನು ತೇಜೋವದೆ ಮಾಡಿ ಅವಮಾನ ಮಾಡಿದ್ದಾರೆ. ₹ 10 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ
–ಖಾಜಿಕಲ್ಲಹಳ್ಳಿ ಮುನಿರಾಜು, ಡಿಸಿಸಿ ಬ್ಯಾಂಕ್‌ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.