ADVERTISEMENT

ವೇಮಗಲ್: ನಳ ನಳಿಸುತ್ತಿರುವ ರಾಗಿ ಪೈರು

ವೇಮಗಲ್ ಹೋಬಳಿ ರೈತರ ಮೊಗದಲ್ಲಿ ಸಂತಸ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 8:36 IST
Last Updated 7 ಸೆಪ್ಟೆಂಬರ್ 2025, 8:36 IST
ತಿಪ್ಪೇನಹಳ್ಳಿ ಗ್ರಾಮದಲ್ಲಿ ರೈತರೊಬ್ಬರ ರಾಗಿ ಹೊಲದಲ್ಲಿ ಅಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ರಾಗಿ ಪೈರು
ತಿಪ್ಪೇನಹಳ್ಳಿ ಗ್ರಾಮದಲ್ಲಿ ರೈತರೊಬ್ಬರ ರಾಗಿ ಹೊಲದಲ್ಲಿ ಅಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ರಾಗಿ ಪೈರು   

ವೇಮಗಲ್: ಕಳೆದರೆಡು ತಿಂಗಳ ಅವಧಿಯಲ್ಲಿ ನಿರೀಕ್ಷೆಗೂ‌ ಮೀರಿ ವಾಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದಾಗಿ ವೇಮಗಲ್ ಹೋಬಳಿ ವ್ಯಾಪ್ತಿಯಲ್ಲಿ ರೈತರು ಬಿತ್ತನೆ ಮಾಡಿದ ರಾಗಿ ಬೆಳೆಯು ಸೊಂಪಾಗಿ ಬೆಳೆದು ನಿಂತಿದ್ದು, ರೈತರ ಮೊಗದಲ್ಲಿ ಸಂತಸ ಅರಳುವಂತೆ ಮಾಡಿದೆ. 

ಕಳೆದ ಬಾರಿ ಕೈ ಕೊಟ್ಟಿದ್ದ ಮುಂಗಾರು ಮಳೆ ಈ ಬಾರಿ ರೈತರ ಕೈಹಿಡಿದಿದ್ದು, ವಾತಾವರಣ ಇದೇ ರೀತಿ ಮುಂದುವರಿದರೆ, ಉತ್ತಮ ಫಸಲು ಕೈಗೆ ಬರಲಿವೆ ಎಂದು ರೈತರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. 

ಹೋಬಳಿಯ ರೈತರು ಇಂದಿಗೂ ರಾಗಿ ಬೆಳೆಯನ್ನೇ ಪ್ರಧಾನವಾಗಿ ಬೆಳೆಯುತ್ತಾರೆ. ಜೋಳ, ಅವರೆ, ಹುಚ್ಚೆಳ್ಳು, ತೊಗರಿ ಮತ್ತು ಸಾಸಿವೆಯನ್ನೂ ಬೆಳೆಯುತ್ತಾರೆ. ಹೋಬಳಿಯ ಶೇ 70ರಷ್ಟು ರೈತರು ಮಳೆಯಾಧಾರಿತ ಕೃಷಿಯನ್ನೇ ನೆಚ್ಚಿಕೊಂಡು ವ್ಯವಸಾಯ ಮಾಡುತ್ತಿದ್ದಾರೆ. 

ADVERTISEMENT

ಕಳೆದ ಬಾರಿ ಇದೇ ಸಮಯಕ್ಕೆ ಮುಂಗಾರು ಕೊರತೆಯಿಂದ ರಾಗಿ ಬಿತ್ತನೆ ಮಾಡದೆ ಕೈಕಟ್ಟಿ ಕುಳಿತ್ತಿದ್ದರು. ಈ ಬಾರಿ ಮಳೆಯ ಆಗಮನದಿಂದ ಹೋಬಳಿಯ ರೈತರ ಮೊಗದಲ್ಲಿ ಮಂದಹಾಸ ಮನೆ ಮಾಡಿದೆ.

ಕ್ಯಾಲನೂರು, ಸೀತಿ, ಮದ್ದೇರಿ, ಬೈರಂಡಹಳ್ಳಿ, ಬೆಳಮಾರನಹಳ್ಳಿ, ತಿಪ್ಪೇನಹಳ್ಳಿ, ಕಲ್ವಮಂಜಲಿ, ವಲ್ಲಬ್ಬಿ, ಚೌಡದೇನಹಳ್ಳಿ, ಕರೇನಹಳ್ಳಿ, ಮಡಿವಾಳ, ಪುರಹಳ್ಳಿ ಹುಲ್ಲಂಕಲ್ಲು, ಶೆಟ್ಟಿಹಳ್ಳಿ, ಕಡಕಟ್ಟೂರು ಗ್ರಾಮಗಳಲ್ಲಿ ಬಿತ್ತನೆ ಪೂರ್ಣಗೊಂಡಿದ್ದು, ಕೆಲವು ಕಡೆ ನಾಲ್ಕೈದು ದಿನಗಳಲ್ಲಿ ಬಿತ್ತನೆ ಪೂರ್ಣಗೊಳ್ಳಲಿದೆ. ಇದಕ್ಕಾಗಿ ರೈತರು ಭೂಮಿ ಹದ ಮಾಡಿಕೊಂಡಿದ್ದಾರೆ. 

ಈ ಮೂಲಕ 71 ಗ್ರಾಮಗಳಲ್ಲಿ ಸುಮಾರು 1,700 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆತ್ತನೆಯಾಗಿದೆ. ವೇಮಗಲ್ ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿರುವ ಎಂಎಲ್–365 ತಳಿಯ ರಾಗಿಯನ್ನು ರೈತರು ಬಿತ್ತನೆ ಮಾಡುತ್ತಿದ್ದಾರೆ. 

ಮಳೆ ಹೆಚ್ಚಾಗಿ ರಾಗಿ ಬೆಳೆಗೆ ತೊಂದರೆ ಉಂಟಾದಲ್ಲಿ, ಬೆಳೆವಿಮೆ ಮಾಡಿಸಿರುವ ರೈತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಅಂತಹ ರೈತರು ವಿಮೆ ಸಹಾಯವಾಣಿ ಸಂಖ್ಯೆ 1800 425 6678ಗೆ ಕರೆ ಮಾಡಿ, ತಮ್ಮ ಬೆಳೆ ನಷ್ಟವನ್ನು ದಾಖಲಿಸಿ ಪರಿಹಾರ ಪಡೆದುಕೊಳ್ಳಬಹುದು ಎಂದು ಕೃಷಿ ಇಲಾಖೆ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.