ADVERTISEMENT

ಕೋಲಾರ | ಕ್ಲಾಕ್‌ಟವರ್‌ನಲ್ಲಿ ರಾಷ್ಟ್ರಧ್ವಜ ಹಾರಾಟ: ವಿವಾದಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2022, 13:34 IST
Last Updated 19 ಮಾರ್ಚ್ 2022, 13:34 IST
ಕೋಲಾರದ ಅತಿ ಸೂಕ್ಷ್ಮ ಪ್ರದೇಶ ಕ್ಲಾಕ್‌ಟವರ್‌ನಲ್ಲಿ ಶನಿವಾರ ಜಿಲ್ಲಾಡಳಿತದ ವತಿಯಿಂದ ರಾಷ್ಟ್ರಧ್ವಜ ಹಾರಿಸಲಾಯಿತು
ಕೋಲಾರದ ಅತಿ ಸೂಕ್ಷ್ಮ ಪ್ರದೇಶ ಕ್ಲಾಕ್‌ಟವರ್‌ನಲ್ಲಿ ಶನಿವಾರ ಜಿಲ್ಲಾಡಳಿತದ ವತಿಯಿಂದ ರಾಷ್ಟ್ರಧ್ವಜ ಹಾರಿಸಲಾಯಿತು   

ಕೋಲಾರ: ಜಿಲ್ಲಾ ಕೇಂದ್ರದ ಅತಿ ಸೂಕ್ಷ್ಮ ಪ್ರದೇಶ ಕ್ಲಾಕ್‌ಟವರ್‌ನಲ್ಲಿ ಜಿಲ್ಲಾಡಳಿತವು ಮುಸ್ಲಿಂ ಸಮುದಾಯದ ಸಹಕಾರದೊಂದಿಗೆ ಶನಿವಾರ ರಾಷ್ಟ್ರಧ್ವಜ ಹಾರಿಸುವ ಮೂಲಕ ದಶಕಗಳ ವಿವಾದಕ್ಕೆ ತೆರೆ ಎಳೆಯಿತು.

ಕ್ಲಾಕ್‌ಟವರ್ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಹಿಂದೆ ಕ್ಲಾಕ್‌ಟವರ್‌ ಮಾರ್ಗದಲ್ಲಿ ಹಿಂದೂಪರ ಸಂಘಟನೆಗಳ ಮೆರವಣಿಗೆ ಹಾಗೂ ಹಿಂದೂಗಳ ಜನವಸತಿ ಪ್ರದೇಶದಲ್ಲಿ ಮುಸ್ಲಿಮರ ಮೆರವಣಿಗೆ ಮೇಲೆ ಕಲ್ಲು ತೂರಿದ ಘಟನೆಗಳು ನಡೆದಿವೆ. ಆಗಿನಿಂದ ಸೂಕ್ಷ್ಮ ಪ್ರದೇಶವಾಗಿ ಬದಲಾದ ಕ್ಲಾಕ್‌ಟವರ್ ವಿವಾದದ ಕೇಂದ್ರ ಬಿಂದುವಾಗಿತ್ತು.

ಈ ನಡುವೆ ಕ್ಲಾಕ್‌ಟವರ್‌ಗೆ ಕೇಸರಿ, ಬಿಳಿ, ಹಸಿರು ಬಣ್ಣ ಬಳಿದು ರಾಷ್ಟ್ರಧ್ವಜ ಹಾರಿಸುವಂತೆ ಆಗ್ರಹಿಸಿ ಸೋಮವಾರದಿಂದ (ಮಾರ್ಚ್‌ 21) ಧರಣಿ ನಡೆಸುವುದಾಗಿ ಸಂಸದ ಎಸ್‌.ಮುನಿಸ್ವಾಮಿ ಗುಡುಗಿದ್ದರು. ಇದಕ್ಕೆ ಅವಕಾಶ ನೀಡದ ಜಿಲ್ಲಾಡಳಿತವು ಮುಸ್ಲಿಂ ಸಮುದಾಯ ಹಾಗೂ ಅಂಜುಮಾನ್‌ ಇಸ್ಲಾಮಿಯ ಸಂಘಟನೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಲಾಕ್‌ಟವರ್‌ನಲ್ಲಿ ಶನಿವಾರ ರಾಷ್ಟ್ರಧ್ವಜ ಹಾರಿಸುವ ಮೂಲಕ ಶಾಂತಿಯುತವಾಗಿ ವಿವಾದ ಅಂತ್ಯಗೊಳಿಸಿತು.

ADVERTISEMENT

ಜಿಲ್ಲಾಡಳಿತವು ಕ್ಲಾಕ್‌ಟವರ್‌ನಲ್ಲಿನ ಮುಸ್ಲಿಂ ಧರ್ಮದ ಧ್ವಜ ತೆರವುಗೊಳಿಸಿ ರಾಷ್ಟ್ರ ಧ್ವಜಾರೋಹಣಕ್ಕೆ ಸಿದ್ಧತೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣವಿತ್ತು. ಕ್ಲಾಕ್‌ಟವರ್‌ಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಬಂದ್‌ ಮಾಡಿ ಹಾಗೂ ಬಿಗಿ ಪೊಲೀಸ್‌ ಭದ್ರತೆಯೊಂದಿಗೆ ಪರಿಸ್ಥಿತಿ ನಿಯಂತ್ರಿಸಲಾಯಿತು. ರಾಷ್ಟ್ರ ಧ್ವಜಾರೋಹಣದ ವೇಳೆ ಮುಸ್ಲಿಂ ಸಮುದಾಯದವರು ‘ಹಿಂದೂಸ್ತಾನ್‌ ಜಿಂದಾಬಾದ್‌’ ಘೋಷಣೆ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.