
ಕೋಲಾರ: ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಆಮೆ ವೇಗದಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಜನಾಕ್ರೋಶ ವ್ಯಕ್ತವಾಗುತ್ತಿದೆ. ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ಅಧಿಕಾರಿಗಳು, ಗುತ್ತಿಗೆದಾರರು ಸ್ಪಂದಿಸಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಂಸದ ಎಂ.ಮಲ್ಲೇಶ್ ಬಾಬು ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ಜನಪ್ರತಿನಿಧಿಗಳ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ಕೊಳತೂರು ಜಂಕ್ಷನ್‌ನಿಂದ ನಂಗಲಿ ಅಂಚಿನ ನಡುವೆ ಸುಗಮ ಸಂಚಾರಕ್ಕೆ ಹೆದ್ದಾರಿ ರಸ್ತೆ ಕಾಮಗಾರಿ ವಿಳಂಬವಾಗುತ್ತಿರುವುದು ತೊಂದರೆ ತಂದೊಡ್ಡಿದೆ. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ಬೆಂಗಳೂರು–ತಿರುಪತಿ ಹೆದ್ದಾರಿಯಲ್ಲಿ ನಂಗಲಿ ರಸ್ತೆವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಕಾಮಗಾರಿಯನ್ನು 2026ರ ಜನವರಿ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಅವರು ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕ ಜಯಕುಮಾರ್ ಅವರಿಗೆ ಸೂಚಿಸಿದರು.
ನಗರ ವ್ಯಾಪ್ತಿಗೆ ಸಂಬಂಧಿಸಿದಂತೆ ಸುಮಾರು 19 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯು 16 ಹಳ್ಳಿಗಳ ಮೂಲಕ ಹಾದು ಹೋಗಲಿದೆ. ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಕಾಮಗಾರಿ ಕೈಗೊಳ್ಳಬೇಕು ಎಂದರು.
ಬೆಳ್ಳೂರು, ನರಸಾಪುರ, ಎಪಿಎಂಸಿ, ವಡಗೂರು, ತಂಬಿಹಳ್ಳಿ, ನರಸಿಂಹ ತೀರ್ಥ, ಒಡ್ಡಹಳ್ಳಿ ವರೆಗಿನ ಒಟ್ಟಾರೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಫೆಬ್ರುವರಿ ಅಂತ್ಯದ ವೇಳೆಗೆ ಪೂರ್ಣಗೊಳಿಸಿ ವಿದ್ಯುತ್, ಸಿ.ಸಿ ಕ್ಯಾಮೆರಾ, ರಸ್ತೆ ಸುರಕ್ಷಾ ಕ್ರಮಗಳು ಸೇರಿದಂತೆ ಸಮಗ್ರ ರಸ್ತೆ ಅಭಿವೃದ್ಧಿ ಮಾಡಿ ತೋರಿಸಲು ಅವರು ಎಲ್ಲಾ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶಾಸಕ ಕೊತ್ತೂರು ಜಿ.ಮಂಜುನಾಥ್ ಮಾತನಾಡಿ, ಟೇಕಲ್ ರಸ್ತೆಯಲ್ಲಿ ಸರ್ವಿಸ್ ರಸ್ತೆ ವಿಸ್ತರಣೆ ಮಾಡಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು, ಎಪಿಎಂಸಿ ಪ್ರಾಂಗಣದ ಸುತ್ತ ರಸ್ತೆಗುಂಡಿಗಳು ತುಂಬಾ ಇವೆ. ಇವುಗಳನ್ನು ಮುಚ್ಚುವುದರ ಜೊತೆಗೆ ಶೀಘ್ರವೇ ರಸ್ತೆ ಕಾಮಗಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಸಭೆಗೆ ತಿಳಿಸಿದರು.
ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್, ಕೋಲಾರ-ತಿರುಪತಿ ಮಾರ್ಗದಲ್ಲಿ ಮುಳಬಾಗಿಲು ಸಮೀಪ ಅಪಘಾತಗಳು ಹೆಚ್ಚಾಗಿದ್ದು ಇದರಿಂದ ಪ್ರಾಣಹಾನಿ ಆಗುತ್ತಿವೆ. ಇದನ್ನು ತಡೆಯಲು ಸಂಬಂಧಿಸಿದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದರು.
ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿ, ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿಯಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅನೇಕ ರಸ್ತೆಗುಂಡಿಗಳಿದ್ದು, ಲೋಕೋಪಯೋಗಿ ಇಲಾಖೆ ಶೀಘ್ರದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಧಾನ ವ್ಯವಸ್ಥಾಪಕ (ತಂತ್ರಜ್ಞಾನ) ವಿ.ಪಿ.ಬ್ರಹ್ಮಾಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಗುತ್ತಿಗೆದಾರರು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇದ್ದರು.
36 ಬ್ಲಾಕ್ ಸ್ಪಾಟ್ ಗುರುತು
ನರಸಾಪುರ–ಮುಳಬಾಗಿಲು ಕೋಲಾರ ಬೈಪಾಸ್ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿರುವ ರಸ್ತೆ ಕೆಳ ಸೇತುವೆಗಳಲ್ಲಿ ಬೆಳಕಿನ ವ್ಯವಸ್ಥೆ ಸೇರಿದಂತೆ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಅಪಘಾತಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ವ್ಯಾಪ್ತಿಯಲ್ಲಿ 36 ಬ್ಲಾಕ್ ಸ್ಪಾಟ್ ಗುರುತಿಸಿದ್ದು ಈ ಪ್ರದೇಶಗಳಲ್ಲಿ ಬೆಳಕಿನ ವ್ಯವಸ್ಥೆ ಎಚ್ಚರಿಕೆ ಫಲಕಗಳು ಪೇಂಟಿಂಗ್ ಹಾಗೂ ಸುರಕ್ಷತಾ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು. ಅಪಘಾತ ಸಂದರ್ಭದಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಲ್ಲೇಶ್ ಬಾಬು ಸೂಚನೆ ನೀಡಿದರು. ಬಹಳಷ್ಟು ಬಾರಿ ಕಾಮಗಾರಿ ವಿಳಂಬ ಕುರಿತು ಎಚ್ಚರಿಕೆ ನೀಡಿದ್ದಾಗ್ಯೂ ಸಾಕಷ್ಟು ಕ್ರಮ ವಹಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.