ADVERTISEMENT

ಮುಳಬಾಗಿಲು | ಕುರಿ–ಮೇಕೆ ಹುಲ್ಲುಗಾವಲಾದ ಉದ್ಯಾನ!

ಮೂಲ‌ ಸೌಕರ್ಯಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ * ಪುಂಡರ ಅಡ್ಡೆಯಾಗಿ ಮಾರ್ಪಾಡು

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 2:48 IST
Last Updated 11 ಆಗಸ್ಟ್ 2025, 2:48 IST
ಮುಳಬಾಗಿಲು ಸೋಮೇಶ್ವರ ಪಾಳ್ಯದ ಉದ್ಯಾನ ಸುತ್ತಲೂ ಬಳ್ಳಿಗಳು ವ್ಯಾಪಿಸಿಕೊಂಡಿರುವುದು
ಮುಳಬಾಗಿಲು ಸೋಮೇಶ್ವರ ಪಾಳ್ಯದ ಉದ್ಯಾನ ಸುತ್ತಲೂ ಬಳ್ಳಿಗಳು ವ್ಯಾಪಿಸಿಕೊಂಡಿರುವುದು   

ಮುಳಬಾಗಿಲು: ಈಚೆಗೆ ನಾಲ್ಕು ವರ್ಷಗಳ ಹಿಂದೆ ನಿರ್ಮಾಣವಾದ ನಗರದ ಸೋಮೇಶ್ವರಪಾಳ್ಯದ ಉದ್ಯಾನ ನಿರ್ವಹಣೆ ಕೊರತೆಯಿಂದ ಒಂದು ಕಡೆ ಪುಂಡ ಪೋಕರಿಗಳ ತಾಣವಾಗುತ್ತಿದ್ದರೆ, ಮತ್ತೊಂದು ಕಡೆ ಉದ್ಯಾನ ಸಂಪೂರ್ಣವಾಗಿ ಅವನತಿಯತ್ತ ಸಾಗುತ್ತಿದೆ. ಇದರಿಂದ ಸರ್ಕಾರದ ಲಕ್ಷಾಂತರ ರೂಪಾಯಿ ಹಣ ವ್ಯರ್ಥವಾಗಿದೆ.

ಈಚೆಗೆ ನಾಲ್ಕು ವರ್ಷಗಳ ಹಿಂದೆ ಶಾಸಕರಾಗಿದ್ದ ಎಚ್.ನಾಗೇಶ್ ಅವರು ನಗರದ ಹೆದ್ದಾರಿಯಲ್ಲಿ ಸುಸಜ್ಜಿತವಾದ ಉದ್ಯಾನ ಸ್ಥಾಪಿಸಿ, ಸೋಮೇಶ್ವರ ಪಾಳ್ಯದ ಕೆರೆಯಲ್ಲಿ ಬೋಟಿಂಗ್ ಮತ್ತಿತರರ ಸೌಲಭ್ಯ ಕಲ್ಪಿಸಿದ್ದರು. ಅತ್ಯಾಕರ್ಷಕವಾಗಿ ಕೆರೆ ಹಾಗೂ ಉದ್ಯಾನ ನಗರದ ಆಕರ್ಷಣೆ ಕೇಂದ್ರವಾಗಿ ರೂಪುಗೊಂಡಿತ್ತು. ಲಕ್ಷಾಂತರ ವೆಚ್ಚದಲ್ಲಿ ಮೂಲ‌ ಸೌಕರ್ಯ ಒದಗಿಸಲಾಗಿತ್ತು. 

ಉದ್ಯಾನದಲ್ಲಿ ವಾಕಿಂಗ್ ಬರುವವರಿಗೆ, ಮಕ್ಕಳಿಗೆ, ವಯೋವೃದ್ಧರ ವಾಯುವಿಹಾರಕ್ಕೆ, ಮಕ್ಕಳ ಆಟ ಪಾಠಗಳಿಗೆ, ಮಾನಸಿಕ ಒತ್ತಡ ಕಳೆಯಲು, ಮಹಿಳೆಯರು ಕೂತು ವಿಶ್ರಾಂತಿ ಪಡೆಯಲು ಹೀಗೇ ನಗರ ಜೀವನದಲ್ಲಿನ ಒತ್ತಡಗಳನ್ನು ಕಳೆಯಲು, ಸಾರ್ವಜನಿಕರ ಆಹ್ಲಾದಕರ ಸ್ಥಳವಾಗಿ ಇರಬೇಕಾಗಿದ್ದ ಉದ್ಯಾನ ಈಗ ಹಾಳಾಗಿದೆ.

ADVERTISEMENT

ಸದಾ ಬೀಡಿ ಸಿಗರೇಟು ಸೇದುವ, ಗುಟ್ಕಾ ಅಗೆದು ಉಗುಳವ, ಕೆಲವರು ಮೇಕೆಗಳನ್ನು ಮೇಯಿಸುವ ತಾಣವಾಗಿದೆ. ಮಹಿಳೆಯರು ಹಾಗೂ ಚಿಕ್ಕ ಮಕ್ಕಳು ಒಂಟಿಯಾಗಿ ಉದ್ಯಾನಕ್ಕೆ ಹೋಗಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ.

ಉದ್ಯಾನದಲ್ಲಿ ಲಾಂಟಾನ ಗಿಡಗಳು, ಎಕ್ಕೆ ಗಿಡ ಸೇರಿದಂತೆ ನಾನಾ ಜಾತಿ ಬಳ್ಳಿಗಳು, ಒಣಗಿದ ರೆಂಬೆ ಕೊಂಬೆಗಳು, ಅಲ್ಲಲ್ಲಿ ಮುರಿದು ಹೋಗಿರುವ ಕಬ್ಬಿಣದ ಕಾಂಪೌಂಡ್, ತಗಡಿನ ಕಂಬಿಗಳು, ಸದಾ ಬೀಗ ಜಡಿದಿರುವ ಶೌಚಾಲಯ, ಎಲ್ಲಿ ನೋಡಿದರೂ ಕುರಿ–ಮೇಕೆಗಳ ಹಿಕ್ಕೆ ಹೀಗೇ ಉದ್ಯಾನ ನಾನಾ ರೀತಿಯಲ್ಲಿ ಸಮಸ್ಯೆಗಳನ್ನು ಹೊತ್ತು ನಿಂತಿದೆ.

ಮುರಿದು ಬಿದ್ದಿರುವ ಆಟದ ಜೋಕಾಲಿ: ಸರ್ಕಾರ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಉದ್ಯಾನದಲ್ಲಿ ನಾನಾ ಬಗೆಯ ಕಬ್ಬಿಣದ ಆಟದ ಸಾಮಾನು ಅಳವಡಿಸಿದೆ. ಆದರೆ, ಜೋಕಾಲಿ ಆಡುವ ಬೃಹತ್ತಾದ ಕಬ್ಬಿಣದ ಆಟದ ಉಯ್ಯಾಲೆ ಸುಮಾರು ತಿಂಗಳುಗಳಿಂದ ಮುರಿದು ಕೆಳಗೆ ಬಿದ್ದಿದೆ. ಜೋಕಾಲಿಯನ್ನು ದುರಸ್ತಿಪಡಿಸುವುದಾಗಲಿ ಅಥವಾ ರಕ್ಷಣೆ ಮಾಡುವುದಾಗಲಿ ಮಾಡಿಲ್ಲ. ಕೆಳಗೆ ಬಿದ್ದಿರುವ ಭಾರಿ ತೂಕದ ಜೋಕಾಲಿ ಅನಾಥವಾಗಿದೆ. ಇನ್ನು ನಾನಾ ಬಗೆಯ ಆಟದ ಸಲಕರಣೆಗಳಿಗೆ ಬೇರಿಂಗ್ ಜಾಗಗಳಿಗೆ ಆಯಿಲ್ ಹಾಕುವುದಾಗಲಿ ಅಥವಾ ಕಾಲಕ್ಕೆ ಅಧಿಕಾರಿಗಳು ಪರಿಶೀಲಿಸುವುದಾಗಲಿ ಮಾಡದ ಕಾರಣ ಸಲಕರಣೆಗಳು ತುಕ್ಕು ಹಿಡಿದಿವೆ.

ಮುರಿದಿರುವ ಕಬ್ಬಿಣದ ಗ್ರಿಲ್ ಕಾಂಪೌಂಡ್: ಉದ್ಯಾನ ಸುತ್ತಲೂ ಕಬ್ಬಿಣದ ಗ್ರಿಲ್ ಮಾದರಿಯಲ್ಲಿ ಕಾಂಪೌಂಡ್ ಅಳವಡಿಸಲಾಗಿದೆ. ಆದರೆ, ರುದ್ರಭೂಮಿ ಕಡೆಗೆ ಇರುವ ಕಾಂಪೌಂಡ್‌ ಅನ್ನು ಕೆಲವರು ಮುರಿದು ಹಾಕಿದ್ದಾರೆ. ಇದರಿಂದ ಜಾನುವಾರು ಒಳಗೆ ಹೋಗಿ ಬರುವಂತ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಕಾಂಪೌಂಡ್ ಸುತ್ತಲೂ ನಾನಾ ಬಗೆಯ ಬಳ್ಳಿಗಳು ಕಬ್ಬಿಣದ ಗ್ರಿಲ್ ಕಾಂಪೌಂಡ್ ಕಾಣಿಸದಂತೆ ವ್ಯಾಪಿಸಿಕೊಂಡಿವೆ.

ಒಣಗಿ ನಿಂತಿರುವ ಗಿಡಗಳು: ಉದ್ಯಾನದಲ್ಲಿ 2024-25ರಲ್ಲಿ ಮುಳಬಾಗಿಲು ವಲಯ ಅರಣ್ಯ ಇಲಾಖೆಯಿಂದ ಹಸರೀಕರಣ ಯೋಜನೆಯಲ್ಲಿ 300 ಗಿಡಗಳನ್ನು ನಾಟಿ‌ ಮಾಡಲಾಗಿದೆ. ಆದರೆ, ನಾಟಿ ಮಾಡಿರುವ ಸಸಿಗಳಿಗೆ ‌ಬೇಲಿ ಹಾಗೂ ಸಮಯಕ್ಕೆ ನೀರು ಹಾಕದೆ ಇರುವ ಕಾರಣದಿಂದ ಬಹುತೇಕ ಸಸಿಗಳು ಒಣಗಿ ನಿಂತಿದ್ದರೆ, ಕೆಲವು ಗಿಡಗಳಿಗೆ ಸುಳಿಯೇ ಇಲ್ಲದಂತೆ ಪೋಕರಿಗಳು ಮುರಿದು ಹಾಕಿದ್ದಾರೆ.

ಸದಾ ಬೀಗ ಜಡಿದಿರುವ ಶೌಚಾಲಯ: ಉದ್ಯಾನದೊಳಗಿನ ಶೌಚಾಲಯ ಸದಾ ಬೀಗ ಜಡಿದಿದ್ದು, ವಾರದ ರಜಾ ದಿನಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಉದ್ಯಾನಕ್ಕೆ ಬರುವ ವಾಯು ವಿಹಾರಿಗಳು ಶೌಚಾಲಯ ಸಮಸ್ಯೆಯಿಂದ ಬಳಲುವಂತಾಗಿದೆ.

ಉದ್ಯಾನದಲ್ಲಿ ಗಿಡಗಂಟಿ: ಉದ್ಯಾನವನ್ನು ಸೂಕ್ತವಾದ ರೀತಿಯಲ್ಲಿ ಸ್ವಚ್ಛತೆ ಮಾಡದ ಪರಿಣಾಮ ಇಡೀ ಉದ್ಯಾನದಲ್ಲಿ ಗಿಡಗಳು ಬೆಳೆದು ನಿಂತಿದ್ದರೆ, ವಾಕಿಂಗ್ ಪಾಥಲ್ಲಿ ಎಕ್ಕೆ ಗಿಡಗಳು, ಲಾಂಟಾನದ ಗಿಡಗಳು ಎತ್ತರಕ್ಕೆ ಬೆಳೆದು ನಿಂತಿವೆ. ವಾಕಿಂಗ್ ಮಾಡಲಾಗದಂತೆ ಅಡ್ಡಲಾಗಿವೆ.

ಉದ್ಯಾನದಲ್ಲಿ ಕಸ ಕಡ್ಡಿ: ಉದ್ಯಾನದಲ್ಲಿ ಪ್ಲಾಸ್ಟಿಕ್ ಮತ್ತಿತರರ ಆಹಾರದ ವಸ್ತುಗಳನ್ನು ಸ್ವಚ್ಛ ಮಾಡದೆ ಇರುವುದರಿಂದ ಉದ್ಯಾನದಲ್ಲಿ ಎಲ್ಲೆಂದರಲ್ಲಿ ಕಸ ಕಡ್ಡಿಯಿಂದ ತುಂಬಿದೆ.  

ಉದ್ಯಾನದಲ್ಲಿ ಮುರಿದು ಬಿದ್ದಿರುವ ಆಟದ ಸಾಮಾನು
ಉದ್ಯಾನದಲ್ಲಿ ನಿರ್ವಹಣೆ ಇಲ್ಲದೆ ಒಣಗಿ ನಿಂತಿರುವ ಮರ
ವಾಯು ವಿಹಾರ ಜಾಗದಲ್ಲಿ ಬೆಳೆದಿರುವ ಎಕ್ಕೆಗಿಡ
ಸದಾ ಬೀಗ ಜಡಿದಿರುವ ಶೌಚಾಲಯ 

ಉದ್ಯಾನವನ ನಿರ್ಮಿಸಿದ ಗುತ್ತಿಗೆದಾರರು ಇನ್ನೂ ನಗರಸಭೆಗೆ ಹಸ್ತಾಂತರಿಸಿಲ್ಲ. ನಿರ್ವಹಣೆ ನಮಗೆ ಸೇರುವುದಿಲ್ಲ. ಈ ಕುರಿತು ಮಾಹಿತಿ ನೀಡಲಾಗುವುದು ವಿ.ಶ್ರೀಧರ್ ನಗರಸಭೆ ಪೌರಾಯುಕ್ತಉದ್ಯಾನವನ ನಿರ್ಮಿಸಿದ ಗುತ್ತಿಗೆದಾರರು ಇನ್ನೂ ನಗರಸಭೆಗೆ ಹಸ್ತಾಂತರಿಸಿಲ್ಲ. ನಿರ್ವಹಣೆ ನಮಗೆ ಸೇರುವುದಿಲ್ಲ. ಈ ಕುರಿತು ಮಾಹಿತಿ ನೀಡಲಾಗುವುದು ವಿ.ಶ್ರೀಧರ್ ನಗರಸಭೆ ಪೌರಾಯುಕ್ತ

ಉದ್ಯಾನವನ ನಿರ್ಮಿಸಿದ ಗುತ್ತಿಗೆದಾರರು ಇನ್ನೂ ನಗರಸಭೆಗೆ ಹಸ್ತಾಂತರಿಸಿಲ್ಲ. ನಿರ್ವಹಣೆ ನಮಗೆ ಸೇರುವುದಿಲ್ಲ. ಈ ಕುರಿತು ಮಾಹಿತಿ ನೀಡಲಾಗುವುದು
ವಿ.ಶ್ರೀಧರ್ ನಗರಸಭೆ ಪೌರಾಯುಕ್ತ

ಉದ್ಯಾನ ಅವನತಿಯತ್ತ ಉದ್ಯಾನ  ಕೋಲಾರದ ಕಡೆಗೆ ಹೋಗುವ ಮುಖ್ಯ ರಸ್ತೆ ಪಕ್ಕದಲ್ಲೇ ಮಾಜಿ ಶಾಸಕ ಎಚ್.ನಾಗೇಶ್ ಅಚ್ಚುಕಟ್ಟಾಗಿ ಉದ್ಯಾನವನ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಲು ಪ್ರಯತ್ನಿಸಿದ್ದರು. ಆದರೆ ಉದ್ಯಾನವನ್ನು ಅಧಿಕಾರಿಗಳು ಸೂಕ್ತವಾದ ರೀತಿಯಲ್ಲಿ ನಿರ್ವಹಣೆ ಮಾಡದೆ ಇರುವ ಕಾರಣದಿಂದ ಉದ್ಯಾನ ಅವನತಿಯತ್ತ ಸಾಗುತ್ತಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಯಲವಹಳ್ಳಿ ಪ್ರಭಾಕರ್ ವಾಯುವಿಹಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.