ADVERTISEMENT

ಬಿಸಿಲು– ಮಳೆಯಿಂದ ಬೇಸತ್ತ ಪ್ರಯಾಣಿಕರಿಗೆ ಸಿಹಿ ಸುದ್ದಿ

ಪ್ರಯಾಣಿಕರ ಸಂಕಷ್ಟಕ್ಕೆ ಕಣ್ತೆರೆದ ಕುಡಾ: ತಂಗುದಾಣ ನಿರ್ಮಾಣಕ್ಕೆ ಚಿಂತನೆ

ಜೆ.ಆರ್.ಗಿರೀಶ್
Published 2 ಸೆಪ್ಟೆಂಬರ್ 2018, 14:38 IST
Last Updated 2 ಸೆಪ್ಟೆಂಬರ್ 2018, 14:38 IST
ಕೋಲಾರದ ಟೇಕಲ್‌ ರಸ್ತೆಯ ಪೇಟೆಚಾಮನಹಳ್ಳಿ ವೃತ್ತದಲ್ಲಿ ಪ್ರಯಾಣಿಕರ ತಂಗುದಾಣವಿಲ್ಲದ ಕಾರಣ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಯಲಿನಲ್ಲೇ ಬಸ್‌ಗೆ ಕಾದು ನಿಂತಿರುವುದು.
ಕೋಲಾರದ ಟೇಕಲ್‌ ರಸ್ತೆಯ ಪೇಟೆಚಾಮನಹಳ್ಳಿ ವೃತ್ತದಲ್ಲಿ ಪ್ರಯಾಣಿಕರ ತಂಗುದಾಣವಿಲ್ಲದ ಕಾರಣ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಯಲಿನಲ್ಲೇ ಬಸ್‌ಗೆ ಕಾದು ನಿಂತಿರುವುದು.   

ಕೋಲಾರ: ಉರಿವ ಬಿಸಿಲು ಸುರಿವ ಮಳೆಯಲ್ಲಿ ಬಸ್‌ಗಾಗಿ ಬಯಲಲ್ಲಿ ಕಾದು ನಿಂತು ಬೇಸತ್ತಿರುವ ನಗರದ ಪ್ರಯಾಣಿಕರಿಗೆ ಸಿಹಿ ಸುದ್ದಿ ಕಾದಿದೆ. ಇನ್ನು ಮುಂದೆ ಪ್ರಯಾಣಿಕರಿಗೆ ಬಿಸಿಲು ಮಳೆಯ ಬಾಧೆಯಿಲ್ಲ.

ಪ್ರಯಾಣಿಕರ ಸಂಕಷ್ಟ ಅರಿತಿರುವ ನಗರಾಭಿವೃದ್ಧಿ ಪ್ರಾಧಿಕಾರವು (ಕುಡಾ) ನಗರದ ವಿವಿಧೆಡೆ ಪ್ರಯಾಣಿಕರ ತಂದುದಾಣ ನಿರ್ಮಿಸಲು ಮುಂದಾಗಿದೆ. ಬಸ್‌ ನಿಲ್ದಾಣಗಳ ಬಳಿ ತಂಗುದಾಣ ನಿರ್ಮಿಸಬೇಕೆಂಬುದು ಪ್ರಯಾಣಿಕರ ಹಲವು ವರ್ಷಗಳ ಬೇಡಿಕೆಯಾಗಿತ್ತು.

ನಗರವು ಸುಮಾರು 30 ಚದರ ಕಿ.ಮೀ ವಿಸ್ತಾರವಾಗಿದ್ದು, ಜನಸಂಖ್ಯೆ 2 ಲಕ್ಷದ ಗಡಿ ದಾಟಿದೆ. ಆರ್ಥಿಕವಾಗಿ ಸ್ಥಿತಿವಂತರಾದವರು ಪ್ರಯಾಣಕ್ಕೆ ಸ್ವಂತ ವಾಹನಗಳನ್ನು ಅವಲಂಬಿಸಿದ್ದಾರೆ. ಆದರೆ, ಬಡ ಹಾಗೂ ಮಧ್ಯಮ ವರ್ಗದವರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ನಗರ ಸಾರಿಗೆ ಬಸ್‌ಗಳನ್ನು ಅವಲಂಬಿಸಿದ್ದಾರೆ. ಮತ್ತೊಂದೆಡೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಹ ಹೆಚ್ಚಿನ ಪ್ರಮಾಣದಲ್ಲಿ ನಗರ ಸಾರಿಗೆ ಬಸ್‌ಗಳಲ್ಲೇ ಪ್ರಯಾಣಿಸುತ್ತಾರೆ.

ADVERTISEMENT

ಆದರೆ, ನಗರದಲ್ಲಿ ಪ್ರಯಾಣಿಕರ ತಂಗುದಾಣಗಳಿಲ್ಲದೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿತ್ತು. ಮಳೆ ಹಾಗೂ ಬಿಸಿಲಿನಿಂದ ರಕ್ಷಣೆ ಪಡೆಯಲು ಪ್ರಯಾಣಿಕರು ರಸ್ತೆ ಬದಿಯ ಮರಗಳು ಅಥವಾ ಕಟ್ಟಡಗಳನ್ನು ಆಶ್ರಯಿಸುತ್ತಿದ್ದಾರೆ. ಆದರೆ, ಮಳೆ ಪ್ರಮಾಣ ಹೆಚ್ಚಿದ ಸಂದರ್ಭದಲ್ಲಿ ಪ್ರಯಾಣಿಕರ ಗೋಳು ಹೇಳತೀರದು.

ತಂಗುದಾಣ ನಿರ್ಮಾಣಕ್ಕೆ ಒತ್ತಾಯಿಸಿ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಕಚೇರಿ, ನಗರಸಭೆ ಕಚೇರಿಗೆ ಅಲೆದರೂ ಪ್ರಯೋಜನವಾಗಿರಲಿಲ್ಲ. ಅಂತಿಮವಾಗಿ ಪ್ರಯಾಣಿಕರ ಸಮಸ್ಯೆಗೆ ಕಣ್ತೆರೆದಿರುವ ನಗರಾಭಿವೃದ್ಧಿ ಪ್ರಾಧಿಕಾರವು ಹೆಚ್ಚಿನ ಬಸ್‌ ಸಂಚಾರ ಮತ್ತು ಪ್ರಯಾಣಿಕರ ದಟ್ಟಣೆ ಇರುವ ಸ್ಥಳಗಳು ಹಾಗೂ ಹೊರ ಊರುಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳ ಪಕ್ಕದಲ್ಲಿ ತಂಗುದಾಣ ನಿರ್ಮಿಸಲು ಸಜ್ಜಾಗಿದೆ.

ಜಾಗ ಗುರುತು: ತಂಗುದಾಣ ನಿರ್ಮಾಣಕ್ಕೆ ಜಾಗ ನೀಡುವಂತೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಾಜುದ್ದೀನ್‌ ಖಾನ್‌ ಅವರು ನಗರಸಭೆಗೆ ಪತ್ರ ಬರೆದಿದ್ದಾರೆ. ನಗರಸಭೆ ಅಧಿಕಾರಿಗಳು ತಂಗುದಾಣಕ್ಕೆ ನಗರದ 5 ಕಡೆ ಸ್ಥಳ ಗುರುತಿಸಿ, ಪ್ರಾಧಿಕಾರಕ್ಕೆ ವಿವರ ಸಲ್ಲಿಸಿದ್ದಾರೆ. ನಗರಸಭೆಯಿಂದ ಜಾಗ ಹಸ್ತಾಂತರವಾಗುತ್ತಿದ್ದಂತೆ ತಂಗುದಾಣ ಕಾಮಗಾರಿ ಆರಂಭವಾಗಲಿದೆ.

₹ 25 ಲಕ್ಷ ಬಿಡುಗಡೆ: ಕೂಡಾಗೆ ಪ್ರತಿ ವರ್ಷ ಸರ್ಕಾರದಿಂದ ₹ 25 ಲಕ್ಷ ಬಿಡುಗಡೆಯಾಗಲಿದ್ದು, ಈ ಅನುದಾನವನ್ನು ತಂಗುದಾಣ ನಿರ್ಮಾಣಕ್ಕೆ ಬಳಸಲು ಉದ್ದೇಶಿಸಲಾಗಿದೆ. ಬೆಂಗಳೂರು ನಗರದಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಿಸಲಾಗಿದ್ದು, ನಗರದಲ್ಲೂ ಅದೇ ಮಾದರಿಯ ತಂಗುದಾಣ ಕಟ್ಟಲು ನಿರ್ಧರಿಸಲಾಗಿದೆ. ಪ್ರತಿ ತಂಗುದಾಣಕ್ಕೆ ಸುಮಾರು ₹ 5 ಲಕ್ಷ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಅಂಕಿ ಅಂಶ

* 30 ಚದರ ಕಿ.ಮೀ ನಗರದ ವಿಸ್ತಾರ
* 2 ಲಕ್ಷದ ಗಡಿ ದಾಟಿದ ಜನಸಂಖ್ಯೆ
* 5 ಕಡೆ ಪ್ರಯಾಣಿಕರ ತಂಗುದಾಣ ನಿರ್ಮಾಣ
* ಪ್ರತಿನಿತ್ಯ 2 ಸಾವಿರ ಬಸ್‌ ಸಂಚಾರ
* 1.50 ಲಕ್ಷ ಪ್ರಯಾಣಿಕರ ಪ್ರಯಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.