
ಕೋಲಾರ: ಬೆಂಗಳೂರು–ತಿರುಪತಿ ರಾಷ್ಟ್ರೀಯ ಹೆದ್ದಾರಿ–75ರಲ್ಲಿ ಅಪಘಾತ ತಪ್ಪಿಸಲು ವೇಗ ನಿಯಂತ್ರಣ ದೃಷ್ಟಿಯಿಂದ ಸ್ಪೀಡೊ ಮೀಟರ್ ಅಳವಡಿಸಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ವಾಹನಗಳ ಮೇಲೆ ನಿಗಾ ಇಡಲಿದೆ. ಸದ್ಯಕ್ಕೆ ಪರಿಗಣಿಸುತ್ತಿಲ್ಲ ಎಂದು ಸಂಸದ ಎಂ.ಮಲ್ಲೇಶ್ ಬಾಬು ಹೇಳಿದರು.
ತಾಲ್ಲೂಕಿನ ನರಸಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿರುವ ಶನಿವಾರ ಫ್ಲೈಓವರ್‌ಗೆ (ಮೇಲ್ಸೇತುವೆ) ಚಾಲನೆ ನೀಡಿ ಅವರು ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿ –75ರ ನರಸಾಪುರ-ಬೆಳ್ಳೂರುವರೆಗೆ ₹28 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 1.8 ಕಿ.ಮೀ ಉದ್ಘಾಟಿಸಲಾಗಿದೆ. ಇದರಿಂದ ವಾಹನಗಳ ಸರಾಗ ಸಂಚಾರಕ್ಕೆ ಅನುಕೂಲವಾಗಲಿದೆ. ನರಸಾಪುರ ಸಮೀಪ ನಿರ್ಮಿಸಿರುವ ಮತ್ತೊಂದು ಪ್ಲೈ ಓವರ್ ಅನ್ನು ಸಹ ಶೀಘ್ರದಲ್ಲೇ ಉದ್ಘಾಟನೆ ಮಾಡಲಾಗುವುದು ಎಂದರು.
ಇದರ ಜತೆಗೆ ನರಸಿಂಹತೀರ್ಥ, ನಂಗಲಿ, ವಡ್ಡಹಳ್ಳಿ, ವಡಗೂರು ಬಳಿ ನಿರ್ಮಾಣ ಹಂತದಲ್ಲಿರುವ ಪ್ಲೈಓವರ್‌ಗಳ ಕಾಮಗಾರಿ ಮುಗಿಸಿ ಲೋಕಾರ್ಪಣೆಗೊಳಿಸಲಾಗುವುದು. ಈ ಎಲ್ಲ ಅಭಿವೃದ್ಧಿ ಕಾಮಗಾರಿಗಳಿಗೆ ಎಲ್ಲ ಶಾಸಕರು, ಜನಪ್ರತಿನಿಧಿಗಳು ಸಹಕಾರ ನೀಡಿದ್ದು, ಮಾಜಿ ಸಂಸದ ಎಸ್.ಮುನಿಸ್ವಾಮಿ ಅವರು ಹೆಚ್ಚಿನ ಶ್ರಮ ಹಾಕಿದ್ದರು. ಅವರು ಸಂಸದರಾಗಿದ್ದ ಅವಧಿಯಲ್ಲಿ ಕಾಮಗಾರಿ ಮಂಜೂರಾಗಿತ್ತು ಎಂದು ಸ್ಮರಿಸಿದರು.
23 ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಈ ಸಮಸ್ಯೆ ಬಗೆಹರಿಸುವ ಕುರಿತಾಗಿ ಕ್ರಿಯಾಯೋಜನೆಗೆ ಪ್ರಸ್ತಾವನೆ ಸಲ್ಲಿಸಿ ಮುಂದಿನ ವಾರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚೆ ಮಾಡಲಾಗುವುದು ಎಂದರು.
ಮನರೇಗಾ ಹೆಸರು ಬದಲಾವಣೆ ಸಂಬಂಧ ಸಂಸತ್ತಿನಲ್ಲಿ ಚರ್ಚೆ ನಡೆದು ಮಸೂದೆಗೆ ಒಪ್ಪಿಗೆ ಲಭಿಸಿದೆ. ಅದರ ಬಗ್ಗೆ ಮಾತನಾಡುವ ಅಗತ್ಯವೂ ಇಲ್ಲ, ಹೆಸರು ಬದಲಾವಣೆ ವಿಚಾರಕ್ಕೆ ಆದ್ಯತೆ ನೀಡುವ ಅವಶ್ಯವಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ವೈ. ಸಂಪಂಗಿ, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ಮುಖಂಡ ವಿಜಯ್ ಕುಮಾರ್, ತಾಲ್ಲೂಕು ಅಧ್ಯಕ್ಷ ಬಾಬು ಮೌನಿ, ಕೆಡಿಪಿ ಸದಸ್ಯ ಇರಗಸಂದ್ರ ವಿಶ್ವನಾಥ್ ಇದ್ದರು.
ಜನರ ಹಿತದೃಷ್ಟಿಯಿಂದ ಮೈತ್ರಿ
ಕರ್ನಾಟಕ ರಾಜ್ಯದಲ್ಲಿ ಮೈತ್ರಿ ಅನಿವಾರ್ಯವಲ್ಲ. ಆದರೆ ರಾಜ್ಯದ ಜನರ ಭವಿಷ್ಯ ಹಾಗೂ ಅವರ ಹಿತದೃಷ್ಟಿಯಿಂದ ಬಿಜೆಪಿ–ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಈ ಮೈತ್ರಿ ಸದಾ ಗಟ್ಟಿಯಾಗಿಯೇ ಇರುತ್ತದೆ. 2028ರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರಲಿದ್ದು ಮೈತ್ರಿ ಪಕ್ಷದವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಮಲ್ಲೇಶ್ ಬಾಬು ಹೇಳಿದರು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಪಕ್ಷದ ಚಿಹ್ನೆ ಇರುವುದಿಲ್ಲ. ಹೀಗಾಗಿ ಆ ವಿಚಾರದಲ್ಲಿ ಮೈತ್ರಿ ಇರುವುದಿಲ್ಲವೆಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿರಬಹುದು ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ತಾಲ್ಲೂಕು ಜಿಲ್ಲಾ ಪಂಚಾಯಿತಿ ಜಿಬಿಎ (ಬಿಬಿಎಂಪಿ) ಚುನಾವಣೆ ನಡೆಯಬೇಕಿದೆ. ಅದು ಯಾವಾಗ ಎಂಬುದೇ ಗೊತ್ತಿಲ್ಲ. ಮೈತ್ರಿ ಸಂಬಂಧ ವರಿಷ್ಠರ ನಿಲುವಿಗೆ ಬದ್ಧ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.