ADVERTISEMENT

ಕೋಲಾರ: ಜಿಲ್ಲೆಯ ವಿದ್ಯಾರ್ಥಿಗಳಿಗಿಲ್ಲ ಪಠ್ಯಪುಸ್ತಕ ಭಾಗ್ಯ

ಶೈಕ್ಷಣಿಕ ವರ್ಷ ಆರಂಭವಾಗಿ 3 ತಿಂಗಳು: ಮಕ್ಕಳ ಕಲಿಕೆಗೆ ಹಿನ್ನಡೆ

ಜೆ.ಆರ್.ಗಿರೀಶ್
Published 4 ಸೆಪ್ಟೆಂಬರ್ 2021, 19:31 IST
Last Updated 4 ಸೆಪ್ಟೆಂಬರ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲಾರ: ಶೈಕ್ಷಣಿಕ ವರ್ಷ ಆರಂಭವಾಗಿ 3 ತಿಂಗಳು ಕಳೆದರೂ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಭಾಗ್ಯವಿಲ್ಲ. ಒಂದೆಡೆ ಕೋವಿಡ್‌ನಿಂದ ಮತ್ತೊಂದೆಡೆ ಪಠ್ಯಪುಸ್ತಕಗಳ ಅಲಭ್ಯತೆಯಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಿದೆ.

ಜಿಲ್ಲೆಯಲ್ಲಿ ಆರು ಶೈಕ್ಷಣಿಕ ವಲಯಗಳಿದ್ದು, ಎಲ್ಲೆಡೆ ಜೂನ್‌ 7ರಿಂದ 9 ಮತ್ತು 10ನೇ ತರಗತಿಗೆ ಆನ್‌ಲೈನ್‌ ತರಗತಿಗಳು ಆರಂಭವಾಗಿವೆ. ಆ.23ರಿಂದ ಭೌತಿಕ ತರಗತಿಗಳು ಪ್ರಾರಂಭವಾಗಿದ್ದು, ಪಠ್ಯಪುಸ್ತಕಗಳು ಈವರೆಗೂ ಮಕ್ಕಳ ಕೈಸೇರಿಲ್ಲ. 1ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ಸುಮಾರು 500 ನಮೂನೆಯ ಪಠ್ಯಪುಸ್ತಕಗಳಿವೆ. ಈ ಪೈಕಿ ಕೆಲ ಪುಸ್ತಕಗಳು ವಿದ್ಯಾರ್ಥಿಗಳ ಕೈಸೇರಿದ್ದರೆ ಮತ್ತೆ ಕೆಲ ಪುಸ್ತಕಗಳು ಈವರೆಗೂ ಬಂದಿಲ್ಲ.

ಪಠ್ಯಪುಸ್ತಕಗಳನ್ನು ‘ಪಾರ್ಟ್‌ 1’ ಮತ್ತು ‘ಪಾರ್ಟ್‌ 2’ ಎಂದು ವಿಂಗಡಿಸಲಾಗಿದೆ. ಇದರಲ್ಲಿ ಪಾರ್ಟ್‌ 1ರ ಪುಸ್ತಕಗಳು ಶೈಕ್ಷಣಿಕ ವರ್ಷದ ಆರಂಭದಲ್ಲೇ ಬೇಕಿದ್ದು, ಇವುಗಳನ್ನು ಬೇಗನೆ ವಿದ್ಯಾರ್ಥಿಗಳಿಗೆ ತಲುಪಿಸಬೇಕು. 260 ಪುಟಗಳಿಗಿಂತ ಹೆಚ್ಚಿನ ಪಠ್ಯವಿರುವ ಪುಸ್ತಕಗಳನ್ನು ಪಾರ್ಟ್‌ 2ರಲ್ಲಿ ಸೇರಿಸಲಾಗಿದ್ದು, ಇವುಗಳನ್ನು ಶೈಕ್ಷಣಿಕ ವರ್ಷ ಆರಂಭವಾಗಿ ಕೆಲ ತಿಂಗಳು ಕಳೆದ ನಂತರ ವಿತರಣೆ ಮಾಡಬೇಕು.

ADVERTISEMENT

ಆಮೆ ಗತಿ ಮುದ್ರಣ: ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳು ಹಾಗೂ ಖಾಸಗಿ ಶಾಲೆಗಳಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ ಕೊಡಲಾಗುತ್ತದೆ. ಖಾಸಗಿ ಶಾಲಾ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಆಡಳಿತ ಮಂಡಳಿಯಿಂದ ಹಣ ಪಡೆದು ಪಠ್ಯಪುಸ್ತಕ ಒದಗಿಸಲಾಗುತ್ತದೆ.

ಕರ್ನಾಟಕ ಪಠ್ಯಪುಸ್ತಕ ಸಂಘವು (ಕೆಟಿಬಿಎಸ್) ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಪಠ್ಯಪುಸ್ತಕ ಪೂರೈಸುವ ಹೊಣೆ ಹೊತ್ತಿದೆ. ಪ್ರತಿ ಬಾರಿ ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ (ಡಿಡಿಪಿಐ) ಕಚೇರಿಯಿಂದ ಜಿಲ್ಲೆಯ ಪಠ್ಯಪುಸ್ತಕ ಬೇಡಿಕೆ ಸಂಬಂಧ ಕೆಟಿಬಿಎಸ್‌ಗೆ ಪ್ರಸ್ತಾವ ಸಲ್ಲಿಸಲಾಗುತ್ತದೆ. ಈ ಪ್ರಸ್ತಾವಕ್ಕೆ ಅನುಗುಣವಾಗಿ ಜಿಲ್ಲೆಗೆ ಪಠ್ಯಪುಸ್ತಕ ಪೂರೈಕೆ ಮಾಡಲಾಗುತ್ತದೆ.

ಕೆಟಿಬಿಎಸ್‌ ಖಾಸಗಿ ಮುದ್ರಣಾಲಯಗಳಿಗೆ ಪಠ್ಯಪುಸ್ತಕ ಮುದ್ರಿಸುವ ಟೆಂಡರ್‌ ನೀಡಿದ್ದು, ಮುದ್ರಣ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಕಾಗದ ಕೊರತೆಯಿಂದಾಗಿ ಪಠ್ಯಪುಸ್ತಕ ಮುದ್ರಣ ಪ್ರಕ್ರಿಯೆ ಆಮೆ ಗತಿಯಲ್ಲಿ ಸಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪಠ್ಯಪುಸ್ತಕಗಳಿಲ್ಲದೆ ಶಾಲೆಗಳಲ್ಲಿ ಪಾಠ ಪ್ರವಚನ ಶೈಕ್ಷಣಿಕ ವೇಳಾಪಟ್ಟಿಯಂತೆ ನಡೆಯುತ್ತಿಲ್ಲ. ಬಹುಪಾಲು ಶಿಕ್ಷಕರು ಹಿಂದಿನ ಶೈಕ್ಷಣಿಕ ವರ್ಷದ ಪಠ್ಯಪುಸ್ತಕಗಳ ನೆರವಿನಿಂದ ಬೋಧನೆ ಮಾಡುತ್ತಿದ್ದಾರೆ. ಮತ್ತೆ ಕೆಲ ಶಿಕ್ಷಕರು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಅಡಕ ಮಾಡಿರುವ ಪಠ್ಯ ವಿಷಯವನ್ನು ಡೌನ್‌ಲೋಡ್‌ ಮಾಡಿಕೊಂಡು ಬೋಧನಾ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪಠ್ಯಪುಸ್ತಕ ಬೇಡಿಕೆ: ಜಿಲ್ಲೆಯಲ್ಲಿ 1,926 ಸರ್ಕಾರಿ ಶಾಲೆಗಳು, 540 ಖಾಸಗಿ ಶಾಲೆಗಳು, 107 ಅನುದಾನಿತ ಶಾಲೆಗಳು ಹಾಗೂ 62 ಇತರೆ ಶಾಲೆಗಳು ಸೇರಿದಂತೆ 2,635 ಶಾಲೆಗಳಿವೆ. ಕನ್ನಡ ಮತ್ತು ಆಂಗ್ಲ ಮಾಧ್ಯಮ ಸೇರಿದಂತೆ ಜಿಲ್ಲೆಯ ಪಠ್ಯಪುಸ್ತಕ ಬೇಡಿಕೆ 16,65,659 ಇದ್ದು, ಈ ಪೈಕಿ 9,48,078 ಪುಸ್ತಕಗಳು ಪೂರೈಕೆಯಾಗಿವೆ. ಈ ಪುಸ್ತಕಗಳನ್ನು ಶಾಲೆಗಳಿಗೆ ತಲುಪಿಸಲಾಗಿದೆ. ಇನ್ನೂ 7,17,581 ಪುಸ್ತಕಗಳು ವಿದ್ಯಾರ್ಥಿಗಳ ಕೈಸೇರಿಲ್ಲ. ಕೆಟಿಬಿಎಸ್‌ನಿಂದ ಪುಸ್ತಕಗಳು ಪೂರೈಕೆಯಾದಂತೆ ಅವುಗಳನ್ನು ಶಾಲೆಗಳಿಗೆ ತಲುಪಿಸಲಾಗುತ್ತಿದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇದೆ.

ಪುಸ್ತಕಕ್ಕೆ ಅಲೆದಾಟ: ಕೆಲ ಖಾಸಗಿ ಶಾಲೆಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಪಠ್ಯಪುಸ್ತಕಗಳನ್ನು ಖರೀದಿಸಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿವೆ. ಮತ್ತೆ ಕೆಲ ಖಾಸಗಿ ಶಾಲೆಗಳು ಪಠ್ಯಪುಸ್ತಕಗಳು ಬರುವುದನ್ನೇ ಎದುರು ನೋಡುತ್ತಿವೆ. ಪಠ್ಯಪುಸ್ತಕಗಳಿಗೆ ಹಣ ಪಾವತಿಸಿರುವ ವಿದ್ಯಾರ್ಥಿಗಳು ಪುಸ್ತಕ ಕೇಳುತ್ತಿದ್ದು, ಅವರಿಗೆ ಉತ್ತರಿಸುವುದು ಆಡಳಿತ ಮಂಡಳಿ ಸದಸ್ಯರಿಗೆ ಹಾಗೂ ಶಿಕ್ಷಕರಿಗೆ ದೊಡ್ಡ ತಲೆ ನೋವಾಗಿದೆ.

ಇನ್ನು ಸರ್ಕಾರಿ ಶಾಲಾ ಶಿಕ್ಷಕರಿಗೆ ಪ್ರತಿನಿತ್ಯ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕಚೇರಿ ಬಳಿ ಬಂದು ಪಠ್ಯಪುಸ್ತಕ ವಿಚಾರಿಸುವುದೇ ಕೆಲಸವಾಗಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಪಠ್ಯಪುಸ್ತಕಗಳನ್ನು ಹುಡುಕಿಕೊಂಡು ಪುಸ್ತಕ ಮಾರಾಟ ಮಳಿಗೆಗಳಿಗೆ ಅಲೆಯುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.