ADVERTISEMENT

ಕಾಂಗ್ರೆಸ್‌ಗೆ ಶ್ರೀನಿವಾಸಗೌಡರ ಸೇರ್ಪಡೆಗೆ ವಿರೋಧ

ಹೈಕಮಾಂಡ್ ಸಮ್ಮತಿಸಿದರೂ ಒಪ್ಪಲ್ಲ: ಕೈ ಮುಖಂಡರು ಗುಡುಗು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 13:32 IST
Last Updated 29 ನವೆಂಬರ್ 2021, 13:32 IST

ಕೋಲಾರ: ‘ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುವಂತೆ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರು ಸೂಚಿಸಿದ್ದು, ಪ್ರಾಮಾಣಿಕವಾಗಿ ಪಕ್ಷದ ಪರ ಕೆಲಸ ಮಾಡುತ್ತೇವೆ. ಆದರೆ, ಶಾಸಕ ಕೆ.ಶ್ರೀನಿವಾಸಗೌಡರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಹೈಕಮಾಂಡ್ ಒಪ್ಪಿದರೂ ನಾವು ಒಪ್ಪುವುದಿಲ್ಲ’ ಎಂದು ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಉದಯ್‌ಶಂಕರ್ ಗುಡುಗಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮುನಿಯಪ್ಪರ ವಿರುದ್ಧ ಹಾದಿಬೀದಿಯಲ್ಲಿ ಮಾತನಾಡಿರುವ ಶಾಸಕ ಶ್ರೀನಿವಾಸಗೌಡರು ಕಾಂಗ್ರೆಸ್‌ಗೆ ಬರುವುದಾಗಿ ಹೇಳುತ್ತಿದ್ದಾರೆ. ನಾವು ವಿರೋಧ ವ್ಯಕ್ತಪಡಿಸಿದ್ದಕ್ಕೆ ದಾರಿಹೋಕರ ಮಾತಿಗೆ ಪ್ರತಿಕ್ರಿಯಿಸಬೇಕೇ ಎಂದು ಹಗುರವಾಗಿ ಮಾತನಾಡಿದ್ದಾರೆ. ನಾವು ದಾರಿಹೋಕರಾ?’ ಎಂದು ಪ್ರಶ್ನಿಸಿದರು.

‘ಹಿರಿಯ ಮುಖಂಡರಾದ ಶ್ರೀನಿವಾಸಗೌಡರು ವಯಸ್ಸು, ಅನುಭವ, ಘನತೆಗೆ ತಕ್ಕಂತೆ ಮಾತನಾಡಬೇಕು. ಅವರು ಮೊದಲು ಜೆಡಿಎಸ್ ತೊರೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಸೇರಲಿ. ಪರಿಷತ್ ಚುನಾವಣೆಗೆ ಅವರ ಜತೆ ಎಷ್ಟು ಮತದಾರರಿದ್ದಾರೆ ಎಂಬುದನ್ನು ಸಾಬೀತು ಮಾಡಲಿ’ ಎಂದು ಸವಾಲು ಹಾಕಿದರು.

ADVERTISEMENT

‘ಶ್ರೀನಿವಾಸಗೌಡರನ್ನು ಕಾಂಗ್ರೆಸ್‍ಗೆ ಸೇರಿಸಿಕೊಂಡರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಹಿಂದಿನ ವಿಧಾನಸಭೆ, ಲೋಕಸಭೆ ಹಾಗೂ ಸ್ಥಳೀಯ ಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಅನಿಲ್‌ಕುಮಾರ್ ವಿರುದ್ಧ ಶಿಸ್ತುಕ್ರಮದ ತೀರ್ಮಾನ ಆಗುವವರೆಗೆ ಅವರಿಗೆ ಟಿಕೆಟ್ ಕೊಡಬಾರದೆಂದು ವರಿಷ್ಠರಿಗೆ ಒತ್ತಾಯಿಸಿದ್ದೆವು. ಕೆ.ಚಂದ್ರಾರೆಡ್ಡಿ ಇತರರು ಟಿಕೆಟ್‌ ಆಕಾಂಕ್ಷಿಗಳಾಗಿದ್ದು, ಈ ಪೈಕಿ ಯಾರಿಗಾದರೂ ಅವಕಾಶ ಕೊಡುವಂತೆ ಕೇಳಿದ್ದೆವು’ ಎಂದರು.

ಮಾನದಂಡ ಗೊತ್ತಿಲ್ಲ: ‘ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರನ್ನು ಸಂಪರ್ಕಿಸಿದ್ದೆವು. ಮುಂಚೂಣಿ ಘಟಕಗಳ ನಾಯಕರ ಅಭಿಪ್ರಾಯ ಪಡೆದು ಟಿಕೆಟ್ ಘೋಷಿಸುವುದಾಗಿ ಅವರು ಭರವಸೆ ನೀಡಿದ್ದವರು. ಆದರೆ, ನಮ್ಮನ್ನು ಸಂಪರ್ಕಿಸದೆ ಅನಿಲ್‌ಕುಮಾರ್‌ ಅವರಿಗೆ ಟಿಕೆಟ್‌ ಕೊಟ್ಟಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಯಾವ ಗುಂಪು ಬೇಡ. ವಿ.ಆರ್.ಸುದರ್ಶನ್ ಹೆಸರನ್ನು ಮುನಿಯಪ್ಪ ಹಾಗೂ ಮಾಲೂರಿನ ಸೋಮಶೇಖರ್‌ರ ಹೆಸರನ್ನು ಶಾಸಕ ನಂಜೇಗೌಡರು ಸೂಚಿಸಿದ್ದರು. ಅಂತಿಮವಾಗಿ ಹೈಕಮಾಂಡ್‍ಗೆ ಸುದರ್ಶನ್‌ರ ಹೆಸರು ಕಳುಹಿಸಲಾಗಿತ್ತು. ದೆಹಲಿ ಮಟ್ಟದಲ್ಲಿ ಏನು ವ್ಯತ್ಯಾಸ ಆಯಿತೋ ಗೊತ್ತಿಲ್ಲ. ಪಕ್ಷದಲ್ಲಿ ಸಕ್ರಿಯವಾಗಿರದ ಅನಿಲ್‌ಕುಮಾರ್‌ಗೆ ಟಿಕೆಟ್‌ ಕೊಟ್ಟಿದ್ದಾರೆ. ಇದಕ್ಕೆ ಮಾನದಂಡವೇನೆಂದು ಗೊತ್ತಿಲ್ಲ’ ಎಂದರು.

‘ಪಕ್ಷದ ಶಾಸಕರಿಲ್ಲದ ಕೋಲಾರ ಮತ್ತು ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಮುನಿಯಪ್ಪ ಜವಾಬ್ದಾರಿ ತೆಗೆದುಕೊಂಡು ನಗರಸಭೆ, ಗ್ರಾ.ಪಂ ಚುನಾವಣೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ನಾವು ನೊಂದು ಬೆಂದಿದ್ದೇವೆ. ಆದರೂ ಮುನಿಯಪ್ಪರ ಸೂಚನೆಯಂತೆ ಪಕ್ಷದ ಒಳಿತಿಗಾಗಿ ಕೆಲಸ ಮಾಡುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ನಗರ ಬ್ಲಾಕ್ ಅಧ್ಯಕ್ಷ ಪ್ರಸಾದ್‌ಬಾಬು, ಕಾಂಗ್ರೆಸ್‌ ಜಿಲ್ಲಾ ವಕ್ತಾರ ಮಂಜುನಾಥ್, ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಎಸ್ಟಿ ಘಟಕದ ಅಧ್ಯಕ್ಷ ನಾಗರಾಜ್, ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.