ADVERTISEMENT

ರಸ್ತೆ ದುರಸ್ತಿಗೆ ಸಂಘಟನೆಗಳ ಒತ್ತಾಯ

ಕೆಜಿಎಫ್ ತಾಲ್ಲೂಕಿನಲ್ಲಿ ಹದಗೆಟ್ಟ ರಸ್ತೆಗಳು: ಆರೋಪ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 2:13 IST
Last Updated 26 ಸೆಪ್ಟೆಂಬರ್ 2020, 2:13 IST
ಬೇತಮಂಗಲದ ಬಸ್ ನಿಲ್ದಾಣದಲ್ಲಿ ವಿವಿಧ ಪ್ರಗತಿ ಪರ ಸಂಘಟನೆಗಳಿಂದ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಲಾಯಿತು
ಬೇತಮಂಗಲದ ಬಸ್ ನಿಲ್ದಾಣದಲ್ಲಿ ವಿವಿಧ ಪ್ರಗತಿ ಪರ ಸಂಘಟನೆಗಳಿಂದ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಲಾಯಿತು   

ಬೇತಮಂಗಲ: ಕೆಜಿಎಫ್ ತಾಲ್ಲೂಕಿನಲ್ಲಿ ದಶಕಗಳಿಂದ ರಸ್ತೆಗಳು ದುರಸ್ತಿ ಕಾಣದೆ, ಗುಂಡಿಗಳು ಬಿದ್ದಿವೆ. ಶೀಘ್ರ ರಸ್ತೆ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳು ಶುಕ್ರವಾರ ಪ್ರತಿಭಟನೆ ನಡೆಸಿದವು.

ಕೆಜಿಎಫ್ ಮುಖ್ಯ ರಸ್ತೆಯ ಪಿಚ್ಚಹಳ್ಳಿಯಿಂದ ಎನ್.ಜಿ. ಹುಲ್ಕೂರು ಗಡಿ ಭಾಗದವರೆಗೆ 30 ಕಿ.ಮೀ ರಸ್ತೆ ಕಾಮಗಾರಿಗೆ ₹ 53 ಕೋಟಿ ಅನುದಾನ ಬಿಡುಗಡೆಯಾಗಿದೆ. ಒಂದು ವರ್ಷದಿಂದ ಕಾಮಗಾರಿ ಪೂರ್ಣ
ಗೊಳಿಸಿಲ್ಲ. ಇದರಿಂದ ಹಲವು
ಅಪಘಾತಗಳಾಗಿದ್ದು, ಹಲವರು ಪ್ರಾಣ ಕಳೆದುಕೊಂಡಿದ್ದಾರೆ.ಬೇತಮಂಗಲ-ವಿ. ಕೋಟ ರಸ್ತೆ, ಕೆಜಿಎಫ್ ನಗರದ ಆಶೋಕ್ ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಶೀಘ್ರ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸದಿದ್ದರೆ ರಸ್ತೆಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ನವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ರಾಜಗೋಪಾಲ್ ಗೌಡ ಎಚ್ಚರಿಕೆ ನೀಡಿದರು.

ADVERTISEMENT

ಬೇತಮಂಗಲ, ಕ್ಯಾಸಂಬಳ್ಳಿ, ಪಾರಂಡಹಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯರು, ಕ್ಷೇತ್ರದ ತಾಲ್ಲೂಕು ಪಂಚಾಯಿತಿ ಸದಸ್ಯರು ಈ ಬಗ್ಗೆ ಮೌನವಾಗಿರುವುದು ಖಂಡನೀಯ. ಶೀಘ್ರ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳದಿದ್ದರೆ ತಕ್ಕ ಪಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

‘ಒಂದು ವಾರದೊಳಗೆಕಾಮಗಾರಿ ಪೂರ್ಣಗೊಳಿಸದಿದ್ದರೆ ಜಿಲ್ಲಾಧಿಕಾರಿ ಮಟ್ಟದಲ್ಲಿ ನಡೆಯುವ ರಸ್ತೆ ಸುರಕ್ಷತೆ ಸಭೆಯಲ್ಲಿ ಇದನ್ನು ಪ್ರಸ್ತಾಪಿಸಿ ಉಗ್ರ ಹೋರಾಟ ಮಾಡುತ್ತೇವೆ’ ಎಂದು ಆಟೊ ಚಾಲಕರ ಸಂಘದ ರಾಜ್ಯಾಧ್ಯಕ್ಷ ಸುರೇಶ್ ಕುಮಾರ್ ತಿಳಿಸಿದರು.

ಆಟೊ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಜೆ.ಜಿ. ಶ್ರೀನಿವಾಸ್ ಮೂರ್ತಿ, ನವ ಕರ್ನಾಟಕ ರಕ್ಷಣ ವೇದಿಕೆ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯರಾದ ವಿ.ಜಿ. ಕುಮಾರ್, ವಿಶ್ವನಾಥ್, ತಾಂಬಾರ್ಲಹಳ್ಳಿ ಮುನೇಗೌಡ,ಜೈ ಭೀಮ್ ಖಾಸಗಿ ವಾಹನ ಚಾಲಕರ ಸಂಘದ ಅಧ್ಯಕ್ಷ ಸರವಣ, ಪಿಚ್ಚಹಳ್ಳಿ ಮಂಜುನಾಥ, ಬಾಬು, ಅಂಬರೀಶ್, ಅಖಿಲ್ ಅಹಮದ್, ಹರೀಶ್, ವೆಂಕಟಪತಿ, ಆಟೊ, ಖಾಸಗಿ ಬಸ್ ಚಾಲಕರು,ನವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.