ADVERTISEMENT

ಪ್ಯಾಕ್ಸ್ ಗಣಕೀಕರಣ ಕ್ರಾಂತಿಕಾರಿ ಹೆಜ್ಜೆ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ

ಪಾರದರ್ಶಕ ವಹಿವಾಟು: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 13:27 IST
Last Updated 9 ಅಕ್ಟೋಬರ್ 2021, 13:27 IST
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಕೋಲಾರದಲ್ಲಿ ಶನಿವಾರ ಆನ್‌ಲೈನ್ ಮೂಲಕ ಬ್ಯಾಂಕಿನ ಸಿಬ್ಬಂದಿ ಜತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಕೋಲಾರದಲ್ಲಿ ಶನಿವಾರ ಆನ್‌ಲೈನ್ ಮೂಲಕ ಬ್ಯಾಂಕಿನ ಸಿಬ್ಬಂದಿ ಜತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು   

ಕೋಲಾರ: ‘ಕೇಂದ್ರ ಸರ್ಕಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ (ಪ್ಯಾಕ್ಸ್‌) ಗಣಕೀಕರಣ ಕಡ್ಡಾಯಗೊಳಿಸುವ ಚಿಂತನೆ ನಡೆಸಿದ್ದು, ಬ್ಯಾಂಕ್‌ ಇದಕ್ಕೆ ಪೂರಕವಾಗಿ ಅವಿಭಜಿತ ಕೋಲಾರ ಜಿಲ್ಲೆ ವ್ಯಾಪ್ತಿಯ ಎಲ್ಲಾ ಸೊಸೈಟಿಗಳನ್ನು ಗಣಕೀಕರಣಗೊಳಿಸಿ ಕ್ರಾಂತಿಕಾರಿ ಹೆಜ್ಜೆಯಿಟ್ಟಿದೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.

ಇಲ್ಲಿ ಶನಿವಾರ ಆನ್‌ಲೈನ್‌ ಮೂಲಕ ನಡೆದ ಬ್ಯಾಂಕ್‌ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಪ್ಯಾಕ್ಸ್‌ಗಳಲ್ಲಿ ಪಾರದರ್ಶಕ ವಹಿವಾಟು ನಡೆಸುವ ಮೂಲಕ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದಂತೆ ಮಾಡಲು ಕೇಂದ್ರ ಸರ್ಕಾರ ಇಡೀ ಪ್ಯಾಕ್ಸ್ ವ್ಯವಸ್ಥೆಯ ಕಡ್ಡಾಯ ಗಣಕೀಕರಣಗೊಳಿಸಲು ಮುಂದಾಗಿದೆ’ ಎಂದರು.

‘ಪ್ಯಾಕ್ಸ್‌ಗಳ ಗಣಕೀಕರಣ ಅಂತಿಮ ಹಂತ ತಲುಪಿದ್ದು, ವಹಿವಾಟಿನಲ್ಲಿ ಲೋಪವಾಗದಂತೆ ಎಚ್ಚರ ವಹಿಸಲಾಗಿದೆ. ಪ್ಯಾಕ್ಸ್‌ ಸಿಇಒಗಳು ಮತ್ತು ಕಂಪ್ಯೂಟರ್ ಆಪರೇಟರ್‌ಗಳಿಗೆ ತರಬೇತಿ ಆಯೋಜಿಸಲಾಗಿದೆ. ಅ.11ರಂದು ಬಾಗೇಪಲ್ಲಿ, ಗುಡಿಬಂಡೆ, ಕೋಲಾರ, ಶ್ರೀನಿವಾಸಪುರ ತಾಲ್ಲೂಕು ವ್ಯಾಪ್ತಿಯಲ್ಲಿ ತರಬೇತಿ ನಡೆಯಲಿದೆ. ಅ.12ರಂದು ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಚಿಂತಾಮಣಿ ತಾಲ್ಲೂಕಿನಲ್ಲಿ ಮತ್ತು ಅ.13ರಂದು ಕೆಜಿಎಫ್, ಮಾಲೂರು, ಬಂಗಾರಪೇಟೆ ತಾಲ್ಲೂಕಿನಲ್ಲಿ ತರಬೇತಿ ನಡೆಯಲಿದೆ’ ಎಂದು ವಿವರಿಸಿದರು.

ADVERTISEMENT

‘ಪ್ಯಾಕ್ಸ್‌ಗಳ ಗಣಕೀಕರಣದಿಂದ ಪ್ರತಿನಿತ್ಯದ ಸೊಸೈಟಿಗಳ ವಹಿವಾಟು ಅಂದೇ ದಾಖಲಾಗಲಿದೆ. ವಹಿವಾಟಿನ ಕ್ರೋಢೀಕೃತ ತಃಖ್ತೆಗಳು ಆಗಾಗ್ಗೆ ಕೇಂದ್ರ ಕಚೇರಿಯಲ್ಲೇ ಸಿಗಲಿದ್ದು, ಗ್ರಾಹಕರಲ್ಲಿ ನಂಬಿಕೆ ಬಲಗೊಳ್ಳಲಿದೆ. ಉಳಿತಾಯ ಪಾಸ್‌ಬುಕ್‌ ಸಹಿತ ಬ್ಯಾಂಕ್‌ನ ಎಲ್ಲಾ ಸೌಲಭ್ಯಗಳು ಸೊಸೈಟಿಯಲ್ಲೇ ಸಿಗಲಿದ್ದು, ರೈತರು ಮತ್ತು ಮಹಿಳೆಯರಿಗೆ ಅನುಕೂಲವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಗ್ರಾಹಕಸ್ನೇಹಿ: ‘ಪ್ಯಾಕ್ಸ್‌ಗಳು ಗ್ರಾಹಕಸ್ನೇಹಿಯಾಗಲಿದ್ದು, ರೈತರಿಗೆ ಅಗತ್ಯವಾದ ಪಹಣಿ, ಮ್ಯುಟೇಷನ್ ಸೇರಿದಂತೆ ಭೂದಾಖಲೆಪತ್ರಗಳು ಆನ್‌ಲೈನ್‌ನಲ್ಲಿ ಲಭ್ಯವಾಗಲಿವೆ. ಗಣಕೀಕರಣದಿಂದ ಲೆಕ್ಕಪರಿಶೋಧನೆ ಸುಲಭವಾಗಲಿದ್ದು, ಹಣಕಾಸು ವರ್ಷದ ಮುಕ್ತಾಯವಾದ 3 ತಿಂಗಳೊಳಗೆ ಆಡಿಟ್‌ ಪೂರ್ಣಗೊಳ್ಳಲಿದೆ’ ಎಂದು ಮಾಹಿತಿ ನೀಡಿದರು.

‘ಸೊಸೈಟಿಗಳು ಸಾಲ ನೀಡಿಕೆ, ವಸೂಲಿ, ಪಡಿತರ ವಿತರಣೆಗೆ ಸೀಮಿತವಾಗದೆ ವಿವಿಧೋದ್ದೇಶ ಸೇವಾ ಕೇಂದ್ರಗಳಾಗಿ ರೈತರು ಮತ್ತು ಮಹಿಳೆಯರಿಗೆ ಅಗತ್ಯ ಎಲ್ಲಾ ಉತ್ಪನ್ನಗಳು, ಪರಿಕರಗಳನ್ನು ಒಂದೇ ಸೂರಿನಲ್ಲಿ ಸಿಗುವಂತೆ ಮಾಡುವ ಪ್ರಯತ್ನ ನಡೆದಿದೆ’ ಎಂದು ತಿಳಿಸಿದರು.

ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಬೈರೇಗೌಡ, ಶಿವಕುಮಾರ್, ಖಲೀಮ್‌ ಉಲ್ಲಾ, ಸಿಬ್ಬಂದಿ ನಾಗೇಶ್, ಹುಸೇನ್ ದೊಡ್ಡಮನಿ, ಅರುಣ್‌ಕುಮಾರ್‌, ಬಾಲಾಜಿ, ವಿನಯ್‌ಪ್ರಸಾದ್, ಶುಭಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.