ADVERTISEMENT

ಬಂಗಾರಪೇಟೆ: ಅರ್ಧಕ್ಕೆ ನಿಂತ ಕಾಮಗಾರಿ ಅನೈತಿಕ ಚಟುವಟಿಕೆ ತಾಣ

ಅನೈತಿಕ ಚಟುವಟಿಕೆಗಳ ತಾಣವಾದ ಪಂಚಾಯಿತಿ ಕಾರ್ಯಾಲಯ ಕಟ್ಟಡ

ಪ್ರಜಾವಾಣಿ ವಿಶೇಷ
Published 22 ಮೇ 2025, 7:53 IST
Last Updated 22 ಮೇ 2025, 7:53 IST
ಅರ್ಧದಲ್ಲೇ ಸ್ಥಗಿತಗೊಂಡಿರುವ ಬಂಗಾರಪೇಟೆಯ ಹುಲಿಬೆಲೆ ಗ್ರಾಮ ಪಂಚಾಯಿತಿ ಕಾರ್ಯಾಲಯ ಕಟ್ಟಡದ ನಿರ್ಮಾಣ ಕಾಮಗಾರಿ 
ಅರ್ಧದಲ್ಲೇ ಸ್ಥಗಿತಗೊಂಡಿರುವ ಬಂಗಾರಪೇಟೆಯ ಹುಲಿಬೆಲೆ ಗ್ರಾಮ ಪಂಚಾಯಿತಿ ಕಾರ್ಯಾಲಯ ಕಟ್ಟಡದ ನಿರ್ಮಾಣ ಕಾಮಗಾರಿ    

ಬಂಗಾರಪೇಟೆ: ಅನುದಾನ ಕೊರತೆಯಿಂದ ಅರ್ಧದಲ್ಲೇ ಸ್ಥಗಿತಗೊಂಡಿರುವ ಗ್ರಾಮ ಪಂಚಾಯಿತಿ ಕಾರ್ಯಾಲಯದ ಕಟ್ಟಡ ನಿರ್ಮಾಣ ಕಾಮಗಾರಿ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ತಾಲ್ಲೂಕಿನ ಹುಲಿಬೆಲೆ ಗ್ರಾಮ ಪಂಚಾಯಿತಿ ಕಟ್ಟಡ ಶಿಥಿಲಗೊಂಡದ್ದು, ಚಿಕ್ಕದಾಗಿದೆ. ಗ್ರಾಮ ಪಂಚಾಯಿತಿ ಕೆಲಸ ಕಾರ್ಯಗಳನ್ನು ಸುಗಮವಾಗಿ ಮಾಡಲು ನೂತನ ಕಟ್ಟಡದ ಅವಶ್ಯಕತೆ ಇದೆ ಎಂದು ಬೇಡಿಕೆ ಇಟ್ಟ ಕಾರಣ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಕಾಮಗಾರಿ ಪ್ರಾರಂಭ ಮಾಡಿ ಹಲವು ವರ್ಷಗಳು ಕಳೆದರೂ ಅನುದಾನದ ಕೊರತೆಯಿಂದ ಕಾಮಗಾರಿ ಅರ್ಧಕ್ಕೇ ಸ್ಥಗಿತಗೊಂಡಿದೆ.

ಈ ಕಾಮಗಾರಿಗೆ ರಾಜೀವ್ ಗಾಂಧಿ ಪಂಚಾಯತ್ ಸಶಕ್ತೀಕರಣ ಅಭಿಯಾನ ಯೋಜನೆಯಡಿ ₹15 ಲಕ್ಷ ಮತ್ತು ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್. ಅನಿಲ್ ಕುಮಾರ್ ಅವರ ವಿಶೇಷ ಅನುದಾನದಲ್ಲಿ ₹5 ಲಕ್ಷ ಮೂಂಜೂರು ಮಾಡಲಾಗಿತ್ತು. ಗ್ರಾಮ ಪಂಚಾಯಿತಿ ಕಾರ್ಯಾಲಯವನ್ನು ನಿರ್ಮಾಣ ಮಾಡಲು ಕೆಆರ್‌ಡಿಎಲ್ ಸಂಸ್ಥೆ ಗುತ್ತಿಗೆಯನ್ನು ಪಡೆದುಕೊಂಡು ಕಾಮಗಾರಿಯನ್ನು ಪ್ರಾರಂಭಿಸಿತ್ತು. ಆದರೆ ಮುಂದೆ ಅನುದಾನ ನಿಂತು ಹೋದ ಕಾರಣ ಕಾಮಗಾರಿಯನ್ನು ಅರ್ಧಕ್ಕೇ ನಿಲ್ಲಿಸಿದೆ. 

ADVERTISEMENT

₹20 ಲಕ್ಷ ಅನುದಾನದಲ್ಲಿ ನೆಲ ಮಹಡಿಗೆ ಮೇಲ್ಛಾವಣಿಯನ್ನು ಹಾಕಿದ್ದು, ಮೊದಲ ಮಹಡಿಗೆ ಅರ್ಧ ಗೋಡೆಗಳನ್ನು ನಿರ್ಮಾಣ ಮಾಡಲಾಗಿದೆ. ಕಾಮಗಾರಿಯನ್ನು ಮುಂದುವರಿಸಲು ಹೆಚ್ಚಿನ ಅನುದಾನ ಬೇಕು. ಅದಿಲ್ಲದ್ದಕ್ಕೆ ನಿರ್ಮಾಣವಾಗಿರುವ ಅರ್ಧ ಕಟ್ಟಡವೂ ಹಾಳಾಗುತ್ತಿದೆ. ನಿರ್ಮಾಣಕ್ಕೆ ಉಪಯೋಗಿಸಿರುವ ಕಬ್ಬಿಣದ ಕಂಬಿಗಳು ಮತ್ತು ಕಿಟಕಿಗಳು ತುಕ್ಕು ಹಿಡಿಯುತ್ತಿವೆ‌ ಎಂದು ಗ್ರಾಮಸ್ಥರು ಆರೋಪಿಸಿದರು.

ಅಷ್ಟೇ ಅಲ್ಲದೇ, ಅರ್ಧಕ್ಕೆ ನಿಲ್ಲಿಸಿರುವ ಕಟ್ಟಡದಲ್ಲಿ ರಾತ್ರಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ರಾತ್ರಿ ಕುಡುಕರ ಅಡ್ಡೆಯಾಗುವ ಹಾಗೂ ಹಗಲಿನಲ್ಲಿ ಕುರಿಗಳ ದೊಡ್ಡಿಯಾಗುವ ಈ ಕಟ್ಟಡವನ್ನು ಪೂರ್ಣಗೊಳಿಸಿ ಉಪಯೋಗಕ್ಕೆ ಮುಕ್ತಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

‘ಗ್ರಾಮ ಪಂಚಾಯಿತಿ ಕಾರ್ಯಾಲಯ ಕಟ್ಟಡ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಅನುಕೂಲ ಮಾಡಿಕೊಡಬೇಕು’ ಎಂದು ಹುಣಸನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಎಚ್.ಆರ್. ಶ್ರೀನಿವಾಸ್ ಒತ್ತಾಯಿಸಿದರು.

‘ಗ್ರಾಮ ಪಂಚಾಯಿತಿ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳನ್ನು ಒತ್ತಾಯಿಸುತ್ತ ಬಂದಿದ್ದೇವೆ. ಅಧಿಕಾರಿಗಳು ಇಲ್ಲಸಲ್ಲದ ಕಾರಣ ಹೇಳುತ್ತ ಕಾಲ ತಳ್ಳುತ್ತಿದ್ದಾರೆ’ ಎಂದು ಹುಲಿಬೆಲೆ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ಆರೋಪಿಸಿದರು.

ಅನೈತಿಕ ಚಟುವಟಿಕೆಗಳಿಗೆ ಸಾಕ್ಷಿ ಒದಗಿಸುವ ಚಿತ್ರಣ
ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ₹40 ಲಕ್ಷ ಬಿಡುಗಡೆಯಾಗಿದ್ದು ಅತಿ ಶೀಘ್ರದಲ್ಲೇ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು
-ಚಿತ್ರಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಮೋದನೆ ಪಡೆದ ನಂತರ ಅನುದಾನ ಬಿಡುಗಡೆಯಾಗಿರುತ್ತದೆ. ಅದರ ಆಧಾರದ ಮೇಲೆ ಕಾಮಗಾರಿಯನ್ನು ಪ್ರಾರಂಭಿಸಲಾಗುತ್ತದೆ. ಹೀಗಿರುವಾಗ ಕಾಮಗಾರಿ ಪ್ರಗತಿಯ ಹಂತದಲ್ಲಿ ಅನುದಾನ ಕೊರತೆ ಉಂಟಾಗಲು ಹೇಗೆ ಸಾಧ್ಯ? ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ನೇರ ಕಾರಣ
-ಬಾಲಕೃಷ್ಣ ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.