ADVERTISEMENT

ಕವಿ ಸಿದ್ದಲಿಂಗಯ್ಯ ಕಾವ್ಯ ಸಾರ್ವಕಾಲಿಕ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 15:06 IST
Last Updated 29 ಜುಲೈ 2021, 15:06 IST

ಕೋಲಾರ: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಹಾಗೂ ಕವಿ ಸಿದ್ದಲಿಂಗಯ್ಯ ಸ್ಮರಣಾರ್ಥ ನಗರದ ಹೊರವಲಯದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಗಲಿದ ಚೇತನಗಳಿಗೆ ಭಾವಪೂರ್ಣ ನುಡಿನಮನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಜನಶಕ್ತಿ ಸಂಘಟನೆ ಗೌರವಾಧ್ಯಕ್ಷೆ ಗೌರಿ, ‘ದೊರೆಸ್ವಾಮಿಯವರ ವ್ಯಕ್ತಿತ್ವ, ಸಾಮಾಜಿಕ ಕಳಕಳಿ, ಪ್ರಗತಿಪರ ಚಿಂತನೆ, ಹೋರಾಟದ ಬದ್ಧತೆ, ಗುರಿ ನಿಜಕ್ಕೂ ಬೆರಗು ಮೂಡಿಸುವಂತದ್ದು’ ಎಂದು ಸ್ಮರಿಸಿದರು.

‘ದೊರೆಸ್ವಾಮಿ ಅವರು ಎಲ್ಲರ ಜತೆ ಸರಳ ಸಾಮಾನ್ಯರಂತೆ ಇರುತ್ತಿದ್ದರು. ವಸತಿ, ಊಟೋಪಚಾರದಲ್ಲೂ ಇದೇ ಬೇಕು ಅದೇ ಬೇಕು ಎನ್ನದೇ ಕನಿಷ್ಠ ಸವಲತ್ತುಗಳಲ್ಲೇ ಬದುಕು ಸಾಗಿಸುತ್ತಿದ್ದರು. ಎಲ್ಲರೊಟ್ಟಿಗೆ ಇದ್ದು ಸಾಮಾನ್ಯರಾಗಿ ಹೋರಾಟ, ಚಳವಳಿಗಳಲ್ಲಿ ಭಾಗಿಯಾಗುತ್ತಿದ್ದರು. ಅವರ ಸ್ಫೂರ್ತಿಯಿಂದಲೇ ಇಂದಿಗೂ ಅನೇಕರು ಹೋರಾಟಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ ಹಾಗೂ ಪ್ರೇರಣೆಯೂ ಆಗಿದೆ’ ಎಂದರು.

ADVERTISEMENT

‘ದೊರೆಸ್ವಾಮಿ ಅವರು ನೂರು ವರ್ಷ ದಾಟಿದ ಮೇಲೂ ದಿನನಿತ್ಯ ಹತ್ತಾರು ಪತ್ರಿಕೆ ಓದುತ್ತಿದ್ದರು. ಚರ್ಚೆ, ಸಂವಾದದಲ್ಲಿ ಭಾಗಿಯಾಗುತ್ತಿದ್ದರು. ಹೋರಾಟಗಳ ಕೇಂದ್ರ ಬಿಂದುವಾಗಿದ್ದರು. ಅವರು ನಮ್ಮೊಂದಿಗೆ ಭೌತಿಕವಾಗಿ ಇಲ್ಲವಾದರೂ ಅವರ ಚಿಂತನೆ ಸಮಾಜಕ್ಕೆ ದಾರಿದೀಪವಾಗಿವೆ. ಅವರ ತತ್ವಾದರ್ಶದಲ್ಲೇ ಹೋರಾಟ ಮುಂದುವರಿಸಿಕೊಂಡು ಹೋಗುತ್ತೇವೆ’ ಎಂದು ತಿಳಿಸಿದರು.

ಸೌಮ್ಯಮಯಿ: ‘ಕವಿ ಸಿದ್ದಲಿಂಗಯ್ಯ ಅವರು ಸದಾ ಸೌಮ್ಯಮಯಿ. ಅವರ ಕಾವ್ಯ ಸಾರ್ವಕಾಲಿಕ. ಅವರ ಬದುಕು, ಜೀವನಾನುಭವ, ಸಾಹಿತ್ಯ, ರಾಜಕೀಯ ಅನುಭವದಲ್ಲಿ ಅಪಾರವಾದ ಬಂಡಾಯದ ರೂಪುರೇಷೆ, ಬದ್ಧತೆ ಇತ್ತು. ಅದನ್ನು ಅವರ ಹೊಲೆಮಾದಿಗರ ಹಾಡು ಕೃತಿಯಲ್ಲಿ ವಿಸ್ತಾರವಾಗಿ ಕಟ್ಟಿಕೊಟ್ಟಿದ್ದಾರೆ’ ಎಂದು ಬಂಗಾರಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎ.ಮುನಿಶಾಮಪ್ಪ ಅಭಿಪ್ರಾಯಪಟ್ಟರು.

‘ದಲಿತ ಅಸ್ಪೃಶ್ಯತೆಯ ಅಸ್ಮಿತೆಗಾಗಿ ಸಿದ್ದಲಿಂಗಯ್ಯರ ಸಾಹಿತ್ಯ, ನಾಟಕ ಹಾಗೂ ಕಾವ್ಯ ಸಹಕಾರಿ ಆಗಿತ್ತು. ಅವರು ಕೈಗೊಂಡ ಚಳವಳಿ ಗುರಿ ಮುಟ್ಟುವ ಕೆಚ್ಚು, ದಿಟ್ಟತನ ಹೋರಾಟಗಾರರಿಗೆ ಮೂಡಿಸಲು ಸಹಕಾರಿ ಆಗಿತ್ತು. ಅವರ ಸಾಹಿತ್ಯ, ವಿಮರ್ಶೆಗಳು ಕೂಡ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿವೆ’ ಎಂದು ಹೇಳಿದರು.

ವಿದ್ವಾನ್ ಸಿ.ಆರ್.ನಟರಾಜ್‌ ಮತ್ತು ತಂಡದವರು ತತ್ವಪದ ಗಾಯನ ನಡೆಸಿಕೊಟ್ಟರು. ಆದಿಮ ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿ ಕೊಮ್ಮಣ್ಣ, ವಿದ್ವಾನ್ ಸೋಮಶೇಖರ್, ಕಲಾವಿದ ಕಾಳಿದಾಸ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.