ADVERTISEMENT

ಪೊಲೀಸರ ಶ್ರಮದಿಂದ ಸಮಾಜಕ್ಕೆ ನೆಮ್ಮದಿ

ಪೊಲೀಸ್‌ ಸಂಸ್ಮರಣಾ ದಿನಾಚರಣೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಘುನಾಥ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 14:38 IST
Last Updated 21 ಅಕ್ಟೋಬರ್ 2020, 14:38 IST
ಕೋಲಾರದಲ್ಲಿ ಬುಧವಾರ ನಡೆದ ಪೊಲೀಸ್‌ ಸಂಸ್ಮರಣಾ ದಿನಾಚರಣೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್.ರಘುನಾಥ್ ಪೊಲೀಸ್‌ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.
ಕೋಲಾರದಲ್ಲಿ ಬುಧವಾರ ನಡೆದ ಪೊಲೀಸ್‌ ಸಂಸ್ಮರಣಾ ದಿನಾಚರಣೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್.ರಘುನಾಥ್ ಪೊಲೀಸ್‌ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.   

ಕೋಲಾರ: ‘ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹಾಗೂ ದೇಶದ ಆಂತರಿಕ ಭದ್ರತೆ ಕಾಪಾಡುವಲ್ಲಿ ಪೊಲೀಸರ ಪಾತ್ರ ನಿರ್ಣಾಯಕ’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್.ರಘುನಾಥ್ ಅಭಿಪ್ರಾಯಪಟ್ಟರು.

ಇಲ್ಲಿ ಬುಧವಾರ ನಡೆದ ಪೊಲೀಸ್‌ ಸಂಸ್ಮರಣಾ ದಿನಾಚರಣೆಯಲ್ಲಿ ಮಾತನಾಡಿ, ‘ಪೊಲೀಸರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ಜನರ ವಿಶ್ವಾಸ ಗಳಿಸಿದರೆ ಸಮಾಜದಲ್ಲಿ ಗೌರವ ಸಿಗುತ್ತದೆ’ ಎಂದರು.

‘ನ್ಯಾಯಾಂಗ ವ್ಯವಸ್ಥೆ ಮತ್ತು ಪೊಲೀಸ್ ಇಲಾಖೆಯು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವೆರೆಡರ ನಡುವೆ ಪರಸ್ಪರ ಸಮನ್ವಯ ಇರಬೇಕು. ನ್ಯಾಯಾಂಗ ವ್ಯವಸ್ಥೆಯು ಮತ್ತಷ್ಟು ಮೌಲ್ಯಯುತವಾಗಿ ಕಾರ್ಯ ನಿರ್ವಹಿಸಲು ಹಾಗೂ ಜನರಿಗೆ ನ್ಯಾಯಾಲಯಗಳ ಬಗ್ಗೆ ವಿಶ್ವಾಸ ಬರಲು ಪೊಲೀಸ್ ಇಲಾಖೆಯ ಸಹಕಾರ ಅಗತ್ಯ’ ಎಂದು ಹೇಳಿದರು.

ADVERTISEMENT

‘ಸಾವಿನಲ್ಲಿ ಸಾರ್ಥಕತೆ ಮೆರೆಯುವಂತಾಗಬೇಕು. ಈ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಯುವಕರು ಜೀವನೋಪಾಯಕ್ಕಾಗಿ ಪೊಲೀಸ್ ಇಲಾಖೆ ಮತ್ತು ಸೇನೆಗೆ ಸೇರಬಾರದು. ಬದಲಿಗೆ ದೇಶ ಸೇವೆಯ ಉದಾತ್ತ ಚಿಂತನೆ ಹೊಂದಿರಬೇಕು. ವಚನಕಾರ ಬಸವಣ್ಣರ ಸಂದೇಶದಂತೆ ಕಾಯಕವೇ ಕೈಲಾಸದ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಸಮಾಜದ ಸುಧಾರಣೆ ಸಾಧ್ಯ’ ಎಂದು ಕಿವಿಮಾತು ಹೇಳಿದರು.

ಧೈರ್ಯ ತುಂಬಬೇಕು: ‘ದೇಶದ ಗಡಿ ಕಾಯುವ, ಬಾಹ್ಯ ಶತ್ರುಗಳಿಂದ ರಾಷ್ಟ್ರವನ್ನು ರಕ್ಷಿಸುವ ಸೈನಿಕರ ಕಾರ್ಯವನ್ನು ಮುಕ್ತ ಮನಸ್ಸಿನಿಂದ ಹೊಗಳಲಾಗುತ್ತದೆ. ಅವರಷ್ಟೇ ದೇಶಕ್ಕಾಗಿ ದುಡಿಯುವ ಪೊಲೀಸರ ಕಾರ್ಯ ಮೆಚ್ಚಿಕೊಂಡು ಪ್ರಶಂಸಿಸುವಲ್ಲಿ ಹಿಂದೆ ಬಿದ್ದಿದ್ದೇವೆ. ಪೊಲೀಸರ ಶ್ರಮದಿಂದಲೇ ಸಮಾಜ ನೆಮ್ಮದಿಯಿಂದಿದೆ. ಹುತಾತ್ಮ ಪೊಲೀಸರನ್ನು ಸ್ಮರಿಸುವ ಮೂಲಕ ಅವರ ಕುಟುಂಬಗಳಿಗೆ ಧೈರ್ಯ ತುಂಬಬೇಕು’ ಎಂದು ಸಲಹೆ ನೀಡಿದರು.

‘ಪೊಲೀಸ್ ಇಲಾಖೆಯು ಸಿಬ್ಬಂದಿ ಕೊರತೆ ನಡುವೆಯೂ ಉತ್ತಮವಾಗಿ ಕೆಲಸ ಮಾಡುತ್ತಿದೆ. ಪೊಲೀಸ್ ಇಲಾಖೆ ಇಲ್ಲದಿದ್ದರೆ ಆಡಳಿತ ನಿರ್ವಹಣೆ ಕಷ್ಟ. ಪೊಲೀಸರ ಕಾರ್ಯ ನಿರ್ವಹಣೆ ಕ್ಲಿಷ್ಟಕರ. ಆಂತರಿಕ ಭದ್ರತಾ ಕಾರ್ಯದಲ್ಲಿ ಜನರು ಪೊಲೀಸರೊಂದಿಗೆ ಕೈಜೋಡಿಸಿ ಸಹಕಾರ ನೀಡಿದರೆ ಎದುರಾಗಬಹುದಾದ ದೊಡ್ಡ ಅನಾಹುತ ತಡೆಯಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

24 ತಾಸು ಕೆಲಸ: ‘ವಿವಿಧ ಇಲಾಖೆಗಳು ಒಂದೊಂದು ಜವಾಬ್ದಾರಿ ನಿರ್ವಹಿಸಿದರೆ, ಪೊಲೀಸ್ ಇಲಾಖೆ ಹಲವು ಜವಾಬ್ದಾರಿ ನಿಭಾಯಿಸುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಪರಾಧ ಚಟುವಟಿಕೆ ತಡೆಗಟ್ಟುವುದು, ಭದ್ರತೆ ನೀಡುವುದು ಸೇರಿದಂತೆ ವಿವಿಧ ಕೆಲಸಗಳನ್ನು ಈ ಒಂದೇ ಇಲಾಖೆ ದಿನದ 24 ತಾಸೂ ಮಾಡುತ್ತದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಹೇಳಿದರು.

‘ಸಮಾಜದಲ್ಲಿ ಪೊಲೀಸರೇ ಇಲ್ಲವಾಗಿದ್ದರೆ ಎಂಬುದನ್ನು ನೆನಪಿಸಿಕೊಂಡರೆ ಭಯವಾಗುತ್ತದೆ. ಅವರ ಸೇವೆಯಿಂದ ಇಡೀ ಸಮುದಾಯ ನೆಮ್ಮದಿಯ ಬದುಕು ಸಾಗಿಸಲು ಕಾರಣವಾಗಿದೆ. ಕರ್ತವ್ಯ ನಿರ್ವಹಣೆ ವೇಳೆ ಪ್ರಾಣಾರ್ಪಣೆ ಮಾಡಿದವರನ್ನು ನಾಗರಿಕರು ಗೌರವಿಸಬೇಕು’ ಎಂದು ಕಿವಿಮಾತು ಹೇಳಿದರು.

ಮಹತ್ವದ ದಿನ: ‘ದೇಶದ ಗಡಿ ಭಾಗದ ಲಡಾಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 10 ಮಂದಿ ಪೊಲೀಸರ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ ಹತ್ಯೆಗೈದ ದಿನವನ್ನು ಪೊಲೀಸ್‌ ಹುತಾತ್ಮರ ದಿನವೆಂದು ಆಚರಿಸಿಕೊಂಡು ಬರಲಾಗುತ್ತಿದೆ. ಪೊಲೀಸರ ಸೇವೆ ಸ್ಮರಿಸುವ ಮಹತ್ವದ ದಿನವಿದು’ ಎಂದು ವಿವರಿಸಿದರು.

ಅಧಿಕಾರಿಗಳು ಹಾಗೂ ಗಣ್ಯರು ಪೊಲೀಸ್ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಾಹ್ನವಿ ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.