ಕೆಜಿಎಫ್: ರಾಜ್ಯದ ಹಲವೆಡೆ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಚೆಡ್ಡಿ ಗ್ಯಾಂಗ್‌ನ ನಾಲ್ವರನ್ನು ಜಿಲ್ಲೆಯ ಪೊಲೀಸರು ವಿಚಾರಣೆಗಾಗಿ ಗುರುವಾರ ಮಂಗಳೂರಿನಿಂದ ಕರೆತಂದಿದ್ದಾರೆ.
ಇಲ್ಲಿಯ ಸ್ವರ್ಣನಗರದ ಪ್ರಸನ್ನ ರೆಡ್ಡಿ ಎಂಬುವರ ಮನೆಯ ಕಬ್ಬಿಣದ ಸರಳನ್ನು ಯಂತ್ರದ ಮೂಲಕ ಕತ್ತರಿಸಿ ಒಳಗೆ ನುಗ್ಗಲು ಯತ್ನಿಸಿದ್ದರು. ಕುಟುಂಬ ಸದಸ್ಯರು ಎಚ್ಚರಗೊಂಡ ಕಾರಣ ಪಲಾಯನ ಮಾಡಿದ್ದರು.
ಸಕಲೇಶಪುರದ ಬಳಿ ಮಂಗಳೂರು ಪೊಲೀಸರು ಈ ಗ್ಯಾಂಗ್ ಸದಸ್ಯರನ್ನು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದರು. ಮಂಗಳೂರು ನ್ಯಾಯಾಲಯದ ಅನುಮತಿ ಪಡೆದು ಚೆಡ್ಡಿ ಗ್ಯಾಂಗ್ ಸದಸ್ಯರನ್ನು ನಗರಕ್ಕೆ ಕರೆತರಲಾಗಿದೆ.
ಆರೋಪಿಗಳಾದ ರಾಜು ಸಿಂಘಾನಿಯಾ (24), ಮಯೂರ ಕೃಷ್ಣ (30), ವಿಕ್ಕಿ ಪಾರ್ದಿ (21) ಮತ್ತು ಬಾಲಿಸಿಂಗ್ (22) ಅವರನ್ನು ಸಬ್ ಇನ್‌ಸ್ಪೆಕ್ಟರ್ ತ್ಯಾಗರಾಜ್ ಮತ್ತು ಸಿಬ್ಬಂದಿ ಅವರನ್ನು ರಾಬರ್ಟಸನ್‌ಪೇಟೆ ಪೊಲೀಸ್ ಠಾಣೆಗೆ ಕರೆತಂದಿದೆ.
ಮಧ್ಯಪ್ರದೇಶದ ಮೂಲದ ಆರೋಪಿಗಳನ್ನು ಮೂರು ದಿನ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.
ಬಾಲಿಸಿಂಗ್ ಮೇಲೆ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜು ಸಿಂಘಾನಿಯಾ ವಿರುದ್ಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ಮಾಹಿತಿ ಇದೆ. ಆರೋಪಿಗಳು ನಡೆಸಿರುವ ದೃಷ್ಕೃತ್ಯಗಳ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.