ಕೋಲಾರ: ಪಹಲ್ಗಾಮ್ ಕೃತ್ಯಕ್ಕೆ ಪ್ರತೀಕಾರವಾಗಿ ಯೋಧರು 'ಆಪರೇಷನ್ ಸಿಂಧೂರ' ನಡೆಸಿ ಉಗ್ರರ ನೆಲೆ ನಾಶ ಮಾಡಿದ ಬೆನ್ನಲೇ ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನ ವಾತಾವರಣ ಉಂಟಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್, ವಿಡಿಯೋ ಹಂಚಿಕೆ ಮಾಡುವವರ ಮೇಲೆ ಪೊಲೀಸರು ನಿಗಾ ಇಟ್ಟು ಕಾನೂನು ಕ್ರಮ ವಹಿಸುತ್ತಿದ್ದಾರೆ.
ಈಗಾಗಲೇ ಜಿಲ್ಲಾ ಪೊಲೀಸರು ಈ ಸಂಬಂಧ ಯೂಟ್ಯೂಬರ್ ಒಬ್ಬನನ್ನು ಬಂಧಿಸಿದ್ದು, ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಟ್ಟಿದ್ದಾರೆ.
ಯುದ್ಧದ ಪರ, ವಿರೋಧ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದ್ದು, ಕೆಲ ಕಿಡಿಗೇಡಿಗಳು ಪಾಕಿಸ್ತಾನದ ಪರ ಪೋಸ್ಟ್ ಹಾಕುವುದು ಕಂಡುಬಂದಿದೆ. ಅಂಥವರ ಹೆಡೆಮುರಿ ಕಟ್ಟಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ನೇತೃತ್ವದಲ್ಲಿ ಸಾಮಾಜಿಕ ಜಾಲತಾಣದ ಮೇಲೆ ತೀವ್ರ ನಿಗಾ ಇಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಿರುವ ಸಾಮಾಜಿಕ ಜಾಲತಾಣ ನಿಗಾ ಘಟಕ ಮತ್ತಷ್ಟು ಚುರುಕಿನಿಂದ ಕೆಲಸದಲ್ಲಿ ತೊಡಗಿದೆ. ಫೇಸ್ ಬುಕ್, ವಾಟ್ಸ್ ಆ್ಯಪ್ ಗ್ರೂಪ್, ಟ್ವಿಟರ್, ಇನ್'ಸ್ಟಾಗ್ರಾಮ್, ಯೂಟ್ಯೂಬ್'ಗಳ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ. ಕಾನೂನು ಬಾಹಿರ ಪೋಸ್ಟ್ ಹಾಕುವವರಿಗೆ ಚಾಟಿ ಬೀಸುತ್ತಿದ್ದಾರೆ.
ಪ್ರಚೋದನಕಾರಿ ಪೋಸ್ಟ್ ಹಾಕಿದರೆ ಉಂಟಾಗುವ ಪರಿಣಾಮಗಳ ಬಗ್ಗೆ ಎಸ್ಪಿ ನಿಖಿಲ್ ಎಚ್ಚರಿಕೆ ಕೂಡ ನೀಡಿದ್ದಾರೆ. ಈ ಸಂಬಂಧ ಕೋಲಾರ ಜಿಲ್ಲಾ ಪೊಲೀಸ್ ಫೇಸ್ ಬುಕ್ ಪುಟ, ಟ್ವಿಟರ್, ಪೊಲೀಸರ ವಾಟ್ಸ್ ಆ್ಯಪ್ ಡಿ.ಪಿಗಳಲ್ಲಿಯೂ ಹಾಕಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ದೇಶವನ್ನು ಕೆಟ್ಟದಾಗಿ ಬಿಂಬಿಸಲು ಪ್ರಯತ್ನಿಸಿದವರ ಮೇಲೆ ಕೋಲಾರ, ಮಂಡ್ಯ, ಮಂಗಳೂರು, ಬೆಂಗಳೂರು ಸೇರಿದಂತೆ ಹಲವೆಡೆ ಪ್ರಕರಣ ದಾಖಲಾಗಿದೆ. ಇಂಥ ಘಟನೆಗಳು ಮತ್ತೆ ನಡೆಯದಂತೆ ಎಚ್ಚರಿಕೆಯ ಕ್ರಮ ವಹಿಸಲಾಗಿದೆ. ಇದರ ಜೊತೆಗೆ ನಕಲಿ ಸುದ್ದಿ, ವದಂತಿ, ತಪ್ಪು ಮಾಹಿತಿ ಹರಡುವವರ ಮೇಲೂ ನಿಗಾ ಇಡಲಾಗಿದೆ.
ಪ್ರಕರಣ ದಾಖಲು: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಕೃತ್ಯ ಉಲ್ಲೇಖಿಸಿ ಬಿಹಾರದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಹಿಂದೂ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಪೂರ್ವ ನಿಯೋಜಿತವಾಗಿ ಈ ಕೃತ್ಯ ನಡೆಸಿದೆ ಎಂದಿದ್ದ ಮುನಿರ್ ಖಾನ್ ಖುರೇಷಿ ಎಂಬ
ಯೂಟ್ಯೂಬರ್ ಮೇಲೆ ಕೋಲಾರದ ಗಲ್'ಪೇಟೆ ಠಾಣೆ ಪೊಲೀಸರು ಎರಡು ದಿನಗಳ ಹಿಂದೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದರು.
'ಆಧಾರರಹಿತವಾಗಿ ಸುಳ್ಳು ಸುದ್ದಿ ಹಬ್ಬಿಸಿ ಸಾರ್ವಜನಿಕರಲ್ಲಿ ಅಶಾಂತಿ ಮೂಡಿಸಲು ಪ್ರಯತ್ನಿಸಿದ್ದಾನೆ. ಕೋಮು ಸಹಿಷ್ಣುತೆಗೆ ಧಕ್ಕೆ ಉಂಟು ಮಾಡಿದ್ದಾನೆ. ಹೀಗಾಗಿ, ಕಾನೂನು ಕ್ರಮ ಕೈಗೊಳ್ಳಲಾಗಿದೆ'ಎಂದು ಪೊಲೀಸರು ತಿಳಿಸಿದ್ದರು.
ನಾಗರಿಕರ ರಕ್ಷಣಾ ಕಾರ್ಯ; ಇಂದು ಸಭೆ
ಜಿಲ್ಲಾಧಿಕಾರಿ ಎಂ.ಆರ್.ರವಿ ಸೋಮವಾರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ನಾಗರಿಕರ ರಕ್ಷಣಾ ಕಾರ್ಯಚಟುವಟಿಕೆ ಕುರಿತು ಕೋಲಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಲಿದ್ದಾರೆ. ನಂತರ ಅದರ ನಿರ್ಣಯಗಳ ಕುರಿತು ಮಾಹಿತಿ ನೀಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.