ADVERTISEMENT

ಪಿಎಫ್‌ಐ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ

ಕ್ಲಾಕ್‌ಟವರ್‌ನಲ್ಲಿ ಪ್ರತಿಭಟನೆಗೆ ಯತ್ನ: ಪೊಲೀಸರ ಜತೆ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 15:12 IST
Last Updated 24 ಫೆಬ್ರುವರಿ 2021, 15:12 IST
ಪೂರ್ವಾನುಮತಿ ಇಲ್ಲದೆ ಕೋಲಾರದ ಕ್ಲಾಕ್‌ಟವರ್‌ನಲ್ಲಿ ಬುಧವಾರ ಪ್ರತಿಭಟನೆ ಮಾಡಲು ಮುಂದಾದ ಪಿಎಫ್‌ಐ ಕಾರ್ಯಕರ್ತರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಪೂರ್ವಾನುಮತಿ ಇಲ್ಲದೆ ಕೋಲಾರದ ಕ್ಲಾಕ್‌ಟವರ್‌ನಲ್ಲಿ ಬುಧವಾರ ಪ್ರತಿಭಟನೆ ಮಾಡಲು ಮುಂದಾದ ಪಿಎಫ್‌ಐ ಕಾರ್ಯಕರ್ತರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.   

ಕೋಲಾರ: ಪೂರ್ವಾನುಮತಿ ಇಲ್ಲದೆ ನಗರದ ಕ್ಲಾಕ್‌ಟವರ್‌ನಲ್ಲಿ ಬುಧವಾರ ಪ್ರತಿಭಟನೆ ಮಾಡಲು ಮುಂದಾದ ಪಾಪುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಉತ್ತರ ಪ್ರದೇಶ ಸರ್ಕಾರ ಅಲ್ಪಸಂಖ್ಯಾತ ಸಮುದಾಯ ಮತ್ತು ಪಿಎಫ್‌ಐ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿ ಪಿಎಫ್‌ಎಐ ಸಂಘಟನೆಯು ನಗರದಲ್ಲಿ ಪ್ರತಿಭಟನೆಗೆ ಕರೆ ನೀಡಿತ್ತು.

ಆದರೆ, ಪ್ರತಿಭಟನೆಗೆ ಅನುಮತಿ ನೀಡದ ಪೊಲೀಸರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಲು ಪಿಎಫ್‌ಐ ಮುಖಂಡರಿಗೆ ಅವಕಾಶ ನೀಡಿದ್ದರು. ಆದರೆ, ಏಕಾಏಕಿ ಕ್ಲಾಕ್‌ಟವರ್‌ನಲ್ಲಿ ಜಮಾಯಿಸಿದ ಪಿಎಫ್‌ಐ ಕಾರ್ಯಕರ್ತರು ಪ್ರತಿಭಟನೆ ಮಾಡಲು ಮುಂದಾದರು.

ADVERTISEMENT

ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನೆಗೆ ತಡೆಯೊಡ್ಡಲು ಮುಂದಾದರು. ಇದರಿಂದ ಆಕ್ರೋಶಗೊಂಡ ಪಿಎಫ್‌ಐ ಕಾರ್ಯಕರ್ತರು ಪೊಲೀಸರ ಜತೆ ವಾಗ್ವಾದಕ್ಕಿಳಿದರು. ಇದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಮನಗಂಡ ಪೊಲೀಸರು ಪಿಎಫ್‌ಐ ಸಂಘಟನೆಯ ಕೆಲ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡು ಜೀಪಿನಲ್ಲಿ ಎಳೆದೊಯ್ಯಲು ಮುಂದಾದರು.

ಆಗ ಪಿಎಫ್‌ಐ ಸಂಘಟನೆಯ ಉಳಿದ ಕಾರ್ಯಕರ್ತರು ಪೊಲೀಸ್‌ ವಾಹನಕ್ಕೆ ಅಡ್ಡ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ನೂಕು ನುಗ್ಗಲು ಉಂಟಾಗಿ ಹಲವು ಪೊಲೀಸರು ಗಾಯಗೊಂಡರು. ಬಳಿಕ ಪೊಲೀಸರು ಲಾಠಿ ಪ್ರಹಾರ ನಡೆಸಿ ಕಾರ್ಯಕರ್ತರ ಗುಂಪು ಚದುರಿಸಿದರು. ಬಳಿಕ ಪರಿಸ್ಥಿತಿ ತಿಳಿಯಾಯಿತು. ಘಟನೆ ಸಂಬಂಧ ಪೊಲೀಸರು ಪಿಎಫ್‌ಐ ಸಂಘಟನೆಯ 8 ಮಂದಿಯನ್ನು ವಶಕ್ಕೆ ತೆಗೆದುಕೊಂಡು ಸಂಜೆ ಬಿಡುಗಡೆ ಮಾಡಿದರು.

ದೌರ್ಜನ್ಯ ನಡೆಯುತ್ತಿದೆ: ‘ದೇಶದ 2ನೇ ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದವರ ವಿರುದ್ಧ ಕೋಮು ಪ್ರಚೋದಿತ ಹಿಂಸಾಚಾರ, ದಲಿತರ ಮೇಲೆ ಪದೆಪದೇ ದೌರ್ಜನ್ಯ ನಡೆಯುತ್ತಿದೆ. ಭಯೋತ್ಪಾದನಾ ಕೃತ್ಯದ ಸುಳ್ಳು ಆರೋಪದಡಿ ಪಿಎಫ್‌ಐ ಸದಸ್ಯರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ’ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಅಲ್ಪಸಂಖ್ಯಾತ ಸಮುದಾಯವನ್ನು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ. ಉತ್ತರ ಪ್ರದೇಶವು ಅಪರಾಧ ಕೃತ್ಯಗಳಿಂದ ಕ್ರಿಮಿನಲ್ ಪೊಲೀಸ್ ರಾಜ್ಯವಾಗಿ ಮಾರ್ಪಟ್ಟಿದೆ. ಯೋಗಿ ಆದಿತ್ಯನಾಥ ಅವರು ಮುಸ್ಲಿಂ ವಿರೋಧಿ ಅಜೆಂಡಾ ಜಾರಿ ಮಾಡಲು ಹೊರಟಿದ್ದಾರೆ’ ಎಂದು ಕಿಡಿಕಾರಿದರು.

‘ಮುಸ್ಲಿಮರು, ಮಹಿಳೆಯರು ಮತ್ತು ಬಾಲಕಿಯರಿಗೆ ಉತ್ತರ ಪ್ರದೇಶದಲ್ಲಿ ರಕ್ಷಣೆ ಇಲ್ಲವಾಗಿದೆ. ಗೋ ರಕ್ಷಕರ ಹೆಸರಿನಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಪಿಎಫ್‌ಐ ಮುಖಂಡರನ್ನು ಅಪರಾಧಿಗಳಂತೆ ಬಿಂಬಿಸಲಾಗುತ್ತಿದೆ. ಅಲ್ಲಿನ ಜನ ಸದಾ ಜೀವ ಭಯದಲ್ಲಿ ಬದುಕುತ್ತಿದ್ದಾರೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.