ADVERTISEMENT

ಕರ್ನಾಟಕ ಬಂದ್‌: ಪೊಲೀಸ್‌ ಕಟ್ಟೆಚ್ಚರ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 14:42 IST
Last Updated 27 ಸೆಪ್ಟೆಂಬರ್ 2020, 14:42 IST
ಕರ್ನಾಟಕ ಬಂದ್‌ ಬೆಂಬಲಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ಸದಸ್ಯರು ಕೋಲಾರದಲ್ಲಿ ಭಾನುವಾರ ಬೈಕ್‌ ರ್‌್ಯಾಲಿ ನಡೆಸಿದರು.
ಕರ್ನಾಟಕ ಬಂದ್‌ ಬೆಂಬಲಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ಸದಸ್ಯರು ಕೋಲಾರದಲ್ಲಿ ಭಾನುವಾರ ಬೈಕ್‌ ರ್‌್ಯಾಲಿ ನಡೆಸಿದರು.   

ಕೋಲಾರ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸುಗ್ರೀವಾಜ್ಞೆಗಳು ಮತ್ತು ಮಸೂದೆಗಳನ್ನು ಖಂಡಿಸಿ ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ಸಮಿತಿಯು ಸೆ.28ರಂದು ರಾಜ್ಯ ಬಂದ್‌ಗೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ಬಂದ್‌ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲೆಡೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ವಿವಿಧ ಸಂಘಟನೆಗಳ ಸದಸ್ಯರು ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆಗಳಲ್ಲಿ ಭಾನುವಾರ ಬೈಕ್‌ ರ್‌್ಯಾಲಿ ನಡೆಸಿ ಬಂದ್‌ಗೆ ಬೆಂಬಲ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.

ಆಟೊ ಚಾಲಕರು, ಸರಕು ಸಾಗಣೆ ವಾಹನ ಮಾಲೀಕರು, ಖಾಸಗಿ ಬಸ್‌ ಮಾಲೀಕರು ಮತ್ತು ಚಾಲಕರ ಒಕ್ಕೂಟವು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು, ಸಂಚಾರ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಹಾಲು, ತರಕಾರಿ, ದಿನಸಿ ಹಾಗೂ ಔಷಧ ಮಾರಾಟ ಮಳಿಗೆಗಳು ಎಂದಿನಂತೆ ತೆರೆಯಲಿವೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸೇವೆ ಒದಗಿಸಲಿವೆ. ಪೆಟ್ರೋಲ್‌ ಬಂಕ್‌, ಬ್ಯಾಂಕ್‌ಗಳಲ್ಲಿ ಪ್ರತಿನಿತ್ಯದಂತೆ ವಹಿವಾಟು ನಡೆಯುಲಿದೆ.

ADVERTISEMENT

ಶಾಂತಿಯುತವಾಗಿ ಬಂದ್‌ ನಡೆಸಬೇಕು. ಬಸ್‌ಗಳ ಮೇಲೆ ಕಲ್ಲು ತೂರುವ, ಸರ್ಕಾರಿ ಕಚೇರಿಗಳನ್ನು ಬಲವಂತವಾಗಿ ಮುಚ್ಚಿಸುವ ಪ್ರಯತ್ನ ಮಾಡಬಾರದು. ಸಾರ್ವಜನಿಕ ಆಸ್ತಿಗೆ ನಷ್ಟ ಉಂಟು ಮಾಡಬಾರದು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಮಾಡಿದರೆ ಶಿಸ್ತುಕ್ರಮ ಜರುಗಿಸುತ್ತೇವೆ ಎಂದು ಪೊಲೀಸರು ಸಂಘಟನೆಗಳ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ.

ಅಂಗಡಿ ಮಾಲೀಕರು ಸ್ವಯಂಪ್ರೇರಿತರಾಗಿ ವಹಿವಾಟು ಸ್ಥಗಿತಗೊಳಿಸಿದರೆ ಅಭ್ಯಂತರವಿಲ್ಲ. ಆದರೆ, ಸಂಘಟನೆಗಳ ಮುಖಂಡರು ಬಲವಂತವಾಗಿ ಅಂಗಡಿ ಮುಚ್ಚಿಸುವಂತಿಲ್ಲ ಹಾಗೂ ವಾಹನಗಳನ್ನು ಅಡ್ಡಗಟ್ಟುವಂತಿಲ್ಲ ಎಂದು ಪೊಲೀಸರು ಸೂಚಿಸಿದ್ದಾರೆ.

‘ಬಂದ್‌ ಹಿನ್ನೆಲೆಯಲ್ಲಿ ಬಸ್‌ ಸೇವೆ ಸ್ಥಗಿತಗೊಳಿಸುವಂತೆ ಕೇಂದ್ರ ಕಚೇರಿಯಿಂದ ಆದೇಶ ಬಂದಿಲ್ಲ. ಪರಿಸ್ಥಿತಿ ಅವಲೋಕಿಸಿ ಬಸ್‌ ಸಂಚಾರದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎಸ್‌.ಚಂದ್ರಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.