ADVERTISEMENT

ರಾಜಕಾರಣಿಗಿಂತ ಸಾಹಿತಿ ದೊಡ್ಡವನು: ಎಲ್.ಹನುಮಂತಯ್ಯ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 20:00 IST
Last Updated 18 ಆಗಸ್ಟ್ 2019, 20:00 IST
ಕೋಲಾರದಲ್ಲಿ ಭಾನುವಾರ ನಡೆದ ದಲಿತ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಗಣ್ಯರು ಪಂಚಮ ಸಂಪುಟ ಪುಸ್ತಕ ಬಿಡುಗಡೆ ಮಾಡಿದರು.
ಕೋಲಾರದಲ್ಲಿ ಭಾನುವಾರ ನಡೆದ ದಲಿತ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಗಣ್ಯರು ಪಂಚಮ ಸಂಪುಟ ಪುಸ್ತಕ ಬಿಡುಗಡೆ ಮಾಡಿದರು.   

ಕೋಲಾರ: ‘ಸಾಹಿತಿಗಳಿಗೆ ಮತ್ತು ರಾಜಕಾರಣಿಗಳಿಗೆ ವ್ಯತ್ಯಾಸವಿದ್ದು, ಇಬ್ಬರಿಗೂ ವಿವೇಕ ಇರಬೇಕು. ರಾಜಕಾರಣಿಗಳಿಗಿಂತ ಸಾಹಿತಿಗಳು ದೊಡ್ಡವರು’ ಎಂದು ದಲಿತ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟರು.

ಇಲ್ಲಿ ಭಾನುವಾರ ದಲಿತ ಸಾಹಿತ್ಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ‘ಸಾಹಿತಿಗಳಿಗೆ ನಿರೀಕ್ಷೆ ಇರುವುದಿಲ್ಲ. ಆದರೆ, ರಾಜಕಾರಣಿಗಳಿಗೆ ನಿರೀಕ್ಷೆ ಹೆಚ್ಚಿರುತ್ತವೆ. ರಾಜಕಾರಣಿಗಳು ವಸ್ತುನಿಷ್ಠವಾಗಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ಸಾಹಿತಿಗಳು, ಬರಹಗಾರರು ನೋವಿನ ಅನುಭವದ ಆಧಾರದ ಮೇಲೆ ಬರೆಯಬೇಕು. ಅದನ್ನು ಇಂತಹ ಸಮ್ಮೇಳನದಲ್ಲಿ ಗುರುತಿಸಲು ಅವಕಾಶ ಕಲ್ಪಿಸುವ ಕೆಲಸ ಆಗಬೇಕು. ರಾಜ್ಯದಲ್ಲಿ ಅನೇಕ ಬರಹಗಾರರಿದ್ದಾರೆ. ಯಾವುದೇ ಪ್ರಯತ್ನ ನಡೆಸುವಾಗ ಟೀಕೆ, ಆರೋಪ ಬರುವುದು ಸಹಜ. ಯುವ ಬರಹಗಾರರು ಈಗಿನ ಸಮಾಜಕ್ಕೆ ಅಗತ್ಯವಿರುವ ವಿಚಾರ ಕುರಿತು ಸಾಹಿತ್ಯ ರಚಿಸಬೇಕು’ ಎಂದರು.

ADVERTISEMENT

‘ಹೋರಾಟಗಾರರ ಇತಿಹಾಸ ದಾಖಲು ಮಾಡಬೇಕಿದೆ. ಮಲ ಹೊರುವಂತಹ ಅನಿಷ್ಠ ಪದ್ಧತಿ ಇಂದಿಗೂ ಇದೆ. ಎಷ್ಟು ಮಂದಿ ಪೌರ ಕಾರ್ಮಿಕರು ಈ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಸರ್ಕಾರದ ಅಂಕಿಅಂಶ ಹೇಳುತ್ತದೆ. ಆದರೆ, ಅದರ ವಿರುದ್ಧ ಧ್ವನಿ ಎತ್ತುವವರ ಸಂಖ್ಯೆ ಕಡಿಮೆಯಾಗಿದೆ’ ಎಂದು ವಿಷಾದಿಸಿದರು.

ಹಕ್ಕೊತ್ತಾಯ ಆಗಬೇಕು: ‘ದಲಿತ ಸಾಹಿತ್ಯ ರಚಿಸಿರುವ ಸಾಹಿತಿಗಳ ಪೈಕಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಪಡೆದವರಿದ್ದಾರೆ. ಅವರ ಪ್ರಯತ್ನವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕು. ಸ್ಥಳೀಯ ಸಮಸ್ಯೆಗಳ ಜತೆಗೆ ಶೋಷಿತರ ಪರ ವಿಚಾರಗೋಷ್ಠಿ, ಸಮ್ಮೇಳನಗಳು ನಡೆಯುತ್ತಿರುವುದು ಶ್ಲಾಘನೀಯ. ಸಮ್ಮೇಳನಗಳಲ್ಲಿ ಚರ್ಚೆಯ ಜತೆಗೆ ಪರಿಹಾರ ಕಲ್ಪಿಸುವ ಹಕ್ಕೊತ್ತಾಯ ಆಗಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಆರ್.ಚೌಡರೆಡ್ಡಿ ಆಶಿಸಿದರು.

‘ಈ ಹಿಂದೆ ಪರಿಷತ್ತಿನಿಂದ ಕೇಂದ್ರಕ್ಕೆ ನಿಯೋಗ ಹೋಗಿದ್ದಾಗ ಯಾರೂ ಸಹ ದಲಿತರಿಗೆ ಕೆಲಸ ಕೊಡಿ ಎಂದು ಕೇಳಲಿಲ್ಲ. ನಿಯೋಗದಲ್ಲಿದ್ದ ದಲಿತ ಸಾಹಿತಿಗಳು ಮುಂದಿನ ಪೀಳಿಗೆಯ ಅನುಕೂಲಕ್ಕಾಗಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಬೇಕೆಂಬ ಉದ್ದೇಶದಿಂದ ಮನವಿ ಮಾಡಿದರು’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್ ವಿವರಿಸಿದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್‌ಕುಮಾರ್ ಹೊಸಮನಿ ಅವರು ಪಂಚಮ ಸಂಪುಟ ಪುಸ್ತಕ ಬಿಡುಗಡೆಗೊಳಿಸಿದರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ವಿದ್ವಾಂಸ ಮಲ್ಲೇಪುರಂ ಜಿ.ವೆಂಕಟೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್, ದಲಿತ ಮುಖಂಡರಾದ ಸಿ.ಎಂ.ಮುನಿಯಪ್ಪ, ಟಿ.ವಿಜಿಕುಮಾರ್, ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.