ADVERTISEMENT

ಕಳಪೆ ರಸ್ತೆ ಕಾಮಗಾರಿ: ವರ್ತಕರ ಆರೋಪ

ವರ್ತಕರಿಂದ ಸಾಂಕೇತಿಕ ಪ್ರತಿಭಟನೆ: ರಸ್ತೆ ಸರಿಪಡಿಸುವ ಆಯುಕ್ತರ ಭರವಸೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 7:10 IST
Last Updated 3 ಜನವರಿ 2026, 7:10 IST
ಕೆಜಿಎಫ್‌ ಎಂ.ಜಿ.ಮಾರುಕಟ್ಟೆಯಲ್ಲಿ ಕಳಪೆ ರಸ್ತೆ ಕಾಮಗಾರಿ ನಡೆದಿದೆ ಎಂದು ಆರೋಪಿಸಿದ್ದ ವರ್ತಕರ ಜೊತೆ ಶುಕ್ರವಾರ ಆಯುಕ್ತ ಆಂಜನೇಯಲು ಮಾತನಾಡಿದರು
ಕೆಜಿಎಫ್‌ ಎಂ.ಜಿ.ಮಾರುಕಟ್ಟೆಯಲ್ಲಿ ಕಳಪೆ ರಸ್ತೆ ಕಾಮಗಾರಿ ನಡೆದಿದೆ ಎಂದು ಆರೋಪಿಸಿದ್ದ ವರ್ತಕರ ಜೊತೆ ಶುಕ್ರವಾರ ಆಯುಕ್ತ ಆಂಜನೇಯಲು ಮಾತನಾಡಿದರು   

ಕೆಜಿಎಫ್‌: ರಾಬರ್ಟಸನ್‌ಪೇಟೆಯ ಎಂ.ಜಿ.ಮಾರುಕಟ್ಟೆಯಲ್ಲಿ ಈಚೆಗೆ ಹಾಕಿರುವ ರಸ್ತೆಯು ಅತ್ಯಂತ ಕಳಪೆಯಿಂದ ಕೂಡಿದ್ದು, ವ್ಯಾಪಾರಸ್ಥರಿಗೆ ಅನಾನುಕೂಲ ಉಂಟಾಗುತ್ತಿದೆ ಎಂದು ಸೆಕೆಂಡ್‌ ಎಂ.ಜಿ.ಮಾರುಕಟ್ಟೆಯ ವರ್ತಕರು ಶುಕ್ರವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.

‘ಮಾರುಕಟ್ಟೆಯಲ್ಲಿ ಸಿಮೆಂಟ್‌ ರಸ್ತೆ ನಿರ್ಮಾಣ ಮಾಡುವುದಾಗಿ ಅದಕ್ಕೆ ವರ್ತಕರು ಸಹಕಾರ ಕೊಡಬೇಕೆಂದು ನಗರಸಭೆಯಿಂದ ಕೋರಲಾಗಿತ್ತು. ಅದರಂತೆ, ವರ್ತಕರು ಎಲ್ಲಾ ರೀತಿಯ ಸಹಕಾರ ನೀಡಿದ್ದರು. ಈಗ ನಿರ್ಮಾಣವಾಗಿರುವ ರಸ್ತೆಯು ಕಳಪೆ ಗುಣಮಟ್ಟದಿಂದ ಕೂಡಿದೆ. ರಸ್ತೆಯಲ್ಲಿ ಸಿಮೆಂಟ್‌ಗಿಂತ ಎಂಸ್ಯಾಂಡ್‌ ಎದ್ದು ಕಾಣುತ್ತಿದೆ. ಒಂದು ವಾಹನ ಬಂದರೆ ಸಾಕು, ಇಡೀ ಪ್ರದೇಶ ಧೂಳು ಮಯವಾಗಿರುತ್ತದೆ. ಅಂಗಡಿಗಳಲ್ಲಿ ಕುಳಿತುಕೊಳ್ಳಲು ಆಗುತ್ತಿಲ್ಲ. ಹೊಸದಾಗಿ ಹಾಕಿರುವ ರಸ್ತೆಯಲ್ಲಿ ಈಗಲೇ ಜಲ್ಲಿ ಕಲ್ಲುಗಳು ಎದ್ದು ಕಾಣುತ್ತಿವೆ. ರಸ್ತೆಯೇ ಇಲ್ಲದೆ ಇದ್ದರೆ ನಮಗೆ ಚೆನ್ನಾಗಿರುತ್ತಿತ್ತು. ರಸ್ತೆ ನಿರ್ಮಾಣ ಮಾಡಿ ವ್ಯವಸ್ಥೆ ಅತ್ಯಂತ ಹದಗೆಟ್ಟಿದೆ’ ಎಂದು ವರ್ತಕರು ದೂರಿದರು.

‘ರಸ್ತೆ ನಿರ್ಮಾಣ ಮಾಡಿದ ಗುತ್ತಿಗೆದಾರರು ಹೆಚ್ಚು ಮಳೆ ಬರುತ್ತಿದ್ದಾಗ, ರಸ್ತೆ ಕಾಮಗಾರಿ ನಡೆಸಿದ್ದಾರೆ. ಮಳೆಯಲ್ಲಿ ಕಾಮಗಾರಿ ಮಾಡಿದರೆ ರಸ್ತೆ ಬಾಳಿಕೆ ಬರುವುದಿಲ್ಲ ಎಂದು ಗುತ್ತಿಗೆದಾರರಿಗೆ ಮಾರುಕಟ್ಟೆ ವರ್ತಕರು ತಿಳಿಸಿದ್ದರು. ಆದರೂ, ಗುತ್ತಿಗೆದಾರರು ನಮ್ಮ ಮಾತನ್ನು ಲೆಕ್ಕಿಸದೆ ರಸ್ತೆ ನಿರ್ಮಾಣ ಮಾಡಿ, ಇಷ್ಟೆಲ್ಲಾ ಅನಾಹುತಕ್ಕೆ ಕಾರಣರಾಗಿದ್ದಾರೆ. ಇಡೀ ರಸ್ತೆಗೆ ಎರಡು ಟ್ಯಾಂಕ್‌ನಲ್ಲಿ ಮಾತ್ರ ನೀರು ಹಾಕಿದ್ದಾರೆ. ಇಂತಹ ಕಳಪೆ ರಸ್ತೆ ಕೆಜಿಎಫ್‌ನಲ್ಲಿ ಎಲ್ಲಿಯೂ ಕಾಣುವುದಿಲ್ಲʼ ಎಂದು ವರ್ತಕರು ಆರೋಪಿಸಿದರು.

ADVERTISEMENT

ಸ್ಥಳಕ್ಕೆ ಆಗಮಿಸಿದ ನಗರಸಭೆ ಆಯುಕ್ತ ಆಂಜನೇಯಲು ವರ್ತಕರೊಂದಿಗೆ ಮಾತನಾಡಿ, ‘ಗುತ್ತಿಗೆದಾರರು ಕೆಲಸ ಮಾಡುವಾಗ ವರ್ತಕರು ಸಹಕಾರ ನೀಡಲಿಲ್ಲ. ರಸ್ತೆ ನಿರ್ಮಾಣ ಮಾಡುತ್ತಿದ್ದಾಗ ವಾಹನ ಸಂಚಾರ ನಿಲ್ಲಿಸುವಂತೆ ಅವರು ಕೋರಿದ್ದರೂ, ವರ್ತಕರು ವಾಹನದಲ್ಲಿ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದರು. ರಸ್ತೆ ನಿರ್ಮಾಣ ಮಾಡಿದ ಮೇಲೆ ಕನಿಷ್ಠ ನಾಲ್ಕು ದಿನವಾದರೂ ಅಂಗಡಿ ಮುಚ್ಚುವಂತೆ ತಿಳಿಸಲಾಗಿತ್ತು. ಆದರೆ, ಮಾಡಲಿಲ್ಲ. ಇದರಿಂದಾಗಿ ಕೆಲಸದ ಗುಣಮಟ್ಟದಲ್ಲಿ ಸಣ್ಣಪುಟ್ಟ ತಪ್ಪಾಗಿದೆ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ನಗರಸಭೆ ಮಾಡುವ ಖರ್ಚು ನಿಮ್ಮ ತೆರಿಗೆ ಹಣ. ನಿಮ್ಮ ಸಹಕಾರ ಅಗತ್ಯʼ ಎಂದರು.

‘ಗುತ್ತಿಗೆದಾರರು ಈಗ ತಪ್ಪನ್ನು ಸರಿಪಡಿಸಲು ಮುಂದೆ ಬಂದಿದ್ದಾರೆ. ಎಂಜಿನಿಯರ್‌ಗಳ ಮಾರ್ಗದರ್ಶನದಂತೆ ರಸ್ತೆ ನಿರ್ಮಾಣ ಮಾಡಲಾಗುವುದುʼ ಎಂದು ಆಯುಕ್ತರು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.