ADVERTISEMENT

ಗುಂಡಿಮಯವಾದ ಕೆಜಿಎಫ್ ರಸ್ತೆ: ಜೀವ ಕೈಯಲ್ಲಿಡಿದು ವಾಹನ ಸವಾರರ ಸಂಚಾರ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 14:24 IST
Last Updated 5 ಏಪ್ರಿಲ್ 2024, 14:24 IST
ಮುಳಬಾಗಿಲಿನಿಂದ ಕೆಜಿಎಫ್ ಕಡೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳು.
ಮುಳಬಾಗಿಲಿನಿಂದ ಕೆಜಿಎಫ್ ಕಡೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳು.   

ಮುಳಬಾಗಿಲು: ಮುಳಬಾಗಿಲಿನಿಂದ ಕೆಜಿಎಫ್ ಕಡೆಗೆ ಹೋಗುವ ರಾಜ್ಯ ಹೆದ್ದಾರಿ ಗುಂಡಿಗಳಿಂದ ಕೂಡಿದ್ದು, ವಾಹನ ಸವಾರರು ಜೀವ ಕೈಯಲ್ಲಿಡಿದು ಸಂಚರಿಸಬೇಕಾಗಿದೆ.

ಮುಳಬಾಗಿಲು ನಗರದ ರಾಷ್ಟ್ರೀಯ ಹೆದ್ದಾರಿ 75ರಿಂದ ಹೊನಗಾನಹಳ್ಳಿಯವರೆಗೂ ರಸ್ತೆಯ ಉದ್ದಕ್ಕೂ ಡಾಂಬರು ಕಿತ್ತು ಹೋಗಿದ್ದು, ಗುಂಡಿಗಳು ಬಿದ್ದಿವೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. 

ಈ ರಸ್ತೆ ಕೆಜಿಎಫ್, ಬೇತಮಂಗಲ, ವಿ.ಕೋಟೆ, ಗುಟ್ಟಹಳ್ಳಿ, ಬಂಗಾರಪೇಟೆ, ಕ್ಯಾಸಂಬಳ್ಳಿ ಮುಂತಾದ ಊರುಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆ ಮೂಲಕ ಬೈಕ್‌, ಬಸ್‌, ಶಾಲಾ ವಾಹನ, ಆಂಬುಲೆನ್ಸ್‌ ಮತ್ತಿತರ ವಾಹನಗಳು ಸಂಚರಿಸುತ್ತವೆ. ವಾಹನ ಸವಾರರು ಸ್ವಲ್ಪ ಗಮನ ಬೇರೆಡೆ ಹರಿಸಿದರೆ ವಾಹನಗಳು ಗುಂಡಿಗೆ ಬೀಳುವುದು. ಹೀಗಿರುವ ರಸ್ತೆ ಅನೇಕ ವರ್ಷಗಳಿಂದ ದುರಸ್ಥಿಯಾಗದೆ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂಬುದು ವಾಹನ ಸವಾರರ ಅಳಲಾಗಿದೆ.

ADVERTISEMENT

ಕಾಶಿಪುರ ವಸತಿ ನಿಲಯದ ಮುಂಭಾಗ, ಚೆನ್ನಾಪುರ ಗೇಟ್, ಅಂಗೊಂಡಹಳ್ಳಿ, ರೆಡ್ಡಿಹಳ್ಳಿ, ಹೊನಗಾನ ಹಳ್ಳಿ ಮತ್ತಿತರ ಕಡೆಗಳಲ್ಲಿ ರಸ್ತೆ ಬಹುತೇಕ ಗುಂಡಿ ಬಿದ್ದಿದೆ. ಪ್ರತಿದಿನ ಸಂಚರಿಸುವ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸುವುದೇ ಬೇಡ ಎಂದು ರಸ್ತೆಗೆ ಹಿಡಿಶಾಪ ಹಾಕತ್ತಾರೆ. ಹಾಗಾಗಿ ಕೂಡಲೇ ರಸ್ತೆ ದುರಸ್ಥಿಪಡಿಸಬೇಕೆಂದು ವಾಹನ ಸವಾರರು ಒತ್ತಾಯಿಸಿದ್ದಾರೆ.

ರಸ್ತೆಯಲ್ಲಿ ಅವೈಜ್ಞಾನಿಕ ಉಬ್ಬುಗಳು: ಇನ್ನು ರಸ್ತೆಯಲ್ಲಿ ಹಲವಾರು ಕಡೆ ಅವೈಜ್ಞಾನಿಕವಾಗಿ ಎತ್ತರದ ಉಬ್ಬುಗಳನ್ನು ನಿರ್ಮಿಸಿದ್ದಾರೆ. ನಾಮಫಲಕಗಳಾಗಲಿ ಅಥವಾ ಸುರಕ್ಷತಾ ಕ್ರಮಗಳಾಗಲಿ ಇಲ್ಲ. ಆದ್ದರಿಂದ ವೇಗವಾಗಿ ಸಂಚರಿಸುವವರು ಉಬ್ಬುಗಳು ಕಾಣದೆ ಬೀಳುತ್ತಿದ್ದಾರೆ.

ಗ್ರಾಮದ ಹೆಸರು ತೋರಿಸುವ ನಾಮಫಲಕ ಶಿಥಿಲ: ಇನ್ನೂ ಮುಖ್ಯರಸ್ತೆಯಿಂದ ಹಲವಾರು ಗ್ರಾಮಗಳಿಗೆ ವಿಳಾಸ ಹಾಗೂ ಮಾರ್ಗ ತೋರಿಸುವ ನಾಮ ಫಲಕಗಳಲ್ಲಿ ಎಮ್ಮೆನತ್ತ ಗ್ರಾಮಕ್ಕೆ ವಿಳಾಸ ತೋರಿಸುವ ನಾಮಫಲಕ ಗೋಡೆ ಬಿದ್ದು ವರ್ಷಗಳೇ ಕಳೆದಿದೆ. ಬಿದ್ದು ಹೋಗಿರುವ ಗೋಡೆಯನ್ನು ಕನಿಷ್ಠ ಸ್ವಚ್ಛತೆ ಮಾಡದೆ ನಾಮ ಫಲಕ ಬರೆಸದೆ ಇರುವುದರಿಂದ ಹೊಸದಾಗಿ ಸಂಚಾರ ಮಾಡುವವರು ಬೇರೆಯವರನ್ನು ವಿಳಾಸ ಕೇಳಿ ಸಂಚರಿಸುವಂತಾಗಿದೆ.

ಅವೈಜ್ಞಾನಿಕವಾಗಿ ನಿರ್ಮಿಸಿರುವ ಉಬ್ಬುಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.