
ಕೋಲಾರ: ಸಮಗ್ರ ಪದ್ಧತಿಯಡಿ ಕೋಳಿ ಸಾಕಣೆ ವೆಚ್ಚ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಮುಂದಾಗಬೇಕೆಂದು ರಾಜ್ಯ ಕೋಳಿ ಸಾಕಣೆದಾರ ರೈತರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಧರ್ ರೆಡ್ಡಿ ಆಗ್ರಹಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ 25 ಸಾವಿರ ಹಾಗೂ ಜಿಲ್ಲೆಯಲ್ಲಿ 1,200 ಮಂದಿ ಕೋಳಿ ಸಾಕಣೆದಾರರಿದ್ದಾರೆ. 10 ಸಾವಿರ ಕೋಳಿಗಳ ಬ್ಯಾಚ್ ಸಾಕಣೆಗೆ ₹ 1.40 ಲಕ್ಷದಿಂದ 1.60 ಲಕ್ಷವರೆಗೆ ವೆಚ್ಚವಾಗಲಿದ್ದು, ಪ್ರತಿ ಕೆ.ಜಿಗೆ ₹ 12 ರಿಂದ 13 ಖರ್ಚು ಬರಲಿದೆ’ ಎಂದರು.
2021ರಲ್ಲಿ ಕೋಳಿ ಸಾಕಣೆ ದರವನ್ನು ಸರ್ಕಾರವು ₹ 6.50ಕ್ಕೆ ಪರಿಷ್ಕರಿಸಿದ್ದು, ಅದಾದ ಬಳಿಕ ಪರಿಷ್ಕರಣೆಗೆ ಮುಂದಾಗಲೇ ಇಲ್ಲ. 4 ತಿಂಗಳಿಂದಲೂ ಈ ಬಗ್ಗೆ ನಿರಂತರವಾಗಿ ದನಿ ಎತ್ತಿದ್ದರೂ ಪ್ರಯೋಜನವಾಗಿಲ್ಲ. ಜ.31 ರಂದು ಪಶುಪಾಲನಾ ಇಲಾಖೆ ಆಯುಕ್ತರು ಸಭೆ ಕರೆದಿದ್ದು, ಅಂದು ಸ್ವಾಮಿನಾಥನ್ ವರದಿಯ ಪ್ರಕಾರ ಪ್ರತಿ ಕೆ.ಜಿಗೆ ₹ 20ನಿಗದಿ ಮಾಡಬೇಕು. ರೇಷ್ಮೆ ಬೆಳೆಗಾರರು ಹಾಗೂ ಹಾಲು ಉತ್ಪಾದಕರಿಗೆ ನೀಡುವಂತೆ ಕೋಳಿ ಸಾಕಣೆದಾರರಿಗೂ ಸಹಾಯಧನ ನೀಡಬೇಕು. ಕೃಷಿ ಕ್ಷೇತ್ರದಲ್ಲಿ ನಮ್ಮನ್ನೂ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ತಮಿಳುನಾಡು ರಾಜ್ಯದಲ್ಲಿ ಕೋಳಿ ಸಾಕಣೆದಾರ ರೈತರ ಪ್ರತಿಭಟನೆಗೆ ಸ್ಪಂದಿಸಿರುವ ಸರ್ಕಾರ ಸಾಕಣೆ ದರ ಹೆಚ್ಚಿಸುವುದಾಗಿ ಅಲ್ಲಿನ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಕೋಳಿ ಸಾಕಣೆ ಕ್ಷೇತ್ರದ ಕಂಪನಿಗಳ ಶೋಷಣೆಯಿಂದಾಗಿ ರೈತರನ್ನು ರಕ್ಷಿಸಲು ಇಂದಿನ ಕೋಳಿ ಸಾಕಣೆ ವೆಚ್ಚ ಪರಿಗಣಿಸಿ ದರವನ್ನು ಹೆಚ್ಚಿಸಿದಲ್ಲಿ ಸಾಕಷ್ಟು ಅನುಕೂಲವಾಗಲಿದೆ. ಒಂದು ವೇಳೆ ಜ.31ರ ಸಭೆಯಲ್ಲಿ ನಮಗೆ ನ್ಯಾಯ ಸಿಗದಿದ್ದಲ್ಲಿ ತಮಿಳುನಾಡು ಮಾದರಿಯ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಪ್ರಕಾಶ್ ರೆಡ್ಡಿ ಮಾತನಾಡಿ, ‘ಕುಕ್ಕುಟೋದ್ಯಮವನ್ನು ಕೃಷಿ ಕ್ಷೇತ್ರವೆಂದು ಪರಿಗಣಿಸುವಂತೆ 2013 ರಿಂದಲೂ ನಿರಂತರವಾಗಿ ಹೋರಾಟ ಮಾಡಿಕೊಂಡು ಬರಲಾಗಿದೆ. ದೇಶದ ಸುಮಾರು 114 ರಾಜ್ಯಗಳಲ್ಲಿ ಈಗಾಗಲೇ ಪರಿಗಣಿಸಿದ್ದು, ಇಲ್ಲಿಯೂ ಪರಿಗಣಿಸಿದರೆ ಸಹಾಯಧನ ಸೇರಿದಂತೆ ಇನ್ನಿತರೆ ಅನುಕೂಲ ಆಗಲಿದೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ಟಿ.ಎಂ.ವೆಂಕಟೇಶ್, ತಾಲ್ಲೂಕು ಅಧ್ಯಕ್ಷ ಶೆಟ್ಟಿಹಳ್ಳಿ ವೆಂಕಟೇಶಪ್ಪ. ಮುಖಂಡರಾದ ಗೋಪಾಲ್, ರಮೇಶ್, ಶಾಪೂರು ಮುನಿಸ್ವಾಮಿಗೌಡ, ವೆಂಕಟರಾಮರೆಡ್ಡಿ, ವೆಂಕಟೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.