ADVERTISEMENT

ಬಂಗಾರಪೇಟೆ | ಕರಾಟೆ, ಟೇಕ್ವಾಂಡೊದಲ್ಲಿ ಮಿಂಚಿದ ಪ್ರಣಾವ್

ಕಾಂತರಾಜು ಸಿ. ಕನಕಪುರ
Published 16 ಡಿಸೆಂಬರ್ 2022, 5:53 IST
Last Updated 16 ಡಿಸೆಂಬರ್ 2022, 5:53 IST
ಬಂಗಾರಪೇಟೆಯ ಜಪಾನ್‌ ಶೀಟೋರಾಯ್ ಕರಾಟೆ ಸ್ಕೂಲ್ ಮಾಸ್ಟರ್ ಜಿ. ವೆಂಕಟರಮಣ ಅವರೊಂದಿಗೆ ಪ್ರಣಾವ್   
ಬಂಗಾರಪೇಟೆಯ ಜಪಾನ್‌ ಶೀಟೋರಾಯ್ ಕರಾಟೆ ಸ್ಕೂಲ್ ಮಾಸ್ಟರ್ ಜಿ. ವೆಂಕಟರಮಣ ಅವರೊಂದಿಗೆ ಪ್ರಣಾವ್      

ಬಂಗಾರಪೇಟೆ: ಪಟ್ಟಣದ ದೇಶಿಹಳ್ಳಿಯ ಜಿ.ಆರ್. ಪ್ರಣಾವ್ ಕರಾಟೆ ಹಾಗೂ ಟೇಕ್ವಾಂಡೊ ಕ್ರೀಡೆಯಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ.

ಕಳೆದ ನವೆಂಬರ್‌ನಲ್ಲಿ ಗೋವಾದಲ್ಲಿ ನಡೆದ 8ನೇ ಗೋವಾ ಓಪನ್ ಇಂಟರ್‌ ನ್ಯಾಷನಲ್ ಕರಾಟೆ ಚಾಂಪಿಯನ್‌ಶಿಪ್‌ನ ಕುಮಿತೆಯಲ್ಲಿ ಚಿನ್ನ ಹಾಗೂ ಕಟ್ಟಾದಲ್ಲಿ ಕಂಚಿನ ಪದಕ ಗಳಿಸಿರುವುದು ಅವರ ಪ್ರತಿಭೆಗೆ ಸಾಕ್ಷಿಯಾಗಿದೆ. ಕರಾಟೆಯ ವಿಧಗಳಾದ ಕಟ್ಟಾ ಹಾಗೂ ಕುಮಿತೆ, ಅದೇ ರೀತಿ ಟೇಕ್ವಾಂಡೊದ ಕ್ಯೂರ್ಗಿ ಹಾಗೂ ಪೂಮ್ಸೆದಲ್ಲಿ ಅವರು ವಿಶೇಷ ತಂತ್ರಗಾರಿಕೆ ಕಲಿತಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ 1 ಚಿನ್ನ, 1 ಕಂಚಿನ ಪದಕ, ರಾಷ್ಟ್ರೀಯ ಮಟ್ಟದಲ್ಲಿ 2 ಚಿನ್ನ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಎರಡೆರಡು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿರುವ ಹೆಗ್ಗಳಿಕೆ ಅವರದು.

ADVERTISEMENT

ಹಾಗೆಯೇರಾಜ್ಯಮಟ್ಟದ ಟೇಕ್ವೊಂಡೊ ಟೂರ್ನಿಯಲ್ಲಿ 1 ಚಿನ್ನ, 1 ಬೆಳ್ಳಿ, ಜಿಲ್ಲಾ ಮಟ್ಟದಲ್ಲಿ 2 ಚಿನ್ನ ಸೇರಿದಂತೆ ಒಟ್ಟು 12 ಚಿನ್ನ, 1 ಬೆಳ್ಳಿ, 1 ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

‘ಮಾವ ಹಾಗೂ ಪಕ್ಕದ ಮನೆಯ ಸ್ನೇಹಿತರು ಕರಾಟೆ ತರಗತಿಗೆ ಹೋಗುತ್ತಿದ್ದರು. ಅವರನ್ನು ಕಂಡ ಅಮ್ಮ ನನ್ನನ್ನು ಕರಾಟೆಗೆ ಕಳುಹಿಸಿದರು. 7ನೇ ತರಗತಿಯಲ್ಲಿ ಇರುವಾಗಲೇ ಕರಾಟೆಗೆ ಸೇರಿದೆ. ಇದರಲ್ಲಿಯೇ ಸಾಧಿಸುವ ಆಸೆಯಿದೆ. ತಂದೆ ಜಾರ್ಜ್ ಮೋಹನ್ ರಾಮಸ್ವಾಮಿ ಅವರ ಪ್ರೋತ್ಸಾಹದಿಂದ ಈ ಮಟ್ಟಕ್ಕೆ ತಲುಪಿದ್ದೇನೆ’ ಎನ್ನುತ್ತಾರೆ ಪ್ರಣಾವ್.

ತಾಲ್ಲೂಕಿನಲ್ಲಿಯೇ ಮೊದಲ ಬಾರಿಗೆ ಅವರು ಅಂತರರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ ಚಿನ್ನದ ಪದಕ ಗಳಿಸಿರುವುದು ವಿಶೇಷ. ಪಟ್ಟಣದ ಜಪಾನ್ ಶಿಟೋರಾಯ್ ಕರಾಟೆ ಸ್ಕೂಲ್‌ನ ಜಿ. ವೆಂಕಟರಮಣ ಅವರ ತರಬೇತಿಯಲ್ಲಿ ಪಳಗಿರುವ ಈ ಯುವಕನ ಕ್ರೀಡಾ ಉತ್ಸಾಹಕ್ಕೆ ಅವರೇ ಸಾಟಿ.

ಕರಾಟೆ ಮತ್ತು ಟೇಕ್ವಾಂಡೊ ಕ್ರೀಡೆಗಳನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕಡ್ಡಾಯಗೊಳಿಸಬೇಕು. ಕ್ರಿಕೆಟ್ ಸೇರಿದಂತೆ ಇತರ ಕ್ರೀಡೆಗಳಿಗೆ ಸಿಗುವ ಪ್ರೋತ್ಸಾಹ ಈ ಕ್ರೀಡೆಗೂ ಸಿಗಬೇಕು ಎನ್ನುವುದು ಅವರ ಅಭಿಲಾಷೆ.

ಟೇಕ್ವಾಂಡೊ ಕ್ರೀಡೆಯಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದರೆ ಸರ್ಕಾರದಿಂದ ಕ್ರಮವಾಗಿ ₹ 50 ಸಾವಿರ ಹಾಗೂ ₹ 1 ಲಕ್ಷ ಪ್ರೋತ್ಸಾಹಧನ ನೀಡಲಿದೆ. ಹೆಚ್ಚಿನ ಮಕ್ಕಳು ಈ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಕರಾಟೆ, ಟೇಕ್ವಾಂಡೊ ಮಾಸ್ಟರ್ ಜಿ. ವೆಂಕಟರಮಣ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.