ADVERTISEMENT

ಪ್ರತಿಭಾ ಕಾರಂಜಿ: 1,700 ಮಕ್ಕಳು ಭಾಗಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 13:39 IST
Last Updated 3 ಫೆಬ್ರುವರಿ 2020, 13:39 IST

ಕೋಲಾರ: ‘ಜಿಲ್ಲಾ ಕೇಂದ್ರದಲ್ಲಿ ನಡೆಯುವ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 1,700 ಮಕ್ಕಳು ಬರುತ್ತಿದ್ದು, ಅವರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಹೇಳಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮಕ್ಕಳ ವಾಸ್ತವ್ಯವಿರುವ ಕಡೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತದೆ. ದಿನದ 24 ತಾಸೂ ಆರೋಗ್ಯ ಸೇವೆ ಕಲ್ಪಿಸಲಾಗುತ್ತದೆ. ಸ್ಪರ್ಧೆಯ ತೀರ್ಪುಗಾರರ ವಾಸ್ತವ್ಯಕ್ಕೆ ಅಂದ್ರಹಳ್ಳಿ ಆಶ್ರಮದಲ್ಲಿ ವ್ಯವಸ್ಥೆ ಮಾಡಲಾಗಿದೆ. ಕ್ಲಸ್ಟರ್‌ ಸಂಪನ್ಮೂಲ ಅಧಿಕಾರಿಗಳಾದ ಮಂಜುನಾಥ್ ಮತ್ತು ನಟರಾಜ್ ಸ್ಪರ್ಧೆಯ ಉಸ್ತುವಾರಿ ನೋಡಿಕೊಳ್ಳುತ್ತಾರೆ’ ಎಂದರು.

‘ಹೊರ ಜಿಲ್ಲೆಗಳ ಬರುವ ನೋಡಲ್ ಅಧಿಕಾರಿಗಳ ವಾಸ್ತವ್ಯಕ್ಕೆ ವಡಗೂರು ಕ್ರಾಸ್‌ ಬಳಿಯ ಕೋರ್-ಇನ್ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಹಲವು ಜಿಲ್ಲೆಗಳ ಮಕ್ಕಳ ವಾಸ್ತವ್ಯಕ್ಕೆ ಒಂದೊಂದು ಕಡೆ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಂದ ಸ್ಪರ್ಧೆಯ ಸ್ಥಳಕ್ಕೆ ಕರೆದೊಯ್ಯಲು ಬಸ್ ಸೌಕರ್ಯ ಕಲ್ಪಿಸಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ಬಾಗಲಕೋಟೆ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ವಿಜಯಪುರ, ಬೀದರ್, ಬಳ್ಳಾರಿ, ಬೆಳಗಾವಿ ಜಿಲ್ಲೆ ಮಕ್ಕಳು ಕೋರ್ಟ್ ವೃತ್ತದ ಬಳಿಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಉಳಿದುಕೊಳ್ಳುತ್ತಾರೆ. ಚಾಮರಾಜನಗರ, ಚಿಕ್ಕೊಡಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ ಜಿಲ್ಲೆ ಮಕ್ಕಳು ಬೋವಿ ಕಾಲೊನಿಯ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಉಳಿದುಕೊಳ್ಳಲಿದ್ದು, ಅಲ್ಲಿಂದ ಬಸ್‌ನಲ್ಲಿ ಸ್ಪರ್ಧೆಯ ಸ್ಥಳಕ್ಕೆ ಬರುತ್ತಾರೆ’ ಎಂದು ಮಾಹಿತಿ ನೀಡಿದರು.

‘ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ದಾವಣಗೆರೆ ಜಿಲ್ಲೆ ಮಕ್ಕಳ ವಾಸ್ತವ್ಯಕ್ಕೆ ಕೆಂಬೋಡಿಯ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಅವಕಾಶ ಕಲ್ಪಿಸಲಾಗಿದೆ. ಗದಗ, ಕಲಬುರ್ಗಿ, ಹಾವೇರಿ, ಹಾಸನ, ಕೊಪ್ಪಳ, ಕೊಡಗು, ಕೋಲಾರ ಜಿಲ್ಲೆ ಮಕ್ಕಳು ಹಾರೋಹಳ್ಳಿಯ ಗೋಕುಲ ಸಮೂಹ ವಿದ್ಯಾಸಂಸ್ಥೆಯಲ್ಲಿ ವಾಸ್ತವ್ಯ ಹೂಡುತ್ತಾರೆ’ ಎಂದು ತಿಳಿಸಿದರು.

‘ಮೈಸೂರು, ಮಧುಗಿರಿ, ಮಂಡ್ಯ, ರಾಮನಗರ ಜಿಲ್ಲೆ ಮಕ್ಕಳು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಉಳಿದುಕೊಳ್ಳುತ್ತಾರೆ. ರಾಯಚೂರು, ಶಿವಮೊಗ್ಗ, ಶಿರಸಿ, ತುಮಕೂರು, ಉತ್ತರ ಕನ್ನಡ, ಉಡುಪಿ, ಯಾದಗಿರಿ ಜಿಲ್ಲೆಯ ಮಕ್ಕಳು ರೈಲು ನಿಲ್ದಾಣದ ಬಳಿಯ ಚಿನ್ಮಯ ಶಿಶು ವಿಹಾರದಲ್ಲಿ ತಂಗುತ್ತಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.