
ಕೋಲಾರ: ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧಾ ಕಾರ್ಯಕ್ರಮದಲ್ಲಿ ಮೊದಲ ಸ್ಥಾನ ಪಡೆದ ವಿವಿಧ ಶಾಲೆಯ 36 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಶುಕ್ರವಾರ ನಗರದ ಅಲ್‌ಅಮೀನ್ ಅಂಜುಮಾನ್ ಶಾಲೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳಲ್ಲಿ 294 ವಿದ್ಯಾರ್ಥಿಗಳು ಪಾಲ್ಗೊಂಡು ಗಮನ ಸೆಳೆದರು. 36 ಸ್ಪರ್ಧಾ ಪ್ರಕಾರಗಳು ನಡೆದವು.
ಗಜಲ್, ಕವಾಲಿ, ಜಾನಪದ ಗೀತೆ, ಅಭಿನಯ ಗೀತೆ, ಭಾವಗೀತೆ, ಮಣ್ಣಿನ ಕಲಾಕೃತಿ ನಿರ್ಮಾಣ, ರಸಪ್ರಶ್ನೆ, ಕಂಠಪಾಠ, ಭಾಷಣ, ಪ್ರಬಂಧ, ಆಶುಭಾಷಣ, ಧಾರ್ಮಿಕ ಪಠಣ, ಚಿತ್ರಕಲೆ, ರಂಗೋಲಿ, ಚರ್ಚಾ ಸ್ಪರ್ಧೆಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಈ ಎಲ್ಲಾ ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಪಡೆದವರು ರಾಜ್ಯಮಟ್ಟ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಒಟ್ಟು 108 ಮಂದಿ ತೀರ್ಪುಗಾರರು ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದ ಮಕ್ಕಳನ್ನು ಆಯ್ಕೆ ಮಾಡಿದರು. ಜಿಲ್ಲಾಮಟ್ಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.
ಇದಕ್ಕೂ ಮೊದಲು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ (ಡಿಡಿಪಿಐ) ಅಲ್ಮಾಸ್ ಫರ್ವೀನ್ ತಾಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳು ಅಗತ್ಯವಾಗಿವೆ. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರತರಲು ಪ್ರತಿಭಾಕಾರಂಜಿ ಉತ್ತಮ ವೇದಿಕೆಯಾಗಿದ್ದು ಆತ್ಮಸ್ಥೈರ್ಯ ತುಂಬಿ ಪ್ರೋತ್ಸಾಹಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದರು.
ಕಲಿಕೆಗೆ ಪೂರಕವಾದ ನೈಪುಣ್ಯ ಹೊಂದಿ ಮಕ್ಕಳಿಗೆ ಬೋಧನೆ ಮಾಡಿದರೆ ಮಾತ್ರವೇ ಶಿಕ್ಷಕ ವೃತ್ತಿಗೆ ನ್ಯಾಯ ಒದಗಿಸಬಹುದು. ಸ್ಪರ್ಧಾತ್ಮಕ ಪೈಪೋಟಿಗೆ ಅನುಗುಣವಾಗಿ ಮಕ್ಕಳನ್ನು ಸಿದ್ಧಪಡಿಸಲು ಸಾಧ್ಯ ಎಂದು ತಿಳಿಸಿದರು.
ಪ್ರತಿಭಾ ಕಾರಂಜಿ ಜಿಲ್ಲಾ ನೋಡಲ್ ಅಧಿಕಾರಿ ಶಂಕರೇಗೌಡ ಸ್ವಾಗತಿಸಿ, ಪ್ರತಿಭಾ ಕಾರಂಜಿ ಹೆಸರೇ ಸೂಚಿಸುವಂತೆ ಮಕ್ಕಳಲ್ಲಿನ ಪ್ರತಿಭೆ ಚಿಲುಮೆಯಂತೆ ಹೊರ ಚಿಮ್ಮಲಿ. ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರ ಎತ್ತಿಹಿಡಿಯುವ ಕಲೆಗಳಿಗೂ ಪ್ರೋತ್ಸಾಹ ನೀಡಿ. ಮಕ್ಕಳಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಸಮಗ್ರ ಶಿಕ್ಷಣದ ಭಾಗವಾಗಲಿ ಎಂದರು.
ಶಾಲಾ ಶಿಕ್ಷಣ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಮಂಜುಳಾ, ‘ಪ್ರತಿಭಾ ಕಾರಂಜಿಯನ್ನು 27 ವರ್ಷಗಳಿಂದ ನಡೆಸಿಕೊಂಡು ಬರಲಾಗಿದೆ. ಸಮಗ್ರ ಶಿಕ್ಷಣದ ಭಾಗವಾಗಿ ಪಠ್ಯದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಇಂದು ಅಗತ್ಯವಾಗಿವೆ’ ಎಂದು ಹೇಳಿದರು.
ಜಿಲ್ಲಾ ಪ್ರೌಢಶಾಲಾ ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ ಆಂಜನೇಯ ಮಾತನಾಡಿ, ‘ತೀರ್ಪುಗಾರರು ಅತ್ಯಂತ ಎಚ್ಚರಿಕೆಯಿಂದ ತೀರ್ಪು ನೀಡಬೇಕು. ಇದು ರಾಜ್ಯಮಟ್ಟದಲ್ಲಿ ಭಾಗವಹಿಸುವಾಗ ಪರಿಣಾಮ ಬೀರುವುದರಿಂದ ಅರ್ಹರಿಗೆ ಮಾತ್ರ ಅವಕಾಶ ಸಿಗಬೇಕು’ ಎಂದರು.
ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಪ್ರತಿನಿಧಿ ವೇಣುಗೋಪಾಲ್, ವಿಷಯ ಪರಿವೀಕ್ಷಕ ಸಮೀವುಲ್ಲಾ ಮಾತನಾಡಿದರು.
ಡಿಡಿಪಿಐ ಕಚೇರಿಯ ಶರಣಪ್ಪ ಜಮಾದಾರ್ ನಿರೂಪಿಸಿದರು. ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಚಂದ್ರಶೇಖರ್, ವಿಷಯ ಪರಿವೀಕ್ಷಕಿ ಬಬಿತಾ, ಪ್ರತಿಭಾ ಕಾರಂಜಿ ವಿವಿಧ ತಾಲ್ಲೂಕುಗಳ ನೋಡಲ್ ಅಧಿಕಾರಿಗಳಾದ ಇಸಿಒ ನಾಗರಾಜ್, ರಘುಕುಮಾರ್, ರಘುನಾಥರೆಡ್ಡಿ, ಕೃಷ್ಣೇಗೌಡ, ಸುಬ್ರಹ್ಮಣ್ಯರೆಡ್ಡಿ, ಸುಬ್ರಮಣಿ, ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಗೌರವಾಧ್ಯಕ್ಷ ಮುನಿರಾಜು, ಪದಾಧಿಕಾರಿಗಳಾದ ಕೃಷ್ಣೇಗೌಡ, ಅಂಬರೀಷ್, ಮುಖ್ಯಶಿಕ್ಷಕ ಹನುಮನಹಳ್ಳಿ ನಾಗರಾಜ್ ಇದ್ದರು.
ರಾಜ್ಯಮಟ್ಟದಲ್ಲೂ ಗೆದ್ದು ಬನ್ನಿ
ತಾಲ್ಲೂಕು ಹಂತದಲ್ಲಿ ಪ್ರಥಮ ಸ್ಥಾನ ಪಡೆದ ಮಕ್ಕಳು ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ. ಜಿಲ್ಲೆಯ ಮಕ್ಕಳು ರಾಜ್ಯಮಟ್ಟದಲ್ಲೂ ಉತ್ತಮ ಸಾಧನೆ ಮಾಡಿ ಜಿಲ್ಲೆಯ ಘನತೆ ಹೆಚ್ಚಿಸಬೇಕು ಎಂದು ಡಿಡಿಪಿಐ ಅಲ್ಮಾಸ್ ಫರ್ವೀನ್ ತಾಜ್ ಹೇಳಿದರು. ಗೆಲ್ಲುವ ಛಲದೊಂದಿಗೆ ಮಕ್ಕಳು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ಗೆಲುವಿಗಿಂತ ಭಾಗವಹಿಸುವಿಕೆಯ ಅತಿ ಮುಖ್ಯ. ಶಿಕ್ಷಕರು ಮಕ್ಕಳಲ್ಲಿನ ವೇದಿಕೆ ಭಯ ಹೋಗಲಾಡಿಸಲು ನಿರಂತರ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.