ADVERTISEMENT

ಸಕಲ ಸಿದ್ಧತೆ: ಮತದಾನಕ್ಕೆ ಕ್ಷಣಗಣನೆ

ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ 2ನೇ ಹಂತದ ಚುನಾವಣೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 7:45 IST
Last Updated 26 ಡಿಸೆಂಬರ್ 2020, 7:45 IST
ಸಿ.ಸತ್ಯಭಾಮ
ಸಿ.ಸತ್ಯಭಾಮ   

ಕೋಲಾರ: ಜಿಲ್ಲೆಯ 3 ತಾಲ್ಲೂಕುಗಳ ವ್ಯಾಪ್ತಿಯ 67 ಗ್ರಾಮ ಪಂಚಾಯಿತಿಗಳಿಗೆ 2ನೇ ಹಂತದಲ್ಲಿ ಭಾನುವಾರ (ಡಿ.27) ಚುನಾವಣೆ ನಡೆಯಲಿದ್ದು, ಜಿಲ್ಲಾಡಳಿತವು ಮತದಾನಕ್ಕೆ ಸಕಲ ಸಿದ್ಧತೆ ಮಾಡಿದೆ.

ಒಟ್ಟಾರೆ 67 ಗ್ರಾ.ಪಂಗಳಲ್ಲಿ 1,202 ಸದಸ್ಯ ಸ್ಥಾನಗಳಿದ್ದು, ಈ ಪೈಕಿ 106 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಮುಳಬಾಗಿಲು ತಾಲ್ಲೂಕಿನ ಗ್ರಾಮ ಪಂಚಾಯಿತಿಯೊಂದರ ಒಂದು ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿಲ್ಲ.

ಉಳಿದ 1,095 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅಂತಿಮವಾಗಿ 2,990 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಮತದಾರರು ಭಾನುವಾರ ಅಭ್ಯರ್ಥಿಗಳ ಸೋಲು ಗೆಲುವು ನಿರ್ಧರಿಸಲಿದ್ದಾರೆ.

ADVERTISEMENT

ಮನೆ ಮನೆ ಪ್ರಚಾರಕ್ಕೆ ಶನಿವಾರ ಸಂಜೆ ತೆರೆ ಬಿದ್ದಿದ್ದು, ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಭ್ಯರ್ಥಿಗಳು ಮತದಾರರ ಓಲೈಕೆಗೆ ಕಸರತ್ತು ಮುಂದುವರಿಸಿದ್ದು, ಉಡುಗೊರೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಮೂರೂ ತಾಲ್ಲೂಕುಗಳಿಂದ ಒಟ್ಟಾರೆ 682 ಮತಗಟ್ಟೆ ಸ್ಥಾಪಿಸಲಾಗಿದ್ದು, 92 ಸೂಕ್ಷ್ಮ, 69 ಅತಿ ಸೂಕ್ಷ್ಮ ಹಾಗೂ 521 ಸಾಮಾನ್ಯ ಮತಗಟ್ಟೆಗಳಾಗಿವೆ. ಮತದಾನಕ್ಕೆ ಬ್ಯಾಲೆಟ್‌ ಪೇಪರ್‌ ಮತ್ತು ಮತಪೆಟ್ಟಿಗೆ ಬಳಸಲಾಗುತ್ತಿದೆ. 2,772 ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ ಶೇ 10ರಷ್ಟು ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ.

ಪ್ರತಿ ಮತಗಟ್ಟೆಗೆ ಪೊಲೀಸರು, ಗೃಹರಕ್ಷಕ ದಳ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರನ್ನು ನೇಮಿಸಲಾಗಿದೆ. ಸಿಬ್ಬಂದಿಗೆ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜತೆಗೆ ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಿಸಲಾಗುತ್ತದೆ.

ಮತದಾರರೆಷ್ಟು?: ಮೂರೂ ತಾಲ್ಲೂಕುಗಳಿಂದ ಒಟ್ಟಾರೆ 3,83,206 ಮತದಾರರಿದ್ದಾರೆ. ಬಂಗಾರಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ 63,841 ಮಂದಿ ಪುರುಷ, 61,942 ಮಂದಿ ಮಹಿಳೆಯರು ಹಾಗೂ 17 ಇತರೆ ಮತದಾರರು ಸೇರಿದಂತೆ 1,25,800 ಮತದಾರರಿದ್ದಾರೆ.

ಕೆಜಿಎಫ್‌ ತಾಲ್ಲೂಕು ವ್ಯಾಪ್ತಿಯಲ್ಲಿ 45,727 ಪುರುಷ, 45,075 ಮಹಿಳೆ ಮತ್ತು 3 ಇತರೆ ಮತದಾರರು ಸೇರಿದಂತೆ 90,805 ಮತದಾರರಿದ್ದಾರೆ. ಮುಳಬಾಗಿಲು ತಾಲ್ಲೂಕು ವ್ಯಾಪ್ತಿಯಲ್ಲಿ 83,457 ಪುರುಷ, 83,141 ಮಹಿಳೆ ಹಾಗೂ 3 ಮಂದಿ ಇತರೆ ಮತದಾರರು ಸೇರಿದಂತೆ 1,66,601 ಮತದಾರರಿದ್ದಾರೆ.

ಮತಗಟ್ಟೆಗೆ ಸಿಬ್ಬಂದಿ: ಮತಗಟ್ಟೆ ಸಿಬ್ಬಂದಿಯು ಆಯಾ ತಾಲ್ಲೂಕು ವ್ಯಾಪ್ತಿಯ ಮಸ್ಟರಿಂಗ್‌ ಕೇಂದ್ರಗಳಲ್ಲಿ ಶನಿವಾರ ಮತಪೆಟ್ಟಿಗೆ ಮತ್ತು ಬ್ಯಾಲೆಟ್‌ ಪೇಪರ್‌ ಪಡೆದು ಪೊಲೀಸ್‌ ಭದ್ರತೆಯಲ್ಲಿ ಮತಗಟ್ಟೆಗಳಿಗೆ ತಲುಪಿದರು. ಮತಗಟ್ಟೆ ಸಿಬ್ಬಂದಿಗೆ ಮಸ್ಟರಿಂಗ್‌ ಕೇಂದ್ರಗಳಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.

ಮತಗಟ್ಟೆ ಅಧಿಕಾರಿಗಳ ಆರೋಗ್ಯದ ದೃಷ್ಟಿಯಿಂದ ವೈದ್ಯಕೀಯ ಸೇವೆ ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಔಷಧಗಳು, ಓಆರ್‍ಎಸ್ ಪೊಟ್ಟಣ ಮತ್ತು ಆಯಕಟ್ಟಿನ ಜಾಗದಲ್ಲಿ ಆಂಬುಲೆನ್ಸ್‌ ಸೇವೆ ಕಲ್ಪಿಸಲಾಗಿದೆ.

ಪೊಲೀಸ್‌ ಕಟ್ಟೆಚ್ಚರ: ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಚುನಾವಣಾ ನೀತಿಸಂಹಿತೆ ತಂಡದ ಅಧಿಕಾರಿಗಳು ಹಣ, ಮದ್ಯ ಹಾಗೂ ಉಡುಗೊರೆ ಹಂಚಿಕೆ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಜತೆಗೆ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಚುನಾವಣಾ ಅಕ್ರಮಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಪೊಲೀಸ್‌, ಗೃಹರಕ್ಷಕ ದಳ ಸಿಬ್ಬಂದಿ, ರಾಜ್ಯ ಮೀಸಲು ಪೊಲೀಸ್‌ ಪಡೆ (ಕೆಎಸ್‌ಆರ್‌ಪಿ), ಜಿಲ್ಲಾ ಸಶಸ್ತ್ರ ಮೀಸಲು ಪಡೆಯನ್ನು (ಡಿಎಆರ್‌) ಭದ್ರತೆಗೆ ನಿಯೋಜಿಸಲಾಗಿದೆ.

ಶಸ್ತ್ರಾಸ್ತ್ರ ಸಾಗಣೆ, ಪ್ರದರ್ಶನ ಹಾಗೂ ಬಳಕೆ ನಿರ್ಬಂಧಿಸಲಾಗಿದೆ. ಹಿರಿಯ ಪೊಲೀಸ್‌ ಅಧಿಕಾರಿಗಳು, ಮಾದರಿ ಚುನಾವಣಾ ನೀತಿಸಂಹಿತೆ ತಂಡದ ಅಧಿಕಾರಿಗಳು ಹಾಗೂ ಚುನಾವಣಾ ವೀಕ್ಷಕರು ನಿಯಮಿತವಾಗಿ ಗಸ್ತು ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.