ADVERTISEMENT

ಬೆಲೆ ಕುಸಿತ: ಕ್ಯಾಪ್ಸಿಕಂ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 10:40 IST
Last Updated 3 ಏಪ್ರಿಲ್ 2020, 10:40 IST
ಕೋಲಾರ ತಾಲ್ಲೂಕಿನ ಹೂಹಳ್ಳಿ ಗ್ರಾಮದ ರೈತ ಗೋಪಿ ಮತ್ತು ಕುಟುಂಬ ಸದಸ್ಯರು ಬೆಲೆ ಕುಸಿತದ ಕಾರಣಕ್ಕೆ ತಮ್ಮ ಜಮೀನಿನಲ್ಲಿನ ದಪ್ಪ ಮೆಣಸಿನಕಾಯಿ ಬೆಳೆಯನ್ನು ಗುರುವಾರ ನಾಶಪಡಿಸಿದರು.
ಕೋಲಾರ ತಾಲ್ಲೂಕಿನ ಹೂಹಳ್ಳಿ ಗ್ರಾಮದ ರೈತ ಗೋಪಿ ಮತ್ತು ಕುಟುಂಬ ಸದಸ್ಯರು ಬೆಲೆ ಕುಸಿತದ ಕಾರಣಕ್ಕೆ ತಮ್ಮ ಜಮೀನಿನಲ್ಲಿನ ದಪ್ಪ ಮೆಣಸಿನಕಾಯಿ ಬೆಳೆಯನ್ನು ಗುರುವಾರ ನಾಶಪಡಿಸಿದರು.   

ಕೋಲಾರ: ಕೊರೊನಾ ಸೋಂಕಿನ ಕಾರಣಕ್ಕೆ ಸಂಚಾರ ಸೇವೆ ಸ್ಥಗಿತಗೊಂಡು ದಪ್ಪ ಮೆಣಸಿನಕಾಯಿ (ಕ್ಯಾಪ್ಸಿಕಂ) ಬೆಲೆ ಗಣನೀಯವಾಗಿ ಕುಸಿದಿರುವುದರಿಂದ ಬೇಸರಗೊಂಡ ತಾಲ್ಲೂಕಿನ ಹೂಹಳ್ಳಿ ಗ್ರಾಮದ ರೈತ ಗೋಪಿ ಅವರು ಗುರುವಾರ ಕ್ಯಾಪ್ಸಿಕಂ ಬೆಳೆಯನ್ನು ನಾಶಪಡಿಸಿದರು.

ಗೋಪಿ ಅವರು ಬರ ಪರಿಸ್ಥಿತಿ ನಡುವೆಯೂ ತಮ್ಮ 2 ಎಕರೆ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕ್ಯಾಪ್ಸಿಕಂ ಬೆಳೆದಿದ್ದರು. ಆದರೆ, ದಿಗ್ಬಂಧನ ಆದೇಶದಿಂದ ತರಕಾರಿ ಸಾಗಣೆ ಮತ್ತು ವಹಿವಾಟಿನಲ್ಲಿ ವ್ಯತ್ಯಯವಾಗಿ ಕ್ಯಾಪ್ಸಿಕಂ ಬೆಲೆ ಏಕಾಏಕಿ ಕುಸಿತ ಕಂಡಿದೆ. ಕೊಯ್ಲಿಗೆ ಬಂದಿದ್ದ ಕ್ಯಾಪ್ಸಿಕಂ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದ ಕಾರಣ ಗೋಪಿ ಮನನೊಂದಿದ್ದರು.

ಮಾರುಕಟ್ಟೆಗೆ ಕ್ಯಾಪ್ಸಿಕಂ ಸಾಗಿಸಲು ವಾಹನ ಸೌಲಭ್ಯ ಸಿಗದೆ ಮತ್ತು ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಕ್ಯಾಪ್ಸಿಕಂ ಖರೀದಿಸದ ಕಾರಣ ಸಾಕಷ್ಟು ತೊಂದರೆ ಅನುಭವಿಸಿದ್ದ ಗೋಪಿ ಅವರು 2 ಎಕರೆಯಲ್ಲಿನ ಬೆಳೆಯನ್ನು ಸಂಪೂರ್ಣ ನಾಶಪಡಿಸಿದರು.

ADVERTISEMENT

‘ಬಡ್ಡಿ ಸಾಲ ಮಾಡಿ ಬೆಳೆ ಬೆಳೆದ ರೈತರ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಮಾರುಕಟ್ಟೆಯಲ್ಲಿ ಕ್ಯಾಪ್ಸಿಕಂ ಕೇಳುವವರಿಲ್ಲ. ಜಿಲ್ಲಾಡಳಿತ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ಗೋಪಿ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.