ADVERTISEMENT

ಸಮಸ್ಯೆ ಸಾಮಾನ್ಯ: ನೌಕರರು ಎದೆಗುಂದಬೇಡಿ

ಅಭಿನಂದನಾ ಸಮಾರಂಭದಲ್ಲಿ ನೂತನ ಜಿಲ್ಲಾಧಿಕಾರಿ ಸೆಲ್ವಮಣಿ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 15:14 IST
Last Updated 18 ಫೆಬ್ರುವರಿ 2021, 15:14 IST
ಜಿಲ್ಲಾ ಸರ್ಕಾರಿ ನೌಕರರ ಸಂಘವು ಕೋಲಾರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ನೂತನ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಸರ್ಕಾರಿ ನೌಕರರ ಸಂಘವು ಕೋಲಾರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ನೂತನ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರನ್ನು ಸನ್ಮಾನಿಸಲಾಯಿತು.   

ಕೋಲಾರ: ‘ಶೋಷಿತರಿಗೆ ನೆರವಾಗೋಣ. ಜಿಲ್ಲೆಗೆ ಒಳ್ಳೆಯ ಹೆಸರು ಬರುವಂತೆ ಒಟ್ಟಾಗಿ ಕೆಲಸ ಮಾಡಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸೋಣ’ ಎಂದು ನೂತನ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ನೌಕರರಿಗೆ ಕಿವಿಮಾತು ಹೇಳಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘವು ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ‘ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ. ಸಮುದಾಯಕ್ಕೆ ಒಳ್ಳೆಯದು ಮಾಡಿದರೆ ಸಾಕು. ಜನಪರ ಕಾರ್ಯಕ್ಕೆ ಎಂದಿಗೂ ನಿಮ್ಮೊಂದಿಗೆ ಇರುತ್ತೇನೆ’ ಎಂದು ತಿಳಿಸಿದರು.

‘ಕರ್ತವ್ಯದಲ್ಲಿ ಎದುರಾಗುವ ಅಡ್ಡಿ ಆತಂಕಗಳಿಗೆ ಹೆದರಿ ಕುಳಿತರೆ ಕಷ್ಟದಲ್ಲಿರುವವರಿಗೆ ಸ್ಪಂದಿಸುವವರು ಯಾರು? ನಾನು 25 ರಾಜ್ಯ ಓಡಾಡಿ ಬಂದಿದ್ದೇನೆ. ರಾಜ್ಯದ ಬೀದರ್, ರಾಯಚೂರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲಸ ಮಾಡಿದ್ದೇನೆ. ಎಲ್ಲಾ ಕಡೆ ಸಮಸ್ಯೆ ಸಾಮಾನ್ಯ. ನೌಕರರು ಎದೆಗುಂದಬಾರದು’ ಎಂದರು.

ADVERTISEMENT

‘ಸಮಾಜದಲ್ಲಿ ಸರ್ಕಾರಿ ನೌಕರರಿಗೆ ಗೌರವವಿದೆ. ಅದಕ್ಕೆ ಧಕ್ಕೆಯಾಗದಂತೆ ಕೆಲಸ ಮಾಡೋಣ. ಇಲಾಖೆಗಳಲ್ಲಿ ಸಮಸ್ಯೆಗಳಿದ್ದರೆ ನೇರವಾಗಿ ನನ್ನ ಬಳಿ ಬಂದು ಮಾತನಾಡಿ. ನಿಮ್ಮೊಂದಿಗೆ ಮುಕ್ತವಾಗಿ ಮಾತನಾಡಲು ಸಿದ್ಧ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಸರ್ಕಾರಿ ನೌಕರರ ಸಂಘ ಮತ್ತಷ್ಟು ಬಲಿಷ್ಠಗೊಳಿಸಿ. ಸಂಕಷ್ಟದಲ್ಲಿರುವ ನೌಕರರಿಗೆ ಸ್ಪಂದಿಸಲು ಸಹಕಾರ ಸಂಘ ಮಾಡಿಕೊಳ್ಳಿ. ಬಡ ನೌಕರರಿಗೆ ನೆರವಾಗಿ ಮತ್ತು ನೌಕರರ ಸಂಘದ ಕಟ್ಟಡಕ್ಕೆ ಅಗತ್ಯವಿರುವ ಜಮೀನು ಮಂಜೂರಾತಿಗೆ ನಿಯಾನುಸಾರ ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

ಕಾರ್ಯ ಒತ್ತಡ: ‘ಪೋಡಿ ಅದಾಲತ್, ಕಂದಾಯ ಅದಾಲತ್‌ನಂತಹ ಕಾರ್ಯಕ್ರಮಗಳ ಮೂಲಕ ವಿವಿಧ ಇಲಾಖೆಗಳ ಸೇವೆಯನ್ನು ಜನರ ಬಳಿಗೆ ತಲುಪಿಸುವ ಕೆಲಸವನ್ನು ಜಿಲ್ಲಾಧಿಕಾರಿಯವರ ಮಾರ್ಗದರ್ಶನದಲ್ಲಿ ಮಾಡುತ್ತೇವೆ’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಹೇಳಿದರು.

‘ಹಲವು ಇಲಾಖೆಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿಯಿದ್ದು, ನೌಕರರ ಮೇಲೆ ಕಾರ್ಯ ಒತ್ತಡ ಹೆಚ್ಚಿದೆ. ನೌಕರರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೂ ಕೆಲ ಬಾರಿ ದೂರು, ಸಮಸ್ಯೆಗಳು ಎದುರಾಗಿ ನೈತಿಕ ಸ್ಥೈರ್ಯ ಕುಂದುವ ವಾತಾವರಣ ಎದುರಾಗುತ್ತದೆ. ಅಂತಹ ಸಂದರ್ಭದಲ್ಲಿ ಪರಿಶೀಲನೆ ನಡೆಸಿ ಕ್ರಮ ವಹಿಸಬೇಕು. ನೌಕರರಿಂದ ತಪ್ಪಾಗಿದ್ದರೆ ತಿದ್ದಿ ಬುದ್ಧಿ ಹೇಳಿ’ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

‘ನೌಕರರ ಚಟುವಟಿಕೆಗಳನ್ನು ನಡೆಸಲು ಭವನದಲ್ಲಿ ಜಾಗ ಸಾಲದು. ಆದ್ದರಿಂದ ಹೊಸ ಭವನದ ಕಟ್ಟಡಕ್ಕೆ ಅಗತ್ಯವಿರುವ ಜಮೀನಿಗೆ ಮನವಿ ಮಾಡಿದ್ದು, ಮಂಜೂರು ಮಾಡಬೇಕು. ಹಾಲಿ ಇರುವ ಕಟ್ಟಡ ನವೀಕರಣಕ್ಕೆ ಅನುದಾನ ನೀಡಬೇಕು’ ಎಂದು ಕೋರಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಖಜಾಂಚಿ ವಿಜಯ್, ಗೌರವಾಧ್ಯಕ್ಷ ರವಿಚಂದ್ರ, ನಿಕಟಪೂರ್ವ ಅಧ್ಯಕ್ಷ ಕೆ.ಎನ್.ಮಂಜುನಾಥ್, ಹಿರಿಯ ಉಪಾಧ್ಯಕ್ಷ ಶ್ರೀನಿವಾಸರೆಡ್ಡಿ, ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.