ADVERTISEMENT

ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 3:16 IST
Last Updated 24 ಮಾರ್ಚ್ 2021, 3:16 IST
ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಅವ್ಯವಹಾರಗಳನ್ನು ರೈತ ಸಂಘದ ಮುಖಂಡರು ಆಯುಕ್ತ ಜಹೀರ್ ಅಬ್ಬಾಸ್ ಅವರಿಗೆ ಮಂಗಳವಾರ ವಿವರಿಸಿದರು
ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಅವ್ಯವಹಾರಗಳನ್ನು ರೈತ ಸಂಘದ ಮುಖಂಡರು ಆಯುಕ್ತ ಜಹೀರ್ ಅಬ್ಬಾಸ್ ಅವರಿಗೆ ಮಂಗಳವಾರ ವಿವರಿಸಿದರು   

ಕೆಜಿಎಫ್‌: ಸರ್ಕಾರಿ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಬಡಾವಣೆ ನಿರ್ಮಾಣಕ್ಕೆ ಅನುಮತಿ ನೀಡುತ್ತಿರುವ ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಅವ್ಯವಹಾರವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಮಂಗಳವಾರ ಪ್ರಾಧಿಕಾರದ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಮುಖಂಡ ನಾರಾಯಣಗೌಡ, ‘ಪ್ರಾಧಿಕಾರದಲ್ಲಿ ಹಣ ಕೊಟ್ಟರೆ ಎಲ್ಲಾ ಅಕ್ರಮ ಕೆಲಸಗಳು ಸಕ್ರಮವಾಗುತ್ತದೆ. ರಾಜಕಾಲುವೆ, ಕೆರೆ, ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದರೂ ಗಮನಿಸದೆ ಬಡಾವಣೆ ರಚನೆಗೆ ಅನುಮತಿ ನೀಡುತ್ತಾರೆ. ಬಡಾವಣೆ ನಿರ್ಮಾಣಕ್ಕೆ ಮೊದಲು ಜಿಲ್ಲಾಧಿಕಾರಿ, ಸರ್ವೆ ಇಲಾಖೆಯಿಂದ ಭೂ ಪರಿವರ್ತನೆಯಾಗಬೇಕು. ನಂತರ ಸ್ಥಳೀಯ ಪ್ರಾಧಿಕಾರಗಳು ಸ್ಥಳ ಪರಿಶೀಲನೆ ಮಾಡಿ ಅನುಮತಿ ನೀಡಬೇಕು. ಆದರೆ ಇವೆಲ್ಲವೂ ಕಾಗದದಲ್ಲಿದೆ. ಆದರೆ ವಾಸ್ತವದಲ್ಲಿ ದುಡ್ಡು ಕೊಟ್ಟರೆ ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಹಲವಾರು ಪುರಾವೆಗಳು ಇವೆ’ ಎಂದು ಆರೋಪಿಸಿದರು.

‘ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. 2010 ರಿಂದ 2020 ವರೆವಿಗೂ ಪ್ರಾಧಿಕಾರದಲ್ಲಿ ಅನುಮೋದನೆಗೊಂಡಿರುವ ಬಡಾ ವಣೆಗಳ ಬಗ್ಗೆ ತನಿಖೆ ನಡೆಸಬೇಕು. ಅಕ್ರಮ ಬಡಾವಣೆಗಳ ಪರವಾನಿಗೆಯನ್ನು ರದ್ದುಗೊಳಿಸಬೇಕು’ ಎಂದು ನಾರಾಯಣಗೌಡ ಆಗ್ರಹಿಸಿದರು.

ADVERTISEMENT

ನಂತರ ಪ್ರಾಧಿಕಾರದ ಆಯುಕ್ತ ಜಹೀರ್ ಅಬ್ಬಾಸ್ ಅವರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಐತಾಂಡಹಳ್ಳಿ ಮಂಜುನಾಥ್‌, ಮಹಮದ್ ಅಮೀರ್, ಅನ್ಸರ್‌ ಪಾಷ, ಮಂಜು, ಶಿವಾರಡ್ಡಿ, ಚಾಂದ್ ಪಾಷ, ಗಣೇಶ್‌, ಶರೀಫ್‌, ಯಾಸಿನ್‌, ಕಿರಣ್‌, ಐತಾಂಡಹಳ್ಳಿ ಮುನ್ನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.