ADVERTISEMENT

ಏಪ್ರಿಲ್‍ನಲ್ಲಿ ಎನ್‍ಪಿಎಸ್ ರದ್ದತಿಗೆ ಹೋರಾಟ: ಸಿ.ಎಸ್.ಷಡಕ್ಷರಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 4:13 IST
Last Updated 26 ನವೆಂಬರ್ 2022, 4:13 IST
ಕೋಲಾರದಲ್ಲಿ ಗುರುವಾರ ಸಂಜೆ ನಡೆದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ಜಿಲ್ಲಾ ಅಧ್ಯಕ್ಷ ಜಿ.ಸುರೇಶ್‌ ಬಾಬು, ಜಿಲ್ಲಾಧಿಕಾರಿ ವೆಂಕಟ್‌ ರಾಜಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌, ಜಿಲ್ಲಾ ಕಸಾಪ ಅಧ್ಯಕ್ಷ ಎನ್‌.ಬಿ.ಗೋಪಾಲಗೌಡ ಇದ್ದಾರೆ
ಕೋಲಾರದಲ್ಲಿ ಗುರುವಾರ ಸಂಜೆ ನಡೆದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ಜಿಲ್ಲಾ ಅಧ್ಯಕ್ಷ ಜಿ.ಸುರೇಶ್‌ ಬಾಬು, ಜಿಲ್ಲಾಧಿಕಾರಿ ವೆಂಕಟ್‌ ರಾಜಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌, ಜಿಲ್ಲಾ ಕಸಾಪ ಅಧ್ಯಕ್ಷ ಎನ್‌.ಬಿ.ಗೋಪಾಲಗೌಡ ಇದ್ದಾರೆ   

ಕೋಲಾರ: ‘ಮಾರ್ಚ್‍ನಲ್ಲಿ 7ನೇ ವೇತನ ಆಯೋಗ ಜಾರಿ ಆಗಲಿದ್ದು, ಏಪ್ರಿಲ್‍ನಲ್ಲಿ ಎನ್‍ಪಿಎಸ್ ರದ್ದತಿಗೆ ನಿರ್ಣಾಯಕ ಹೋರಾಟ ನಡೆಸಲಾಗುವುದು’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸರ್ವಸದಸ್ಯರ ಸಭೆ, ಪ್ರತಿಭಾ ಪುರಸ್ಕಾರ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಎನ್‍ಪಿಎಸ್ ರದ್ದತಿ ರಾಷ್ಟ್ರಮಟ್ಟದಲ್ಲಿ ಆದರೆ ಒಳಿತು ಎಂಬ ಕಾರಣದಿಂದ ಪ್ರಧಾನಿಗೆ ಹತ್ತಿರವಾಗಿರುವ ಕೇಂದ್ರ ಸಚಿವ ಪ್ರಲ್ಹಾದ್‍ ಜೋಷಿ ಅವರೊಂದಿಗೆ ಚರ್ಚಿಸಲಾಗಿದೆ. ಪ್ರಧಾನಿ ಗಮನಕ್ಕೆ ತರಲು ಅವರು ಒಪ್ಪಿಗೆ ನೀಡಿದ್ದಾರೆ’ ಎಂದು ಹೇಳಿದರು.

ADVERTISEMENT

‘ನೌಕರರಲ್ಲೂ ಸಾಮಾಜಿಕ ಕಾಳಜಿ ಇದೆ. 1975ರಿಂದ ಈವರೆಗೆ ₹ 1,700 ಕೋಟಿಗೂ ಹೆಚ್ಚು ಹಣ ಪ್ರಕೃತಿ ವಿಕೋಪ, ಕೋವಿಡ್ ಮತ್ತಿತರ ಸಂದರ್ಭಗಳಲ್ಲಿ ನೀಡಿದ್ದೇವೆ. ಇದೀಗ ಪುಣ್ಯಕೋಟಿ ಅತ್ಯಂತ ಮಾನವೀಯ ಯೋಜನೆಗೆ ₹ 100 ಕೋಟಿ ಹಣ ನೀಡೋಣ. ಇದಕ್ಕೆ ವಿರೋಧ ಬೇಡ. ಸರ್ಕಾರ ವೇತನ ಆಯೋಗದ ಮೂಲಕ ನಮಗೆ ₹ 12 ಸಾವಿರ ಕೋಟಿ ನೀಡುತ್ತಿದೆ’ ಎಂದು ತಿಳಿಸಿದರು.

‘ರಾಜ್ಯ ಸಂಘ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದು, ₹ 50 ಲಕ್ಷ ವೆಚ್ಚದಲ್ಲಿ ನೌಕರರ ಮಕ್ಕಳಿಗೆ ಐಎಎಸ್, ಐಪಿಎಸ್, ಕೆಎಎಸ್‍ಗೆ ಉಚಿತ ಕೋಚಿಂಗ್ ಕೇಂದ್ರವನ್ನು ಬೆಂಗಳೂರಿನಲ್ಲಿ ತೆರೆಯಲು ಮುಂದಾಗಿದ್ದೇವೆ. ವರ್ಷಕ್ಕೆ ₹ 1 ಕೋಟಿ ವೆಚ್ಚದಲ್ಲಿ ಪ್ರತಿಭಾ ಪುರಸ್ಕಾರಕ್ಕೆ ಖರ್ಚು ಮಾಡಲಾಗುತ್ತಿದೆ’ ಎಂದರು.

‘ನೌಕರರು ಹಾಗೂ ಅವರ ಕುಟುಂಬದವರಿಗೆ 226 ಕಾಯಿಲೆಗಳಿಗೆ ರಾಜ್ಯದ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನಗದು ರಹಿತ ಸ್ಮಾರ್ಟ್ ಕಾರ್ಡ್ ಜನವರಿಯಲ್ಲಿ ನೀಡಲಾಗುತ್ತಿದೆ. ಸರ್ಕಾರಕ್ಕೆ ₹ 1,500 ಕೋಟಿ ಖರ್ಚಾಗಲಿದ್ದು, ನೌಕರರು ಸ್ವಾಭಿಮಾನದಿಂದ ಬದುಕಲು ಸಹಕಾರಿಯಾಗಲಿದೆ. 40 ವರ್ಷಗಳ ಹೋರಾಟದಿಂದ ಕೆಜಿಐಡಿ ಆನ್‍ಲೈನ್ ಆಗುತ್ತಿದ್ದು, ಜನವರಿಯಿಂದ ಅಲೆದಾಟ ತಪ್ಪಲಿದೆ. ವಿಮಾ ಯೋಜನೆಯನ್ನು 60 ವರ್ಷಕ್ಕೆ ವಿಸ್ತರಿಸಲಾಗಿದೆ. ಅಪಘಾತ ವಿಮೆ ₹ 1 ಕೋಟಿ ಪರಿಹಾರ ನೀಡುವ ಕುರಿತು ಯೋಜನೆ ರೂಪಿಸಲಾಗಿದೆ’ ಎಂದು ಷಡಕ್ಷರಿ ಹೇಳಿದರು.

ಜಿಲ್ಲಾಧಿಕಾರಿ ವೆಂಕಟ್‌ ರಾಜಾ,‘ಸುತ್ತೋಲೆ ಸರಿಯಾಗಿ ಓದಿ, ನೀವು ನಿವೃತ್ತರಾದರೂ ನೀವು ಸಿದ್ಧಪಡಿಸಿರುವ ಕಡತ ಶಾಶ್ವತ. ಶ್ರದ್ಧೆಯಿಂದ ಕೆಲಸ ಮಾಡಿ. ಒತ್ತಡ ಗುಂಪುಗಳಿಗೆ ಹೆದರದಿರಿ’ ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್, ‘ಕಚೇರಿಗೆ ಬರುವವರು ಬೇರೆ ಭಾಷೆಯಲ್ಲಿ ಮಾತನಾಡಿದರೆ ಅವರ ಕೆಲಸ ಮಾಡಿಕೊಡದೇ ಹೊರ ಕಳುಹಿಸಿ. ಆಗ ದಾರಿಗೆ ಬರುತ್ತಾರೆ. ಆರ್‌ಟಿಐ ಅರ್ಜಿಗಳಿಗೆ ಹೆದರುವುದು ಬೇಡ, ನಿಯಮಾನುಸಾರ ವೈಯಕ್ತಿಕ ಮಾಹಿತಿ ನೀಡಬೇಡಿ. ನೌಕರರಿಗೆ ಆಗುತ್ತಿರುವ ಕಿರುಕುಳದ ವಿರುದ್ಧವೂ ಸಂಘದವರು ಹೋರಾಟ ಮಾಡಬೇಕು’ ಎಂದರು.

ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು, ‘ ಜಿಲ್ಲೆಯಲ್ಲಿ 16 ಸಾವಿರ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದವರಿಗೆ ಅನುಕೂಲವಾಗಲು ₹ 1.75 ಕೋಟಿ ವೆಚ್ಚದಲ್ಲಿ ನೌಕರರ ಭವನ ನವೀಕರಣ, 5 ಎಕರೆ ಜಮೀನು ಮಂಜೂರಾತಿಗೆ ಮನವಿ ಮಾಡಿ, ಪುಣ್ಯಕೋಟಿ ಯೋಜನೆಗೆ ಜಿಲ್ಲೆಯ ಎಲ್ಲಾ ನೌಕರರು ಕೈಜೋಡಿಸೋಣ’
ಎಂದರು.

ಜಿಲ್ಲೆಯ ಸರ್ಕಾರಿ ನೌಕರರ 200ಕ್ಕೂ ಹೆಚ್ಚು ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಸಾಧಕ ಪ್ರತಿಭಾನ್ವಿತ ಮಕ್ಕಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಖ್ಯಾತ ಹಾಸ್ಯ ನಟರಾದ ರೇಖಾದಾಸ್, ಶ್ರೀನಾಥ್ ವಶಿಷ್ಟ, ಸುನೇತ್ರ ಪಂಡಿತ್, ವಸಂತಕುಮಾರ್ ಕಾರ್ಯಕ್ರಮ ನಡೆಸಿಕೊಟ್ಟರು.

ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ನೌಕರರ ಸಂಘದ ವಾರ್ಷಿಕ ವರದಿ ಮಂಡಿಸಿ, ಸಂಘದ ಮುಂದಿನ ಧ್ಯೇಯೋದ್ದೇಶಗಳ ಕುರಿತು ತಿಳಿಸಿದರು. ಖಜಾಂಚಿ ಕೆ.ವಿಜಯ್ ವಾರ್ಷಿಕ ಲೆಕ್ಕಪತ್ರ ವರದಿ ಮಂಡಿಸಿದರು.

ರಾಜ್ಯ ನೌಕರರ ಸಂಘದ ಹಿರಿಯ ಉಪಾಧ್ಯಕ್ಷರಾದ ರುದ್ರಪ್ಪ, ಎಸ್.ಬಸವರಾಜ್, ಗೌರವಾಧ್ಯಕ್ಷ ಬಿ.ಎಚ್.ವೆಂಕಟೇಶಯ್ಯ, ಉಪಾಧ್ಯಕ್ಷ ಗಿರಿಗೌಡ, ಪದಾಧಿಕಾರಿಗಳಾದ ಮಾಲತೇಶ್, ಹರೇರಾಮ್, ಕಸಾಪ ಜಿಲ್ಲಾಧ್ಯಕ್ಷ ಎನ್.ಬಿ.ಗೋಪಾಲಗೌಡ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸರೆಡ್ಡಿ, ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಗೌತಮ್, ಜಿಲ್ಲಾ ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಗೌರವಾಧ್ಯಕ್ಷ ಎನ್.ರವಿಚಂದ್ರ, ನಿಕಟಪೂರ್ವ ಅಧ್ಯಕ್ಷ ಕೆ.ಎನ್.ಮಂಜುನಾಥ್, ಕೆ.ಬಿ.ಅಶೋಕ್, ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ಸುಬ್ರಮಣಿ, ಉಪಾಧ್ಯಕ್ಷರಾದ ಅಜಯ್‍ಕುಮಾರ್, ಪುರುಷೋತ್ತಮ್, ಮಂಜುನಾಥ್, ನಂದೀಶ್, ಎಂ.ನಾಗರಾಜ್, ಕಾರ್ಯದರ್ಶಿಗಳಾದ ವಿಜಯಮ್ಮ, ಎ.ಬಿ.ನವೀನಾ, ವಿವಿಧ ತಾಲ್ಲೂಕು ಅಧ್ಯಕ್ಷರಾದ ಅಪ್ಪಯ್ಯಗೌಡ, ಮುನೇಗೌಡ, ಕೆ.ಎನ್.ಅರವಿಂದ್, ಬಂಗವಾದಿ ನಾಗರಾಜ್, ಎಂ.ಸುರೇಶಪ್ಪ, ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ, ನೌಕರರ ಸಂಘದ ಪದಾಧಿಕಾರಿಗಳಾದ ಪಿಡಿಒ ನಾಗರಾಜ್, ಅರುಣ್, ಅನಿಲ್, ನಾಗಮಣಿ, ಆನಂದ್, ತಿಪ್ಪೇಸ್ವಾಮಿ, ಎಚ್.ಎನ್.ಮಂಜುನಾಥ್, ಪ್ರೇಮಾ, ಆನಂದ್, ಚಂದ್ರಕಲಾ, ಮುರಳಿಮೋಹನ್, ಕಲಾವತಿ, ಶಿವಾರೆಡ್ಡಿ, ಭಾಗ್ಯ, ಕದಿರಪ್ಪ, ವೆಂಕಟಾಚಲಪತಿಗೌಡ, ಚಂದ್ರಪ್ಪ, ವೆಂಕಟಶಿವಪ್ಪ, ಆರ್.ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.