ADVERTISEMENT

ಪೂರ್ಣ ಮೀಸಲಾತಿಗೆ ಒತ್ತಾಯಿಸಿ ಪ್ರತಿಭಟನೆ

ಬಲಿಜ ಸಂಘದ ಮಹಾ ಪ್ರಧಾನ ಕಾರ್ಯದರ್ಶಿ ಸುರೇಶ್‌ಕುಮಾರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 12:20 IST
Last Updated 11 ಸೆಪ್ಟೆಂಬರ್ 2019, 12:20 IST

ಕೋಲಾರ: ‘ಬಲಿಜ ಸಮುದಾಯಕ್ಕೆ ಹಿಂದುಳಿದ ವರ್ಗದ 2ಎ ಮೀಸಲಾತಿಯನ್ನು ಪೂರ್ಣ ಪ್ರಮಾಣದಲ್ಲಿ ಕಲ್ಪಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಅಕ್ಟೋಬರ್ ತಿಂಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಬಲಿಜ ಸಂಘದ ಮಹಾ ಪ್ರಧಾನ ಕಾರ್ಯದರ್ಶಿ ಕೆ.ವಿ.ಸುರೇಶ್‌ಕುಮಾರ್ ತಿಳಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪೂರ್ಣ ಪ್ರಮಾಣದ ಮೀಸಲಾತಿಗಾಗಿ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಜಿಲ್ಲೆ ಒಳಗೊಂಡಂತೆ ಹೋರಾಟ ನಡೆಸಲು ತೀರ್ಮಾನಿಸಿದ್ದು, ಶೀಘ್ರವೇ ಪ್ರತಿಭಟನೆಯ ದಿನಾಂಕ ನಿಗದಿಪಡಿಸುತ್ತೇವೆ’ ಎಂದು ಹೇಳಿದರು.

‘ಬಲಿಜ ಸಮುದಾಯಕ್ಕೆ ಸಿಕ್ಕಿದ್ದ ಉದ್ಯೋಗ ಮೀಸಲಾತಿಯನ್ನು 2000ರಲ್ಲಿ ರದ್ದುಪಡಿಸಲಾಯಿತು. ಈ ಅನ್ಯಾಯದ ವಿರುದ್ಧ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಮೊದಲ ಬಾರಿಗೆ 2003ರಲ್ಲಿ ಹೋರಾಟ ನಡೆಸಲಾಯಿತು. ಆದರೆ, ಆಗಿನ ಸರ್ಕಾರ ಸ್ಪಂದಿಸಲಿಲ್ಲ’ ಎಂದು ದೂರಿದರು.

ADVERTISEMENT

‘ಮೀಸಲಾತಿಯಿಂದ ವಂಚಿತವಾಗಿರುವ ಬಲಿಜ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ತೀರಾ ಹಿಂದುಳಿದಿದೆ. 1974ರಿಂದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದ ಸಮುದಾಯವನ್ನು 1994ರಲ್ಲಿ ವೀರಪ್ಪ ಮೊಯಿಲಿ ನೇತೃತ್ವದ ಸರ್ಕಾರವು ಸಕಾರಣವಿಲ್ಲದೆ 2ಎ ಪಟ್ಟಿಯಿಂದ 3ಎಗೆ ವರ್ಗಾಯಿಸಿತು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘2011ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಸಂಸದ ಪಿ.ಸಿ.ಮೋಹನ್, ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್.ಜಯರಾಂ ಅವರು ಒತ್ತಡ ಹೇರಿದ್ದರಿಂದ ಶಿಕ್ಷಣಕ್ಕೆ ಮಾತ್ರ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ಸಿಕ್ಕಿತ್ತು. ಆದರೆ, ಈವರೆಗೂ ಔದ್ಯೋಗಿಕ ಮೀಸಲಾತಿ ಸಿಕ್ಕಿಲ್ಲ’ ಎಂದು ವಿವರಿಸಿದರು.

ವರದಿ ಬಿಡುಗಡೆಯಾಗಿಲ್ಲ: ‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಡೆಸಿದ ಜಾತಿ ಜನಗಣತಿ ವರದಿ ಇನ್ನೂ ಬಿಡುಗಡೆಯಾಗಿಲ್ಲ. ವರದಿ ಬಿಡುಗಡೆಯಾದರೆ ಹಲವು ಸಮುದಾಯಗಳು ಮೀಸಲಾತಿ ಪಟ್ಟಿ ವ್ಯಾಪ್ತಿಗೆ ಒಳಪಡುತ್ತವೆ. ಹೀಗಾಗಿ ಪಟ್ಟಭದ್ರ ಹಿತಾಸಕ್ತಿಗಳು ವರದಿ ಬಿಡುಗಡೆಯಾಗದಂತೆ ತಡೆ ಹಿಡಿದಿದ್ದು, ಈ ಸಂಬಂಧ ಪ್ರತಿಭಟನೆಯಲ್ಲಿ ಹಕ್ಕೊತ್ತಾಯ ಮಂಡಿಸುತ್ತೇವೆ’ ಎಂದರು.

‘ಹಿಂದುಳಿದ ವರ್ಗಗಳಿಗೆ ನಿಗದಿಪಡಿಸಿದ್ದ ಶೇ 15ರ ಮೀಸಲಾತಿಯಲ್ಲಿ ಬಲಿಜ ಸಮುದಾಯ ಸಾಮಾಜಿಕ ನ್ಯಾಯ ಪಡೆಯುತ್ತಿತ್ತು. ಪ್ರವರ್ಗ 2ಎನಿಂದ ಹೊರಗಿಟ್ಟ ನಂತರ ಶೇ 4ರಷ್ಟು ಮಾತ್ರ ಮೀಸಲಾತಿ ಸಿಕ್ಕಿ ಸಮುದಾಯಕ್ಕೆ ಅನ್ಯಾಯ ಆಗುತ್ತಿದೆ. ಈ ಸಂಬಂಧ ಸಂಸದ ಪಿ.ಸಿ.ಮೋಹನ್ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಇತ್ತೀಚೆಗೆ ಭೇಟಿಯಾಗಿ ಮನವಿ ಸಲ್ಲಿಸಿದಾಗ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ’ ಎಂದು ಯೋಗಿ ನಾರೇಯಣ ಜಿಲ್ಲಾ ಬಲಿಜ ನೌಕರರ ಸೇವಾ ಟ್ರಸ್ಟ್‌ ಅಧ್ಯಕ್ಷ ಎಸ್.ಎಸ್.ಶ್ರೀಧರ್ ಹೇಳಿದರು.

ಜಿಲ್ಲಾ ಬಲಿಜ ನೌಕರರ ಸೇವಾ ಟ್ರಸ್ಟ್‌ ಖಜಾಂಚಿ ಜನಾರ್ದನ್‌, ಕಾರ್ಯದರ್ಶಿ ಕೃಷ್ಣಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.