ADVERTISEMENT

ಖಾತ್ರಿಯಾಗದ ‘ಕೈ’ ಟಿಕೆಟ್‌: ಜೆಡಿಎಸ್‌ ಸೇರ್ಪಡೆ– ಅರಿಕೆರೆ ಮಂಜುನಾಥ್‌ಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಮೇ 2022, 13:05 IST
Last Updated 27 ಮೇ 2022, 13:05 IST
ಮುಖಂಡ ಅರಿಕೆರೆ ಮಂಜುನಾಥ್‌ಗೌಡ ಕೋಲಾರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ಮುಖಂಡ ಅರಿಕೆರೆ ಮಂಜುನಾಥ್‌ಗೌಡ ಕೋಲಾರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು   

ಕೋಲಾರ: ‘ಮುಂಬರುವ ವಿಧಾನಸಭಾ ಚುನಾವಣೆಗೆ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ನನಗೆ ಕಾಂಗ್ರೆಸ್‌ ಪಕ್ಷದ ಟಿಕೆಟ್ ಸಿಗುವ ಸಾಧ್ಯತೆ ಇಲ್ಲವೆಂದು ಖಾತ್ರಿಯಾದ ಮೇಲೆ ಕಾಂಗ್ರೆಸ್ ತೊರೆದು ಮಾತೃ ಪಕ್ಷ ಜೆಡಿಎಸ್‌ಗೆ ಸೇರ್ಪಡೆ ಆಗಿದ್ದೇನೆ’ ಎಂದು ಮುಖಂಡ ಅರಿಕೆರೆ ಮಂಜುನಾಥ್‌ಗೌಡ ತಿಳಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಲಹೆಯಂತೆ ಅಧಿಕೃತವಾಗಿ ಜೆಡಿಎಸ್‌ಗೆ ಸೇರಿದ್ದೇನೆ. ಈ ಹಿಂದೆ 35 ವರ್ಷ ಜೆಡಿಎಸ್‌ನಲ್ಲೇ ಸೇವೆ ಸಲ್ಲಿಸಿದ್ದೆ’ ಎಂದರು.

‘ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್‌ನ ಕೆಲ ಮುಖಂಡರು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನನ್ನನ್ನು ಕಣಕ್ಕಿಳಿಸುವುದಾಗಿ ಭರವಸೆ ನೀಡಿದ್ದರು. ಹೀಗಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ಪಕ್ಷ ಸಂಘಟನೆಗಾಗಿ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೆ’ ಎಂದು ಹೇಳಿದರು.

ADVERTISEMENT

‘ಜೆಡಿಎಸ್ ಪಕ್ಷದಲ್ಲಿ ಈ ಹಿಂದೆ 3 ಬಾರಿ ನನಗೆ ಟಿಕೆಟ್ ಕೈತಪ್ಪಿದೆ. ವರಿಷ್ಠರು ಈ ಬಾರಿ ಖಂಡಿತ ನನಗೆ ಅವಕಾಶ ನೀಡುವ ನಂಬಿಕೆಯಿದೆ. ಕೋಲಾರ ಮತ್ತು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ನನಗೆ ಅಥವಾ ಬೇರೆ ಯಾರಿಗಾದರೂ ಟಿಕೆಟ್ ಕೊಟ್ಟರೂ ಪಕ್ಷ ಗೆಲ್ಲಿಸಬೇಕೆಂಬ ಜವಾಬ್ದಾರಿಯನ್ನು ವರಿಷ್ಠರು ವಹಿಸಿದ್ದಾರೆ’ ಎಂದರು.

ಜೆಡಿಎಸ್ ಗೆಲುವು: ‘ವರ್ತೂರು ಪ್ರಕಾಶ್ ನನ್ನ ಸ್ನೇಹಿತರು. ಆದರೆ, ರಾಜಕೀಯ ಮತ್ತು ಸ್ನೇಹ ಬೇರೆ. ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲುವ ಸಾಧ್ಯತೆ ನಿಚ್ಚಳವಾಗಿದ್ದು, ಯಾವುದೇ ಕಾರಣಕ್ಕೂ ಬಿಜೆಪಿ ತಲೆ ಎತ್ತಲು ಬಿಡುವುದಿಲ್ಲ. ಕೋಲಾರದಲ್ಲಿ ಬಿಜೆಪಿ ಗೆಲುವು ಖಂಡಿತ ಅಸಾಧ್ಯ’ ಎಂದು ಭವಿಷ್ಯ ನುಡಿದರು.

ಮುಖಂಡರಾದ ಮುನೇಶ್‌, ಗಜೇಂದ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.