ADVERTISEMENT

ಟಿಪ್ಪು ಕೊಂದಿದ್ದು ಉರಿಗೌಡ – ಅಶೋಕ, ಅಶ್ವತ್ಥನಾರಾಯಣ ಸಂಶೋಧನೆ: ಮುನಿರತ್ನ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2023, 14:06 IST
Last Updated 15 ಮಾರ್ಚ್ 2023, 14:06 IST
   

ಕೋಲಾರ: ‘ಟಿಪ್ಪು ಸುಲ್ತಾನ್‍ನನ್ನು ಉರಿಗೌಡ, ನಂಜೇಗೌಡ ಏಕೆ ಕೊಂದರು ಎನ್ನುವ ಬಗ್ಗೆ ಸಚಿವರಾದ ಆರ್.ಅಶೋಕ ಹಾಗೂ ಡಾ.ಸಿ.ಎನ್.ಅಶ್ವತ್ಥನಾರಾಯಣ ಬಹಳಷ್ಟು ಸಂಶೋಧನೆ ಮಾಡಿ ಸ್ಪಷ್ಟವಾಗಿ ಹೇಳಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ತಿಳಿಸಿದರು.

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಇಷ್ಟು ದಿನ ಮುಚ್ಚಿಟ್ಟಿದ್ದ ಸತ್ಯ ಈಗ ಹೊರಗಡೆ ಬಂದಿದೆ. ಅದನ್ನು ಸಹಿಸಿಕೊಳ್ಳಲು ಕೆಲವರಿಗೆ ಸಾಧ್ಯವಾಗುತ್ತಿಲ್ಲ. ಹೊಸ ಇತಿಹಾಸ ಏನೂ ಇಲ್ಲ. ಇತಿಹಾಸವನ್ನು ತಿರುಚಲು ಸಾಧ್ಯವಿಲ್ಲ’ ಎಂದರು.

‘ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಏಕೆ ಇನ್ನೂ ಅನುಮಾನವಿದೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ’ ಎಂದು ಟೀಕಿಸಿದರು.

ADVERTISEMENT

ಸಚಿವ ಸೋಮಣ್ಣ ಕಣ್ಣೀರಿಟ್ಟ ಬಗ್ಗೆ ಪ್ರತಿಕ್ರಿಯಿಸಿ, ‘ಸೋಮಣ್ಣ ಅವರಿಗೆ ಅಸಮಾಧಾನವಿದೆ ಎಂದು ಯಾರು ಹೇಳಿದ್ದಾರೆ? ಕೆಲವು ಬಾರಿ ಆನಂದಕ್ಕೂ ಕಣ್ಣಲ್ಲಿ ನೀರು ಬರುತ್ತದೆ. ದುಃಖದ ಕಣ್ಣೀರು ಎಂದು ಭಾವಿಸಬೇಡಿ. ಅವರ ಪುತ್ರನ ಬಗ್ಗೆ ಗೌರವವಿದೆ. ಆದರೆ, ಅವರು ಏನು ಮಾತನಾಡಿದ್ದಾರೆ ಎನ್ನುವುದರ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಆರ್‌.ಶಂಕರ್‌ ಅವರ ನಿವಾಸದ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ದಾಳಿ ನಡೆಸಿರುವ ಕುರಿತು, ‘ಸಾಮಾನ್ಯವಾಗಿ ಈ ರೀತಿ ದಾಳಿಗಳು ಎಲ್ಲ ಕಡೆ ನಡೆಯುತ್ತಿರುತ್ತದೆ. ಸರಿಯಾದ ದಾಖಲೆ ನೀಡಬೇಕಾಗುತ್ತದೆ’ ಎಂದರು.

‘ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸೂಕ್ತ ಸಮಯಕ್ಕೆ ಸೂಕ್ತ ಅಭ್ಯರ್ಥಿಯನ್ನು ನಮ್ಮ ಪಕ್ಷ ಘೋಷಣೆ ಮಾಡುತ್ತದೆ. ಹುಲಿ ಬಿಡಬೇಕೋ ಅಥವಾ ಸಿಂಹ ಬಿಡಬೇಕೋ ಎಂದು ತೀರ್ಮಾನಿಸಿಯೇ ಬಿಡುತ್ತೇವೆ’ ಎಂದು ತಿಳಿಸಿದರು.

‘ಸಿದ್ದರಾಮಯ್ಯ ಅರ್ಜುನನಿದ್ದಂತೆ, ವರ್ತೂರು ಪ್ರಕಾಶ್ ಬಬ್ರುವಾಹನನಿದ್ದಂತೆ ಎಂಬ ಕುತೂಹಲ ನಿಮ್ಮಲ್ಲಿದೆ. ಅದ್ಯಾವುದೂ ಅಲ್ಲ, ಜನರ ಸೇವೆಯೇ ಮುಖ್ಯ’ ಎಂದು ಹೇಳಿದರು.

‘ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಅಲೆ ಇಲ್ಲವೇ ಇಲ್ಲ. ಬಿಜೆಪಿ ಅಭ್ಯರ್ಥಿಯೇ ಗೆಲುವು ಸಾಧಿಸುತ್ತಾರೆ. ವಿಜಯ ಸಂಕಲ್ಪ ಯಾತ್ರೆಗೆ ಎಲ್ಲ ಕಡೆಯಲ್ಲಿಯೂ ಹೆಚ್ಚು ಜನ ಸೇರುತ್ತಿದ್ದಾರೆ. ಜನ ಸೇರಿಲ್ಲ ಎಂಬ ಕಾರಣಕ್ಕೆ ಕೋಲಾರದಲ್ಲಿ ಸಾರ್ವಜನಿಕ ಸಭೆ ರದ್ದಾಗಿಲ್ಲ. ಮುಂದೆ ನಡೆಸುತ್ತೇವೆ’ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.