ADVERTISEMENT

ಸಿದ್ದರಾಮಯ್ಯಗೆ ಬಿಸಿಲು ಎಂದರೆ ಆಗಲ್ಲ: ಬಿಜೆಪಿ ಲೇವಡಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2023, 4:45 IST
Last Updated 15 ಮಾರ್ಚ್ 2023, 4:45 IST
ಆರ್‌.ಅಶೋಕ
ಆರ್‌.ಅಶೋಕ   

ಕೋಲಾರ: ‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆ ಇದ್ದಿದ್ದರೆ ತಿರುಕನಂತೆ ಕ್ಷೇತ್ರ ಅಲೆಯುವ ಪರಿಸ್ಥಿತಿ ಸಿದ್ದರಾಮಯ್ಯ ಅವರಿಗೆ ಬರುತ್ತಿರಲಿಲ್ಲ’ ಎಂದು ಸಚಿವ ಆರ್.ಅಶೋಕ ಲೇವಡಿ ಮಾಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮಾಜಿ ಮುಖ್ಯಮಂತ್ರಿಯೂ ಆಗಿರುವ ಸಿದ್ದರಾಮಯ್ಯ ಅವರಿಗೆ ಊರೂರು ಅಲೆದು ಭಿಕ್ಷಾಂದೇಹಿ ಎಂದು ಕೇಳಿಕೊಳ್ಳುವ ದುಸ್ಥಿತಿ ಬಂದಿದೆ. ಮೈಸೂರು ಆಯಿತು, ಬಾದಾಮಿ ಮುಗಿಯಿತು, ಈಗ ಕೋಲಾರಕ್ಕೆ ಬಂದಿದ್ದಾರೆ. ಇಲ್ಲಿ ಸೋತರೆ ಮುಂದೆ ಎಲ್ಲಿಗೋ ಹೋಗುತ್ತಾರೋ ಗೊತ್ತಿಲ್ಲ’ ಎಂದರು.

‘ಕೋಲಾರದಲ್ಲಿ ಡೂಪ್ಲಿಕೇಟ್ ಮನೆ ಮಾಡಿಕೊಂಡಿದ್ದಾರೆ. ಮನೆ ಮುಂದೆ ಬೋರ್ಡ್ ಇರುತ್ತದೆಯೋ ಹೊರತೂ ಸಿದ್ದರಾಮಯ್ಯ ಇರುವುದಿಲ್ಲ. ಕೋಲಾರದ ಕಡೆ ತಿರುಗಿಯೂ ನೋಡುವುದಿಲ್ಲ. ಅವರಿಗೆ ಬಿಸಿಲು ಕಂಡರೆ ಆಗುವುದಿಲ್ಲ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಒಂದು ಬಾರಿ ಗೆದ್ದ ಕ್ಷೇತ್ರದಲ್ಲಿ ಜನರಿಗಾಗಿ ಒಂದಿಷ್ಟು ಒಳ್ಳೆಯ ಕೆಲಸ ಮಾಡಿದ್ದರೆ ಮತ್ತೆ ಅಲ್ಲಿ ಸ್ಪರ್ಧಿಸಲು ಧೈರ್ಯ ಇರುತಿತ್ತು. ಆದರೆ, ಈಗ ಸಿದ್ದರಾಮಯ್ಯ ಅವರಿಗೆ ಆ ಧೈರ್ಯ ಇಲ್ಲ’ ಎಂದು ಟೀಕಿಸಿದರು.

‘ಕಾಂಗ್ರೆಸ್‌ ದೇಶದಲ್ಲಿ ಎಲ್ಲೂ ಉಳಿಗಾಲವಿಲ್ಲ. ಈಶಾನ್ಯ ರಾಜ್ಯಗಳಲ್ಲಿ ಗಂಟುಮೂಟೆ ಕಟ್ಟಿದ್ದಾರೆ. ಮಧ್ಯಪ್ರದೇಶದಲ್ಲಿ ಇದ್ದುದ್ದನ್ನು ಕಳೆದುಕೊಂಡರು. ಸದ್ಯ ರಾಜಸ್ಥಾನದಲ್ಲಿ ಇದ್ದು, ಚುನಾವಣೆ ನಡೆದರೆ ಅಲ್ಲೂ ಕಾಂಗ್ರೆಸ್‌ ಢಮಾರ್‌ ಆಗಲಿದೆ’ ಎಂದರು.

‘ಈ ಬಾರಿ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಸೋತರೆ ಆ ಪಕ್ಷದ ಎಲ್ಲರೂ ಸಾಮೂಹಿಕವಾಗಿ ಬಿಜೆಪಿ ಸೇರಲಿದ್ದಾರೆ’ ಎಂದು ತಿಳಿಸಿದರು.

‘ಕಾಂಗ್ರೆಸ್‍ನಲ್ಲಿ ಸಿ ಎಂದರೆ ಕರಪ್ಷನ್‌ ಎಂದರ್ಥ. ಅಭಿವೃದ್ಧಿ ಮಾಡಿ ಜನರ ಮನಸ್ಸು ಗೆಲ್ಲಲು ಸಾಧ್ಯವಿಲ್ಲದೆ ವೋಟಿಗಾಗಿ ಜನರಿಗೆ ಹೆಂಡ, ಹಣ ಮೊದಲು ಹಂಚಿದವರೇ ಕಾಂಗ್ರೆಸ್ಸಿಗರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಮೇಲೆ ಹಗರಣಗಳಿದ್ದು, ಜಾಮೀನಿನ ಮೇಲೆ ಹೊರಗೆ ಇದ್ದಾರೆ’ಎಂದರು.

‘ಎಲ್ಲಾ ಸಮೀಕ್ಷೆಗಳಲ್ಲಿ ಬಿಜೆಪಿ ಮುಂದಿದೆ. ಜನರಿಗೆ ಸುಭದ್ರ ಸರ್ಕಾರದ ಅವಶ್ಯವಿದೆ. ಕಳೆದ ಬಾರಿ ಜೆಡಿಎಸ್‌–ಕಾಂಗ್ರೆಸ್‌ ಸೇರಿ ಸರ್ಕಾರ ರಚಿಸಿದರು. ಆದರೆ, 14 ತಿಂಗಳಿಗೇ ಚಟ್ಟ ಕಟ್ಟಿಕೊಂಡು ಹೋದರು. ಮುಂದೆಯೂ ಅವರು ಜೊತೆಗೂಡಿ ಸರ್ಕಾರದ ರಚಿಸಲಾಗದ ಪರಿಸ್ಥಿತಿಯಲ್ಲಿ ಇದ್ದಾರೆ’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.