ADVERTISEMENT

ಶ್ರೀನಿವಾಸಪುರ: ಕೃಷಿ ಕೆಲಸಕ್ಕೆ ಜಡಿ ಮಳೆ ಅಡ್ಡಿ

ರಾಗಿ ಒಕ್ಕಣೆ, ತೆನೆ ಕಟಾವಿಗೆ ತೊಂದರೆ: ರೈತರ ಕಂಗಾಲು

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 5:24 IST
Last Updated 14 ಡಿಸೆಂಬರ್ 2021, 5:24 IST
ಮಳೆಯಿಂದ ಒಣಗಲು ಹರಡಿದ್ದ ರಾಗಿ ತೆನೆಯನ್ನು ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಿರುವುದು
ಮಳೆಯಿಂದ ಒಣಗಲು ಹರಡಿದ್ದ ರಾಗಿ ತೆನೆಯನ್ನು ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಿರುವುದು   

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಸೋಮವಾರ ಪ್ರಾರಂಭವಾದ ಜಡಿ ಮಳೆ ಕೃಷಿಕ ಸಮುದಾಯದ ಕೆಲಸ ಕೆಡಿಸಿತು. ಮೂರು ದಿನಗಳ ಬಿಡುವಿನ ಬಳಿಕ ಮಳೆ ಹಿನ್ನಡೆ ಆಗಬಹುದು ಎಂಬ ರೈತರ ನಂಬಿಕೆ
ಹುಸಿಯಾಯಿತು.

ತಾಲ್ಲೂಕಿನಲ್ಲಿ ರಾಗಿ ತೆನೆ ಕಟಾವು ಕಾರ್ಯ ನಡೆಯುತ್ತಿತ್ತು. ಆದರೆ, ಮಳೆಯಿಂದಾಗಿ ಕಟಾವು ಸಾಧ್ಯವಾಗಲಿಲ್ಲ. ತೆನೆ ಒಕ್ಕಣೆ ಮಾಡಿರುವ ರೈತರು, ಗ್ರಾಮಗಳಲ್ಲಿ ಕೋತಿ ಕಾಟದಿಂದ ಬೇಸತ್ತು ಹೊಲಗಳ ಸಮೀಪ ಪ್ಲಾಸ್ಟಿಕ್ ಹಾಳೆ ಹರಡಿ ರಾಗಿ ಒಣಗಿಸುವ ಕಾರ್ಯದಲ್ಲಿ ತೊಡಗಿದ್ದರು. ಮಳೆ ಅದಕ್ಕೂ ಅವಕಾಶ ನೀಡಲಿಲ್ಲ. ಕೆಲವು ಕಡೆ ಒಣಗಲು ಹಾಕಿದ್ದ ರಾಗಿ ಅನಿರೀಕ್ಷಿತ ಮಳೆಗೆ ಸಿಲುಕಿ ನೆನೆದುಹೋಯಿತು.

ಮತ್ತೆ ಬಂದ ಮಳೆ ರೈತರನ್ನು ಗಾಬರಿಗೊಳಿಸಿದೆ. ಹರಡಿದ್ದ ರಾಗಿ, ರಾಗಿ ತೆನೆಯನ್ನು ರಾಶಿ ಮಾಡಲು ಹೆಣಗಾಡಬೇಕಾಯಿತು. ರೇಷ್ಮೆ ಕೃಷಿಕರಿಗೆ ಹಿಪ್ಪುನೇರಳೆ ಸೊಪ್ಪು ತರಲು ತೊಂದರೆಯಾಯಿತು. ಅವರೆ ಗಿಡಗಳಿಗೆ ಔಷಧಿ ಸಿಂಪಡಣೆ ಮಾಡುವ ಕಾರ್ಯವೂ ಸ್ಥಗಿತಗೊಂಡಿತು. ಒಟ್ಟಾರೆ ಸೋನೆ ಮಳೆಯಿಂದ ಕೃಷಿ ಚಟುವಟಿಕೆ ನಿಂತುಹೋಗಿತ್ತು.

ADVERTISEMENT

‘ಎಡೆಬಿಡದೆ ಸುರಿದ ಮಳೆ ಈಗಾಗಲೇ ರೈತರಿಗೆ ಸಾಕಷ್ಟು ನಷ್ಟ ಉಂಟು ಮಾಡಿದೆ. ಕನಿಷ್ಠ ಇರುವ ಬೆಳೆಯನ್ನಾದರೂ ರೂಢಿಸಿಕೊಳ್ಳೋಣ ಎಂದರೆ ಮತ್ತೆ ಕಾಟ ನೀಡುತ್ತಿದೆ. ಮಳೆಗಾಗಿ ಪರಿತಪಿಸುತ್ತಿದ್ದ ನಮಗೆ ಈ ಬಾರಿ ಮಳೆಯೇ ಶಾಪವಾಗಿ ಪರಿಣಮಿಸಿದೆ’ ಎಂದು ರೈತ ಮಹಿಳೆ ಜಯಮ್ಮ ‘ಪ್ರಜಾವಾಣಿ’ಯೊಂದಿಗೆ ನೋವು ತೋಡಿಕೊಂಡರು.

ಹೊಲಗಳಲ್ಲಿ ಮೊಳಕೆ ಒಡೆದಿದ್ದ ರಾಗಿ ತೆನೆಯ ಕಟಾವು ಕಾರ್ಯ ಮುಂದುವರಿದಿದೆ. ತೆನೆ ಕಟಾವು ಮಾಡಿದ ಹೊಲಗಳಲ್ಲಿ ತಾಳು ಕೊಯ್ಲು ಬಾಕಿ ಇದೆ. ಜಾನುವಾರು ಮೇವಾಗಬೇಕಾಗಿದ್ದ ರಾಗಿ ತಾಳು ಅತಿಯಾದ ಮಳೆಯಿಂದಾಗಿ ಹೊಲಗಳಲ್ಲಿ ಕೊಳೆಯುತ್ತಿದೆ. ಯಾವುದೇ, ಬೆಳೆ ಪೂರ್ಣ ಪ್ರಮಾಣದಲ್ಲಿ ಕೈಗೆ ಸಿಕ್ಕಿಲ್ಲ. ಆದರೆ, ಮತ್ತೆ ಮಳೆ ಅವಾಂತರ ಶುರುವಾಗಿದೆ ಎಂಬುದು ರೈತರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.