ADVERTISEMENT

ರಾಜೀವ್‌ಗಾಂಧಿ ಯುವಕರ ಆಶಾಕಿರಣ-ಕೆ.ಚಂದ್ರಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 21 ಮೇ 2021, 16:23 IST
Last Updated 21 ಮೇ 2021, 16:23 IST
ಕೋಲಾರದಲ್ಲಿ ಶುಕ್ರವಾರ ನಡೆದ ಮಾಜಿ ಪ್ರಧಾನಿ ದಿವಂಗತ ರಾಜೀವ್‌ಗಾಂಧಿ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ರಾಜೀವ್‌ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಕೋಲಾರದಲ್ಲಿ ಶುಕ್ರವಾರ ನಡೆದ ಮಾಜಿ ಪ್ರಧಾನಿ ದಿವಂಗತ ರಾಜೀವ್‌ಗಾಂಧಿ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ರಾಜೀವ್‌ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.   

ಕೋಲಾರ: ‘ಮಾಜಿ ಪ್ರಧಾನಿ ದಿವಂಗತ ರಾಜೀವ್‌ಗಾಂಧಿ ಅವರು ಅನುಷ್ಠಾನಗೊಳಿಸಿರುವ ಯೋಜನೆಗಳು ಇಂದಿಗೂ ಪ್ರಸ್ತುತವಾಗಿವೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಅಭಿಪ್ರಾಯಪಟ್ಟರು.

ಇಲ್ಲಿ ಶುಕ್ರವಾರ ಕಾಂಗ್ರೆಸ್‌ ಭವನದಲ್ಲಿ ನಡೆದ ರಾಜೀವ್‌ಗಾಂಧಿ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಭಾರತ ದೇಶ ಕಂಡ ಅಪ್ರತಿಮ ರಾಜಕಾರಣಿ ರಾಜೀವ್‌ಗಾಂಧಿ ಅವರು ಮಾಹಿತಿ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಯುವಕರ ಆಶಾಕಿರಣ ಆಗಿದ್ದರು’ ಎಂದರು.

‘ಆಧುನಿಕ ಭಾರತದ ಕನಸುಗಾರ ರಾಜೀವ್‌ಗಾಂಧಿ ಅವರು ಇಡೀ ದೇಶದ ಆಸ್ತಿ. ಸಧೃಡ ಭಾರತ ನಿರ್ಮಾಣದ ಕನಸು ಕಂಡಿದ್ದ ಅವರು ಬಡ ಜನರ ಕಲ್ಯಾಣಕ್ಕಾಗಿ ಕಾರ್ಯಕ್ರಮ ರೂಪಿಸಿದ್ದರು. ಅಧಿಕಾರ ವಿಕೇಂದ್ರೀಕರಣದ ಮೂಲಕ ದೇಶದ ಆಡಳಿತ ವ್ಯವಸ್ಥೆಯಲ್ಲಿ ಹೊಸ ಆಯಾಮ ಸೃಷ್ಟಿಸಿದರು. ಅವರ ನಾಯಕತ್ವ ಇಡೀ ವಿಶ್ವದಲ್ಲಿ ಮಾದರಿಯಾಗಿತ್ತು’ ಎಂದು ಬಣ್ಣಿಸಿದರು.

ADVERTISEMENT

‘ಆಡಳಿತವನ್ನು ಗ್ರಾಮ ಪಂಚಾಯಿತಿಗಳಿಗೆ ವಿಸ್ತರಿಸಿದ ರಾಜೀವ್‌ಗಾಂಧಿಯವರ ಕನಸೇ ಇಂದಿನ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ವ್ಯವಸ್ಥೆಯಾಗಿದೆ. ಅವರ ಆದರ್ಶವನ್ನು ಪಕ್ಷದ ಕಾರ್ಯಕರ್ತರು ಮೈಗೂಡಿಸಿಕೊಳ್ಳಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದು ಪಕ್ಷವನ್ನು ಬಲಪಡಿಸಬೇಕು. ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು’ ಎಂದರು.

ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್‌ಬಾಬು, ಎಸ್ಸಿ ಘಟಕದ ಅಧ್ಯಕ್ಷ ಜಯದೇವ್, ಯೂತ್ ಬ್ಲಾಕ್ ಅಧ್ಯಕ್ಷ ನವೀನ್‌ಕುಮಾರ್, ಕೆಪಿಸಿಸಿ ವೈದ್ಯಕೀಯ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ ಲೋಹಿತ್, ನಗರಸಭೆ ಮಾಜಿ ಸದಸ್ಯ ಪ್ಯಾರೇಜಾನ್, ಪಕ್ಷದ ಮುಖಂಡ ಮಹಮದ್ ಎಕ್ಬಾಲ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.