ADVERTISEMENT

ಸಮಾಜ ಎಚ್ಚರಿಸುವ ಬರವಣಿಗೆ ದಾಖಲಿಸಿ: ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2019, 7:50 IST
Last Updated 23 ಸೆಪ್ಟೆಂಬರ್ 2019, 7:50 IST
ಕೋಲಾರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ‘ಕ್ಷಣ ಬದುಕುವ ಹೂವೆ’ ಕವನ ಸಂಕಲನ ಬಿಡುಗಡೆ ಮಾಡಿದರು.
ಕೋಲಾರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ‘ಕ್ಷಣ ಬದುಕುವ ಹೂವೆ’ ಕವನ ಸಂಕಲನ ಬಿಡುಗಡೆ ಮಾಡಿದರು.   

ಕೋಲಾರ: ‘ನೆಲ ಸಂಸ್ಕೃತಿಯಲ್ಲಿ ಬೇರು ಬಿಟ್ಟಿರುವ ವಿವೇಕದ ಸೆಲೆ ಮತ್ತು ಕಾರಂಜಿಯನ್ನು ಒಂದೇ ದೇಶ ಒಂದೇ ಭಾಷೆ ಎನ್ನುವ ಮೂಲಕ ಮುಚ್ಚುವ ಪ್ರಯತ್ನವನ್ನು ಪ್ರಭುತ್ವವೇ ಮಾಡುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ನುಡಿಕಾರರು ಸಮಾಜವನ್ನು ಎಚ್ಚರಿಸುವ ಬರವಣಿಗೆ ದಾಖಲಿಸಬೇಕು’ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.

ಇಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಲೇಖಕ ಕೆ.ವಿ.ನಾಗರಾಜ್‌ರ ‘ಕ್ಷಣ ಬದುಕುವ ಹೂವೆ’ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿ, ‘ದೇಶವು ಚಂದ್ರಯಾನ ಮಾಡುತ್ತಿರುವಾಗಲೇ ರಾಷ್ಟ್ರಪತಿಗಳಿಗೆ ಪುರಿ ಜಗನ್ನಾಥ ದೇವಾಲಯಕ್ಕೆ ಪ್ರವೇಶ ಸಿಗಲಿಲ್ಲ. ಸಮಾಜ ಕಲ್ಯಾಣ ಸಚಿವರು ಗೊಲ್ಲರ ಹಟ್ಟಿ ಪ್ರವೇಶಿಸುವಂತಿಲ್ಲ’ ಎಂದು ಮಾರ್ಮಿಕವಾಗಿ ನುಡಿದರು.

‘ದೇಶದ ನುಡಿಕಾರರು ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿದ್ದರು. ಆದರೆ, ಇಂದು ಪ್ರತಿರೋಧವೇ ದೇಶದ್ರೋಹವೆನ್ನುವ ಪ್ರಭುತ್ವದ ದೌರ್ಜನ್ಯದ ಎದುರು ನುಡಿಕಾರರು ಅಸಹಾಯಕರಾಗಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಕೋಲಾರದ ಕೆರೆಗಳಿಗೆ ಕೆ.ಸಿ ವ್ಯಾಲಿ ಯೋಜನೆಯ ಕೊಳಚೆ ನೀರು ತುಂಬಿಸುತ್ತಿರುವಂತೆ, ಸಂಸ್ಕೃತಿಯ ಹೆಸರಿನಲ್ಲಿ ಯುವ ಪೀಳಿಗೆಯ ಮಿದುಳಿಗೆ ವಿಷ ತುಂಬಲು ಆಳುವ ಪ್ರಭುತ್ವ ಹೊರಟಿದೆ. ಯುವಕ ಯುವತಿಯರು ನಿಜ ಮತ್ತು ಸುಳ್ಳನ್ನು ಗುರುತಿಸುವಂತಹ ಸಾಹಿತ್ಯದ ಬರವಣಿಗೆ ಇರಬೇಕು’ ಎಂದು ಆಶಿಸಿದರು.

‘ಮಕ್ಕಳ ಮನಸ್ಸು ವಿಷಗೊಳಿಸುವುದೇ ಪ್ರಭುತ್ವದ ಅಜೆಂಡಾವಾಗುತ್ತಿದೆ. ಸಲ್ಲಬೇಕಾದ ನ್ಯಾಯ ಸಲ್ಲಬೇಕಾಗಿಲ್ಲವೆಂದು ಬಿಂಬಿಸಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಮಕ್ಕಳ ಪರ ಲೇಖನಿ ಬಳಸುವವರು ಬಾಲ ಸಾಹಿತ್ಯ ಬಾಲಿಶವಾಗಿರದಂತೆ ಎಚ್ಚರ ವಹಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಗಡಿಯಲ್ಲಿ ಯುದ್ಧದ ತಯಾರಿಯಲ್ಲಿ ಧರ್ಮದ ಹೆಸರಿನಲ್ಲಿ ಅಮಾಯಕರನ್ನು ಬಲಿ ಕೊಡಲಾಗುತ್ತಿದೆ. ಸಂವಿಧಾನಾತ್ಮಕವಾಗಿ ಆಯ್ಕೆಯಾದವರೇ ದಲಿತರ ಮೇಲಿನ ದೌರ್ಜನ್ಯವನ್ನು ಆತ್ಮಘಾತುಕ ಮಾತಿನಿಂದ ಸಮರ್ಥಿಸುತ್ತಿದ್ದಾರೆ. ದೇಶದಲ್ಲಿ ಮೂಢನಂಬಿಕೆ ಹಾಗೂ ಅಜ್ಞಾನವೇ ತುಂಬಿದೆ’ ಎಂದು ವಿಷಾದಿಸಿದರು.

ಅಧ್ಯಯನ ಕೊರತೆ: ‘ಕಾವ್ಯ ಬರೆಯುವರಿಗೆ ಅಧ್ಯಯನ ಕೊರತೆಯಿದೆ. ಮಾಹಿತಿ ಗುಡ್ಡೆ ಹಾಕಿಕೊಂಡು ಬರೆಯುವ ಪತ್ರಕರ್ತರ ನಡುವೆ ಸಮುದಾಯದ ಪರವಾಗಿ ಪ್ರತಿಕ್ರಿಯಾತ್ಮಕವಾಗಿ ಬರವಣಿಗೆ ರೂಢಿಸಿಕೊಂಡು ಗಟ್ಟಿ ಸಾಹಿತ್ಯ ಹೊರತರಬೇಕು’ ಎಂದು ಜಿಲ್ಲಾ ಪಿಯುಸಿ ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ಜೆ.ಜಿ.ನಾಗರಾಜ್ ಆಶಿಸಿದರು.

ಕವನ ಸಂಕಲನದ ಕರ್ತೃ ಕೆ.ವಿ.ನಾಗರಾಜ್‌ರ ತಂದೆ ಎಸ್.ಎಂ.ವೆಂಕಟಶಾಮಿ ಹಾಗೂ ತಾಯಿ ಯಲ್ಲಮ್ಮ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಮುನಿವೆಂಕಟೇಗೌಡ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ನಾರಾಯಣಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.