ADVERTISEMENT

ಸದಾಶಿವ ಆಯೋಗದ ವರದಿ ತಿರಸ್ಕರಿಸಿ

ಪರಿಶಿಷ್ಟ ಜಾತಿ ಛಿದ್ರಗೊಳಿಸುವ ಹುನ್ನಾರ: ಪ್ರತಿಭಟನಾಕಾರರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 15:37 IST
Last Updated 24 ಸೆಪ್ಟೆಂಬರ್ 2021, 15:37 IST
ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ತಿರಸ್ಕರಿಸುವಂತೆ ಆಗ್ರಹಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಸದಸ್ಯರು ಕೋಲಾರದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು
ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ತಿರಸ್ಕರಿಸುವಂತೆ ಆಗ್ರಹಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಸದಸ್ಯರು ಕೋಲಾರದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು   

ಕೋಲಾರ: ಒಳ ಮೀಸಲಾತಿ ವರ್ಗೀಕರಣ ಸಂಬಂಧ ನೀಡಿರುವ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ತಿರಸ್ಕರಿಸುವಂತೆ ಆಗ್ರಹಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಸದಸ್ಯರು ಇಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದರು.

ನಚಿಕೇತ ವಿದ್ಯಾರ್ಥಿನಿಲಯದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ‘ಸದಾಶಿವ ಆಯೋಗದ ವರದಿ ಮುಂದಿಟ್ಟುಕೊಂಡು ಪರಿಶಿಷ್ಟ ಜಾತಿಯನ್ನು ಛಿದ್ರಗೊಳಿಸುವ ಹುನ್ನಾರ ನಡೆದಿದೆ. ಪರಿಶಿಷ್ಟರಲ್ಲೇ ದ್ವೇಷ ಬಿತ್ತುವ ಕೆಲಸ ಮಾಡಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪರಿಶಿಷ್ಟರು ಅಸ್ಪೃಶ್ಯತೆ, ದೌರ್ಜನ್ಯಕ್ಕೆ ಒಳಗಾಗಿದ್ದರಿಂದ 1935ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ದಮನಿತ ಜಾತಿಗಳ ಪಟ್ಟಿಯಲ್ಲಿ ಅಲೆಮಾರಿ ಸಮುದಾಯಗಳಾದ ಭೋವಿ, ಕೊರಮ, ಕೊರಚ, ಬಂಜಾರ ಸಮುದಾಯಗಳನ್ನು ಸೇರಿಸಿ ಸಾಮಾಜಿಕ ನ್ಯಾಯ ಒದಗಿಸಿದರು. ಅದನ್ನೇ ಅಂಬೇಡ್ಕರ್ ಮುಂದುವರಿಸಿದರು. ಸದಾಶಿವ ಆಯೋಗದ ವರದಿ ಮುಂದಿಟ್ಟು ಅಂಬೇಡ್ಕರ್ ಕೊಟ್ಟಿರುವ ಮೀಸಲಾತಿ ತಪ್ಪಿಸುವ ಸಂಚು ಮಾಡಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ಕಿಡಿಕಾರಿದರು.

ADVERTISEMENT

‘ರಾಜ್ಯದಲ್ಲಿ ಭೋವಿ, ಲಂಬಾಣಿ, ಕೊರಮ, ಹಂದಿ ಜೋಗಿ, ಚನ್ನದಾಸರ, ದೊಂಬರ ಸೇರಿದಂತೆ 51 ಜಾತಿಗಳು, ಅಲೆಮಾರಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವ ಹುನ್ನಾರ ನಡೆಯುತ್ತಿದೆ. ಸೋರಿಕೆಯಾಗಿರುವ ಸದಾಶಿವ ಆಯೋಗದ ವರದಿಯಲ್ಲಿನ ವಿಚಾರಗಳನ್ನು ಸಾರ್ವಜನಿಕ ಚರ್ಚೆಗೆ ಲಭ್ಯವಾಗುವಂತೆ ಮಾಡಬೇಕು. ಇದರಿಂದ ಪರಿಶಿಷ್ಟರಲ್ಲಿ ಉಂಟಾಗಿರುವ ಗೊಂದಲಕ್ಕೆ ತೆರೆ ಎಳೆಯಬೇಕು’ ಎಂದು ಒತ್ತಾಯಿಸಿದರು.

ಅವೈಜ್ಞಾನಿಕ: ‘ಪರಿಶಿಷ್ಟ ಜಾತಿಗಳ ನಡುವೆ ತಾರತಮ್ಯ ಉಂಟು ಮಾಡುವಂತಿರುವ ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದೆ. ಪಾರದರ್ಶಕವಾಗಿ, ವೈಜ್ಞಾನಿಕವಾಗಿ ಸಮೀಕ್ಷೆ ನಡೆದಿಲ್ಲ. ಅಲೆಮಾರಿ ಸಮುದಾಯಗಳಾದ ಬಂಜಾರ, ಭೋವಿ, ಛಲವಾದಿ, ಕೊರಚ, ಕೊರಮ, ಅಲೆಮಾರಿ ಸಮುದಾಯಗಳನ್ನು ಸೌಲಭ್ಯಗಳಿಂದ ಹೊರಗಿಡುವ ಪ್ರಯತ್ನ ನಡೆದಿದೆ’ ಎಂದು ಒಕ್ಕೂಟದ ಯುವ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಜಿ.ಮುನಿರಾಜು ದೂರಿದರು.

‘ಭೋವಿ, ಲಂಬಾಣಿ, ಕೊರಮ, ಹಂದಿ ಜೋಗಿ ಸಮುದಾಯಗಳು ಬಡತನದಲ್ಲಿ ತುಳಿತಕ್ಕೆ ಒಳಗಾಗಿವೆ. ಕೆಲ ರಾಜಕಾರಣಿಗಳು ರಾಜಕೀಯ ಲಾಭ, ಸ್ವಾರ್ಥಕ್ಕಾಗಿ ಶೋಷಿತ ವರ್ಗವನ್ನು ವಂಚಿಸುವ ಜತೆಗೆ ಸಾಮಾಜಿಕ ನ್ಯಾಯದ ಮೂಲ ಆಶಯಕ್ಕೆ ಧಕ್ಕೆ ತಂದು ಸಂವಿಧಾನಕ್ಕೆ ಅಪಮಾನ ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತೀವ್ರ ಹೋರಾಟ: ‘ರಾಜ್ಯ ಸರ್ಕಾರ ಸದಾಶಿವ ಆಯೋಗದ ವರದಿ ಒಪ್ಪಿಕೊಂಡು ಏಕಪಕ್ಷೀಯವಾಗಿ ಕೇಂದ್ರಕ್ಕೆ ಶಿಫಾರಸು ಮಾಡಬಾರದು. ವರದಿ ಅನುಷ್ಠಾನಗೊಂಡರೆ ಶೋಷಿತ ಸಮುದಾಯಗಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತವೆ. ಪರಿಶಿಷ್ಟರಲ್ಲಿ ಒಡಕು ಉಂಟುಮಾಡುವ ಈ ವರದಿ ಜಾರಿಗೊಳಿಸಿದರೆ ಮುಂದೆ ಹೋರಾಟ ತೀವ್ರಗೊಳಿಸುತ್ತೇವೆ’ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಭೋವಿ ಸಮುದಾಯದ ಮುಖಂಡರಾದ ಶ್ರೀಕೃಷ್ಣ, ಮಲ್ಲೇಶ್‌ ಬಾಬು, ವೆಂಕಟೇಶ್, ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ನಗರ ಘಟಕದ ಅಧ್ಯಕ್ಷ ಎಂ.ಪಿ.ಮುರಳಿ ಪ್ರಕಾಶ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.