ADVERTISEMENT

ಒಕ್ಕಣೆ ಯಂತ್ರದ ಬಾಡಿಗೆ ದುಬಾರಿ: ಕ್ವಿಂಟಲ್‌ ರಾಗಿ ಒಕ್ಕಣೆಗೆ ₹ 150 ದರ ನಿಗದಿ

ಆರ್.ಚೌಡರೆಡ್ಡಿ
Published 14 ಡಿಸೆಂಬರ್ 2021, 5:22 IST
Last Updated 14 ಡಿಸೆಂಬರ್ 2021, 5:22 IST
ಶ್ರೀನಿವಾಸಪುರ ಹೊರವಲಯದಲ್ಲಿ ರೈತರು ಯಂತ್ರದ ಸಹಾಯದಿಂದ ರಾಗಿ ಒಕ್ಕಣೆ ಮಾಡುತ್ತಿರುವುದು
ಶ್ರೀನಿವಾಸಪುರ ಹೊರವಲಯದಲ್ಲಿ ರೈತರು ಯಂತ್ರದ ಸಹಾಯದಿಂದ ರಾಗಿ ಒಕ್ಕಣೆ ಮಾಡುತ್ತಿರುವುದು   

ಶ್ರೀನಿವಾಸಪುರ: ತಾಲ್ಲೂಕಿನ ರೈತರು ಕಾಳು ಒಕ್ಕುವ ಯಂತ್ರದ ಸಹಾಯದಿಂದ ರಾಗಿ ಒಕ್ಕಣೆ ಮಾಡುತ್ತಿದ್ದಾರೆ. ಈ ಯಂತ್ರ ರೈತರ ಪಾಲಿಗೆ ವರದಾನವಾಗಿದೆ. ಆದರೆ, ಈ ವರ್ಷ ಇಂಧನ ಬೆಲೆ ಏರಿಕೆಯಿಂದ ಬಾಡಿಗೆಯೂ ದುಬಾರಿಯಾಗಿದೆ.

ರೈತರು ಹಿಂದೆ ಕಷ್ಟಪಟ್ಟು ಸಾಂಘಿಕವಾಗಿ ಕಣ ನಿರ್ಮಿಸಿ ಎತ್ತುಗಳ ಸಹಾಯದಿಂದ ಗುಂಡು ಹೊಡೆದು ರಾಗಿ, ಭತ್ತ, ಸಾಮೆ, ಅವರೆ, ತೊಗರಿ, ಹುರುಳಿ ಮುಂತಾದ ದವಸ ಧಾನ್ಯಗಳ ಒಕ್ಕಣೆ ಮಾಡುತ್ತಿದ್ದರು. ಅಂದು ಒಕ್ಕಣೆ ಅತ್ಯಂತ ಶ್ರಮದ ಕೆಲಸವಾಗಿತ್ತು. ಮನೆ ಮಂದಿಯೆಲ್ಲಾ ಕಣದಲ್ಲಿ ದುಡಿಯುತ್ತಿದ್ದರು. ಬೇರೆ ಬೇರೆ ಕಾರಣಗಳಿಂದ ಗ್ರಾಮೀಣ ಪ್ರದೇಶದಲ್ಲಿ ಎತ್ತುಗಳ ಸಂಖ್ಯೆ ಕುಸಿಯುತ್ತಿದ್ದಂತೆ ಸಾಂಪ್ರದಾಯಿಕ ಕಣ ಸಂಸ್ಕೃತಿ ನೇಪಥ್ಯಕ್ಕೆ ಸರಿಯಿತು.

ಎತ್ತುಗಳ ಕೊರತೆಯಿಂದ ಒಕ್ಕಣೆ ಮಾಡುವುದು ಕಷ್ಟವಾಯಿತು. ಆಗ ರೈತರು ತಾವು ಬೆಳೆದ ರಾಗಿ, ಹುರುಳಿ ಮುಂತಾದ ಬೆಳೆಗಳನ್ನು ರಸ್ತೆಗಳ ಮೇಲೆ ಹರಡಿ, ಚಲಿಸುವ ವಾಹನಗಳ ಚಕ್ರಗಳಡಿ ಒಕ್ಕಣೆ ಮಾಡತೊಡಗಿದರು. ಅದು ಅತ್ಯಂತ ಅಪಾಯಕಾರಿ ಎನಿಸಿದರೂ, ಅನ್ಯಮಾರ್ಗವಿಲ್ಲದೆ ಒಕ್ಕಣೆಗೆ ರಸ್ತೆಗಳನ್ನು ಆಶ್ರಯಿಸಿದರು. ರಸ್ತೆ ಅಪಘಾತಗಳಲ್ಲಿ ಸಾವು, ನೋವು ಅನುಭವಿಸಿದರು. ಕಾನೂನು ಕ್ರಮಕ್ಕೂ ಒಳಗಾದರು.

ADVERTISEMENT

ಈಗ ಗ್ರಾಮೀಣ ಪ್ರದೇಶವನ್ನು ಒಕ್ಕಣೆ ಮಾಡುವ ಯಂತ್ರಗಳು ಪ್ರವೇಶಿಸಿವೆ. ದೊಡ್ಡ ರೈತರು ಸ್ವಂತಕ್ಕಾಗಿ ಒಕ್ಕಣೆ ಯಂತ್ರ ಖರೀದಿಸಿ ಟ್ರ್ಯಾಕ್ಟರ್ ನೆರವಿನಿಂದ ಕಾಳು ಒಕ್ಕಣೆ ಮಾಡಿದರೆ, ಸಾಮಾನ್ಯ ರೈತರು ಹಣ ನೀಡಿ ಯಂತ್ರದ ಬಾಡಿಗೆ ಪಡೆದು ಒಕ್ಕಣೆ ಮಾಡುತ್ತಿದ್ದಾರೆ. ಪ್ರಾರಂಭದಲ್ಲಿ ಬೆರಳೆಣಿಕೆಯಷ್ಟು ಯಂತ್ರಗಳು ಮಾತ್ರ ಇದ್ದವು.

ಈಗ ಕಾಳು ಒಕ್ಕುವ ಯಂತ್ರಗಳ ಸಂಖ್ಯೆ ಹೆಚ್ಚಿದೆ. ಸುಗ್ಗಿ ಕಾಲದಲ್ಲಿ ಹೊಲದ ಸಮೀಪ ಹೋಗಿ ಒಕ್ಕಣೆ ಮಾಡಲಾಗುತ್ತಿದೆ.

ಒಕ್ಕುವ ಯಂತ್ರಗಳು ರೈತರ ಶ್ರಮವನ್ನು ಕಡಿಮೆ ಮಾಡಿ ಸಮಯವನ್ನು ಉಳಿಸಿವೆ. ಕಳೆದ ವರ್ಷ ಒಂದು ಕ್ವಿಂಟಲ್ ಧಾನ್ಯ ಒಕ್ಕಲು ₹ 100 ನಿಗದಿಪಡಿಸಲಾಗಿತ್ತು. ಈ ಬಾರಿ ಡೀಸೆಲ್ ಬೆಲೆ ಏರಿಕೆಯಿಂದ ₹ 150ಕ್ಕೆ ಏರಿಸಲಾಗಿದೆ. ಆದರೂ ರೈತರು ಮರು ಮಾತನಾಡದೆ ಕೇಳಿದಷ್ಟು ಹಣ ನೀಡಿ ಒಕ್ಕಣೆ ಮಾಡುತ್ತಿದ್ದಾರೆ.

ಕಣಗಳಿಲ್ಲದ ಕಾಲದಲ್ಲಿ ಯಂತ್ರಗಳು ಒಕ್ಕಣೆ ಕಾರ್ಯ ನಿರ್ವಹಿಸುತ್ತಿವೆ. ವಿಶಾಲವಾದ ಹೊಲಗಳಲ್ಲಿ ಯಂತ್ರದ ನೆರವಿನಿಂದ ರಾಗಿ ಬೆಳೆ ಕಟಾವು ಮಾಡಲಾಗುತ್ತಿದೆ. ಇದು ಇನ್ನಷ್ಟು ಸುಲಭ ಎಂಬ ಮಾತು ಕೇಳಿಬರುತ್ತಿದೆ. ರಾಗಿ ತಾಳು ಕಟಾವು ಹಾಗೂ ಕಾಳು ಒಕ್ಕಣೆ ಕಾರ್ಯ ಏಕಕಾಲದಲ್ಲಿ ನಡೆಯುತ್ತದೆ.

‘ಕಾಳು ಒಕ್ಕುವ ಹಾಗೂ ಬೆಳೆ ಕಟಾವು ಮಾಡುವ ಯಂತ್ರಗಳಿಂದಾಗಿ ರಸ್ತೆ ಒಕ್ಕಣೆ ಅಪಾಯ ತಪ್ಪಿದೆ. ಒಕ್ಕಣೆ ಕಾರ್ಯ ಸುಲಭವಾಗಿದೆ. ಹೆಚ್ಚು ಹಣ ನೀಡಿದರೂ ಪರವಾಗಿಲ್ಲ. ಸಮಯ ಉಳಿದಿದೆ. ಶುದ್ಧವಾದ ಕಾಳು ಸಿಗುವಂತಾಗಿದೆ’ ಎಂದು ರೈತ ರಾಮಚಂದ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.