ADVERTISEMENT

ಜನಪ್ರತಿನಿಧಿಗಳು ರೈತರ ನೆರವಿಗೆ ಧಾವಿಸಿ: ಸಂಸದ ಮುನಿಸ್ವಾಮಿ

ಸಂಕಷ್ಟಕ್ಕೆ ಸಿಲುಕಿದ ರೈತರು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2020, 13:17 IST
Last Updated 23 ಏಪ್ರಿಲ್ 2020, 13:17 IST
ಸಂಸದ ಎಸ್‌.ಮುನಿಸ್ವಾಮಿ ಕೋಲಾರ ತಾಲ್ಲೂಕಿನ ಸೀತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜನರಿಗೆ ಗುರುವಾರ ತರಕಾರಿ ವಿತರಿಸಿದರು.
ಸಂಸದ ಎಸ್‌.ಮುನಿಸ್ವಾಮಿ ಕೋಲಾರ ತಾಲ್ಲೂಕಿನ ಸೀತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜನರಿಗೆ ಗುರುವಾರ ತರಕಾರಿ ವಿತರಿಸಿದರು.   

ಕೋಲಾರ: ‘ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಲಾಕ್‌ಡೌನ್‌ ಜಾರಿಯಾಗಿರುವುದರಿಂದ ಜನಪ್ರತಿನಿಧಿಗಳು ರೈತರ ನೆರವಿಗೆ ಧಾವಿಸಬೇಕು’ ಎಂದು ಸಂಸದ ಎಸ್.ಮುನಿಸ್ವಾಮಿ ಮನವಿ ಮಾಡಿದರು.

ತಾಲ್ಲೂಕಿನ ತಿಪ್ಪೇನಹಳ್ಳಿ ರೈತರು ಕೊಡುಗೆಯಾಗಿ ನೀಡಿದ ಸುಮಾರು ₹ 2.50 ಲಕ್ಷ ಮೌಲ್ಯದ ತರಕಾರಿಗಳನ್ನು ಗುರುವಾರ ಸೀತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 11 ಹಳ್ಳಿಗಳ ಜನರಿಗೆ ವಿತರಿಸಿ ಮಾತನಾಡಿದರು.

‘ತಿಪ್ಪೇನಹಳ್ಳಿ ರೈತರು ಎಪಿಎಂಸಿಗೆ ತಂದಿದ್ದ ತರಕಾರಿಗೆ ಬೆಲೆ ನಿಗದಿಪಡಿಸಿ ಖರೀದಿಸಲು ಮುಂದಾದರೂ ರೈತರು ಹಣ ಪಡೆಯದೆ ಬಡ ಜನರಿಗೆ ಉಚಿತವಾಗಿ ನೀಡಿದ್ದಾರೆ. ರೈತರ ಮಾನವೀಯ ಗುಣ ಅನುಕರಣೀಯ. ದೇಶಕ್ಕೆ ಅನ್ನ ನೀಡುವ ರೈತರಿಗೆ ಮಾತ್ರ ಇಂತಹ ಉದಾರ ಗುಣ ಬರಲು ಸಾಧ್ಯ’ ಎಂದು ಸ್ಮರಿಸಿದರು.

ADVERTISEMENT

‘ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ಲಾಕ್‌ಡೌನ್‌ ಮುಂದುವರಿಸುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತರಕಾರಿಗಳ ಬೆಲೆ ಕುಸಿದಿರುವುದರಿಂದ ಸರ್ಕಾರ ರೈತರ ಬೆನ್ನಿಗೆ ನಿಂತಿದೆ. ರೈತರ ಕಷ್ಟ ಪರಿಹರಿಸಲು ಜನಪ್ರತಿನಿಧಿಗಳು ಕೈಜೋಡಿಸಬೇಕು’ ಎಂದು ಕೋರಿದರು.

‘ತರಕಾರಿ ಮಾರಾಟಕ್ಕೆ ಮತ್ತು ಸಾಗಣೆಗೆ ಸರ್ಕಾರ ಅನುಮತಿ ನೀಡಿದೆ. ಎಪಿಎಂಸಿ, ಹಾಪ್‌ಕಾಮ್ಸ್‌ ಮೂಲಕ ರೈತರಿಂದ ತರಕಾರಿ ಖರೀದಿಸಲಾಗುತ್ತಿದೆ. ಜಿಲ್ಲೆಯ ರೈತರು ಆತಂಕಪಡುವ ಅಗತ್ಯವಿಲ್ಲ. ರೈತರ ಸಂಕಷ್ಟದ ದಿನಗಳು ಸದ್ಯದಲ್ಲೇ ದೂರವಾಗಲಿವೆ’ ಎಂದು ಭರವಸೆ ನೀಡಿದರು.

ಸಂಸದರು ಮಾದರಿ: ‘ಸಂಸದರು ಸ್ವಂತ ಹಣದಲ್ಲಿ ರೈತರಿಂದ ತರಕಾರಿ ಖರೀದಿಸಿ ಬಡ ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಲಾಕ್‌ಡೌನ್‌ನಿಂದ ತೊಂದರೆಗೆ ಸಿಲುಕಿರುವ ಕುಟುಂಬಗಳಿಗೆ ಸಂಸದರು ಆಹಾರ ಪದಾರ್ಥ ಹಾಗೂ ತರಕಾರಿ ನೀಡುವ ಮೂಲಕ ಮಾದರಿಯಾಗಿದ್ದಾರೆ’ ಎಂದು ಎಪಿಎಂಸಿ ಅಧ್ಯಕ್ಷ ಡಿ.ಎಲ್.ನಾಗರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು.

‘ರೈತರು ಎಪಿಎಂಸಿಗೆ ಬರುವಾಗ ಕಡ್ಡಾಯವಾಗಿ ಮುಖಗವಸು ಧರಿಸಬೇಕು. ಸರ್ಕಾರ ರೂಪಿಸಿರುವ ಆರೋಗ್ಯ ಸುರಕ್ಷತಾ ಮಾರ್ಗಸೂಚಿ ಪಾಲಿಸಬೇಕು. ತರಕಾರಿ ಬೆಲೆ ಕುಸಿದಿರುವ ಕಾರಣಕ್ಕೆ ಬೆಳೆ ನಾಶಪಡಿಸಬಾರದು. ಬೆಲೆ ಕುಸಿತ ತಾತ್ಕಾಲಿಕ’ ಎಂದು ಹೇಳಿದರು.

ಎಪಿಎಂಸಿ ನಿರ್ದೇಶಕ ಅಪ್ಪಯ್ಯ, ಸೀತಿ ಗ್ರಾ.ಪಂ ಅಧ್ಯಕ್ಷ ಪ್ರಕಾಶ್, ವೇಮಗಲ್ ಠಾಣೆ ಎಸ್‌ಐ ಕೇಶವಮೂರ್ತಿ, ಟೊಮೆಟೊ ಮಂಡಿ ಮಾಲೀಕರಾದ ನಾಗೇಶ್, ಟಿ.ದೇವರಾಜ್, ನಾರಾಯಣಸ್ವಾಮಿ, ಮಂಜುನಾಥ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.