ADVERTISEMENT

ವಿವಿಧೆಡೆ ಗಣರಾಜ್ಯೋತ್ಸವ: ಗಣ್ಯರಿಂದ ಧ್ವಜಾರೋಹಣ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 11:03 IST
Last Updated 27 ಜನವರಿ 2020, 11:03 IST
ಕೋಲಾರದ ಹೇಮಾದ್ರಿ ವಿದ್ಯಾ ಸಂಸ್ಥೆಯಲ್ಲಿ ಭಾನುವಾರ ಗಣ ರಾಜ್ಯೋತ್ಸವ ಆಚರಿಸಲಾಯಿತು.
ಕೋಲಾರದ ಹೇಮಾದ್ರಿ ವಿದ್ಯಾ ಸಂಸ್ಥೆಯಲ್ಲಿ ಭಾನುವಾರ ಗಣ ರಾಜ್ಯೋತ್ಸವ ಆಚರಿಸಲಾಯಿತು.   

ಕೋಲಾರ: ತಾಲ್ಲೂಕು ಹಾಗೂ ನಗರದ ವಿವಿಧ ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು ಹಾಗೂ ಸಂಘ ಸಂಸ್ಥೆಗಳಲ್ಲಿ ಭಾನುವಾರ 71ನೇ ಗಣ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಹೇಮಾದ್ರಿ ವಿದ್ಯಾ ಸಂಸ್ಥೆಯಲ್ಲಿ ಧ್ವಜಾರೋಹಣ ಮಾಡಿದ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಸ್.ಬಿ.ಮುನಿವೆಂಕಟಪ್ಪ, ‘ದೇಶದಲ್ಲಿ ಸಾಕಷ್ಟು ಸಮಸ್ಯೆ ಎದುರಾಗಿವೆ. ಸಮಸ್ಯೆ ಪರಿಹಾರಕ್ಕೆ ಯುವಕರು ಚಿಂತನೆ ನಡೆಸಬೇಕು’ ಎಂದು ಸಲಹೆ ನೀಡಿದರು.

‘ಮಹನೀಯರ ಹೋರಾಟ, ತ್ಯಾಗ ಬಲಿದಾನದಿಂದ ನಾವೆಲ್ಲಾ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ವಿದ್ಯಾರ್ಥಿಗಳು ನೈತಿಕ ಮೌಲ್ಯ ಬೆಳೆಸಿಕೊಂಡು ಸತ್ಪ್ರಜೆಗಳಾಗಬೇಕು. ಜತೆಗೆ ದೇಶ ಸೇವೆಗೆ ಬದ್ಧರಾಗಬೇಕು. ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಉನ್ನತ ಸಾಧನೆ ಮಾಡುವ ಮೂಲಕ ದೇಶದ ಗೌರವ ಹೆಚ್ಚಿಸಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

ತಾಲ್ಲೂಕಿನ ಗರುಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣ ರಾಜ್ಯೋತ್ಸವದ ಅಂಗವಾಗಿ ಹಳೆಯ ವಿದ್ಯಾರ್ಥಿಗಳು ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿದರು. ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ವೆಂಕಟರವಣಪ್ಪ ಹಾಜರಿದ್ದರು.

ನಗರಸಭೆ ಕಚೇರಿಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಧ್ವಜಾರೋಹಣ ಮಾಡಿದರು. ನಗರದ ಬೆಸ್ಕಾಂ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೈನ್‌ಮನ್‌ ಎಂ.ಕೃಷ್ಣಾರೆಡ್ಡಿ ಅವರಿಗೆ ವಿಭಾಗೀಯ ‘ಪವರ್ ಮ್ಯಾನ್’ ಅತ್ಯುತ್ತಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಪಿಎಂಸಿ ಮಾರುಕಟ್ಟೆ ಸಮಿತಿಯಲ್ಲಿ ಸಮಿತಿ ಅಧ್ಯಕ್ಷ ಡಿ.ಎಲ್.ನಾಗರಾಜ್ ಧ್ವಜಾರೋಹಣ ಮಾಡಿದರು.

ಸಮರ್ಪಣಾ ದಿನ: ಬಿಜೆಪಿ ಮುಖಂಡರು ತಾಲ್ಲೂಕಿನ ವೇಮಗಲ್‌ನಲ್ಲಿ ಗಣ ರಾಜ್ಯೋತ್ಸವವನ್ನು ಸಂವಿಧಾನ ಸಮರ್ಪಣಾ ದಿನವಾಗಿ ಆಚರಿಸಿದರು. ಪಕ್ಷದ ಕಾರ್ಯಕರ್ತರು ಮಹಿಳೆಯರಿಗೆ ಬೆಡ್‌ಶೀಟ್‌ ವಿತರಿಸಿದರು, ಬಹುಜನ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ವಿಜಯ್‌ಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಪ್ಪ, ಬಿಜೆಪಿ ಮುಖಂಡರಾದ ಅಂಬರೀಶ್, ಶ್ರೀರಾಮರೆಡ್ಡಿ ಹಾಜರಿದ್ದರು.

ನಗರದ ಟಮಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಟೇಕಲ್‌ ರಸ್ತೆಯ ಬಾಪೂಜಿ ಶಾಲೆ ಬಳಿ ಗಣ ರಾಜ್ಯೋತ್ಸವ ಆಚರಿಸಲಾಯಿತು. ನಿವೃತ್ತ ಯೋಧ ರಾಮಯ್ಯ ಧ್ವಜಾರೋಹಣ ನೆರವೇರಿಸಿದರು. ವಕೀಲರಾದ ಬಿ.ಮಂಜುನಾಥ್, ನಾಗೇಶ್, ಚಂದ್ರು, ಮುರಳಿ, ಕಲ್ಯಾಣ್, ದಲಿತ ಮುಖಂಡ ಸುಬ್ಬು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.