ಮುಳಬಾಗಿಲು: ‘ಶಾಸಕರಾಗಲಿ ಅಥವಾ ಜನಸಾಮಾನ್ಯರಾಗಲಿ ಒಂದು ಸಮಾಜಕ್ಕೆ ಮೀಸಲಾಗಿರುವ ಜಾತಿ ಪ್ರಮಾಣಪತ್ರ ದುರ್ಬಳಕೆ ಮಾಡಿಕೊಂಡರೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಈಚೆಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿಗೆ ಒಕ್ಕೊರಲಿನಿಂದ ಮನವಿ ಸಲ್ಲಿಸಿದ್ದೆವು. ಈ ಸಂಬಂಧ ತೀರ್ಮಾನ ಕೂಡ ಆಗಿದೆ’ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಕುರುಡುಮಲೆಯ ಶ್ರೀಲಕ್ಷ್ಮಿ ಗಣಪತಿ ದೇವಾಲಯ ರಥೋತ್ಸವಕ್ಕೆ ಗುರುವಾರ ಚಾಲನೆ ನೀಡಿದ ನಂಯತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಜಾತಿ ಪ್ರಮಾಣಪತ್ರ ದುರ್ಬಳಕೆ ಕೇವಲ ಒಂದು ಕಡೆಯಲ್ಲಿ ಅಲ್ಲ; ರಾಜ್ಯದ ವಿವಿಧೆಡೆ ಆಗಿದೆ. ನಕಲಿ ಜಾತಿ ಪ್ರಮಾಣಪತ್ರ ಮಾಡಿಸಿಕೊಂಡು ಸಾವಿರಾರು ಮಂದಿ ಉದ್ಯೋಗದಲ್ಲಿದ್ದಾರೆ. ಇದು ಒಂದು ಸಮುದಾಯ ಅಥವಾ ಜಾತಿಗೆ ಮೀಸಲಾಗಿರುವ ಸೌಲಭ್ಯ ಕಿತ್ತುಕೊಂಡು ದುರ್ಬಳಕೆ ಮಾಡಿಕೊಂಡಂತೆ. ಅರ್ಹರಿಗೆ ಸೌಲಭ್ಯ ನೀಡಿ ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿದವರನ್ನು ತೆಗೆದು ಹಾಕುವ ಕೆಲಸ ನಡೆಯಲಿದೆ’ ಎಂದರು.
ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಅವರು ಈ ಹಿಂದೆ ಮುಳಬಾಗಿಲು ಮೀಸಲು ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ ಉದ್ಭವಿಸಿದ್ದ ಜಾತಿ ಪ್ರಮಾಣಪತ್ರ ವಿವಾದ ಪ್ರಕರಣ ಹಿನ್ನೆಲೆಯಲ್ಲಿ ಸಚಿವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಈ ಸಂಬಂಧ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಈಚೆಗೆ ನಡೆದ ಎಸ್‌ಸಿ, ಎಸ್‌ಟಿ ಸಭೆಯಲ್ಲಿ ಮುನಿಯಪ್ಪ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಧ್ವನಿ ಎತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.