ADVERTISEMENT

ಕೋಲಾರ | ಮಾಂಸದೂಟದ ಬಯಕೆಗೆ ಜಿಲ್ಲಾಡಳಿತ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 27 ಮೇ 2020, 19:45 IST
Last Updated 27 ಮೇ 2020, 19:45 IST

ಕೋಲಾರ: ನಗರದ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರ ಮಾಂಸಾಹಾರ ಸೇವನೆಯ ಬಯಕೆಗೆ ಸ್ಪಂದಿಸಿರುವ ಜಿಲ್ಲಾಡಳಿತವು ವಾರಕ್ಕೊಮ್ಮೆ ಕೋಳಿ ಮತ್ತು ಕುರಿ ಮಾಂಸದೂಟದ ವ್ಯವಸ್ಥೆ ಮಾಡಿದೆ.

ಜಿಲ್ಲೆಯಲ್ಲಿ ಈವರೆಗೆ 19 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಅವರೆಲ್ಲರನ್ನೂ ಎಸ್‍ಎನ್‍ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಬೇಗನೆ ಗುಣಮುಖರಾಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಅವರಿಗೆ ಪೌಷ್ಟಿಕ ಆಹಾರ ನೀಡುತ್ತಿತ್ತು.

ಸೋಂಕಿತರಲ್ಲಿ ಕೆಲ ಮಂದಿ ತಮಗೆ ಕೋಳಿ ಮತ್ತು ಕುರಿ ಮಾಂಸದೂಟ, ಬಿರಿಯಾನಿ ಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಇವರ ಮನವಿಗೆ ಸ್ಪಂದಿಸಿರುವ ಜಿಲ್ಲಾಡಳಿತವು ಸೋಂಕಿತರಿಗೆ ಪ್ರತಿನಿತ್ಯ ಆಹಾರದೊಂದಿಗೆ ಬೆಳಿಗ್ಗೆ ಮತ್ತು ಸಂಜೆ ಕೋಳಿ ಮೊಟ್ಟೆ ನೀಡಲು ವ್ಯವಸ್ಥೆ ಮಾಡಿದೆ. ಜತೆಗೆ ವಾರದಲ್ಲಿ ಒಂದು ದಿನ ಮಾಂಸದೂಟ ನೀಡುತ್ತಿದೆ.

ADVERTISEMENT

ಇದರ ನಡುವೆ ಸೋಂಕಿತರು ಮಾಂಸಾಹಾರಕ್ಕೆ ಹೆಚ್ಚುವರಿಯಾಗಿ ಕೋರಿಕೆ ಸಲ್ಲಿಸಿದರೆ ಪೂರೈಕೆ ಮಾಡುವಂತೆ ಜಿಲ್ಲಾಧಿಕಾರಿಯು ಆರೋಗ್ಯ ಇಲಾಖೆ ಸಿಬ್ಬಂದಿಗೆ ಆದೇಶಿಸಿದ್ದಾರೆ. ಮಾಂಸದೂಟದ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದ್ದಾರೆ.

‘ಕೊರೊನಾ ಸೋಂಕಿತರಲ್ಲಿ ಕೆಲವರು ಮಾಂಸಾಹಾರ ಬೇಕೆಂದು ಕೋರಿದ್ದರು. ಸದ್ಯ ಅವರಿಗೆ ಊಟದ ಜತೆ ಮೊಟ್ಟೆ ನೀಡಲಾಗುತ್ತಿದ್ದು, ವಾರದಲ್ಲಿ ಒಂದು ಮಾಂಸದೂಟ ಕೊಡುವ ವ್ಯವಸ್ಥೆ ಮಾಡಿದ್ದೇವೆ’ ಎಂದು ಜಿಲ್ಲಾಧಿಕಾರಿ- ಸಿ.ಸತ್ಯಭಾಮ ‘ಪ್ರಜಾವಾಣಿ’ಗೆ ತಿಳಿಸಿದರು.

9 ಮಂದಿ ಗುಣಮುಖ: 19 ಮಂದಿ ಸೋಂಕಿತರ ಪೈಕಿ 9 ಮಂದಿ ಬಹುತೇಕ ಗುಣಮಖರಾಗಿದ್ದಾರೆ. ಇವರ ಕಫಾ ಮತ್ತು ರಕ್ತ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 2 ದಿನದಲ್ಲಿ ವೈದ್ಯಕೀಯ ವರದಿ ಬರಲಿದ್ದು, ಸೋಂಕು ಇಲ್ಲದಿರುವುದು ದೃಢಪಪಟ್ಟರೆ ಇವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸುತ್ತೇವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.