ADVERTISEMENT

ತೋಟದಲ್ಲಿ ಕಂದಾಯ ದಿನಾಚರಣೆ

ಅಧಿಕಾರಿಗಳ ನಡೆಗೆ ಸಾರ್ವಜನಿಕರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 4:37 IST
Last Updated 2 ಜುಲೈ 2021, 4:37 IST
ಖಾಸಗಿ ತೋಟದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಫೋಟೊ ತೆಗೆಸಿಕೊಂಡಿರುವುದು
ಖಾಸಗಿ ತೋಟದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಫೋಟೊ ತೆಗೆಸಿಕೊಂಡಿರುವುದು   

ಕೆಜಿಎಫ್: ಕಂದಾಯ ದಿನಾಚರಣೆ ಅಂಗವಾಗಿ ತಾಲ್ಲೂಕು ಕಚೇರಿ ಸಿಬ್ಬಂದಿ ಗುರುವಾರ ಬೂಚೇಪಲ್ಲಿಯ ಖಾಸಗಿ ತೋಟದಲ್ಲಿ ಪಾರ್ಟಿ ಮಾಡಿರುವುದು ಟೀಕೆಗೆ ಗುರಿಯಾಗಿದೆ.

ಕೋವಿಡ್ ಸಂಕಷ್ಟದ ಸಮಯದಲ್ಲಿ ತೋಟದ ಮನೆಯಲ್ಲಿ ಮಾರ್ಗಸೂಚಿ ಉಲ್ಲಂಘನೆಯಾಗಿದೆ ಎಂದು ದೂರಲಾಗಿದೆ. ತಹಶೀಲ್ದಾರ್‌ ಕೆ.ಎನ್‌. ಸುಜಾತಾನೇತೃತ್ವದಲ್ಲಿ ಪುರುಷ ಮತ್ತು ಮಹಿಳಾ ಸಿಬ್ಬಂದಿ ಔತಣಕೂಟದಲ್ಲಿ ಪಾಲ್ಗೊಂಡಿದ್ದರು.

ಕಂದಾಯ ಇಲಾಖೆಯ ಬಹುತೇಕ ಎಲ್ಲಾ ಸಿಬ್ಬಂದಿಯು ತೋಟದಲ್ಲಿ ಊಟ ಮಾಡುತ್ತಿರುವುದು ಮತ್ತು ತೋಟದ ಮಾಲೀಕ ನಿರ್ಮಾಣ ಮಾಡಿರುವ ಈಜುಕೊಳದ ಬಳಿ ನಿಂತು ಫೋಟೊ ತೆಗೆಸಿಕೊಂಡಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ADVERTISEMENT

ಕಚೇರಿ ಸಮಯದಲ್ಲಿ ಸಿಬ್ಬಂದಿ ತೋಟಕ್ಕೆ ಹೋಗಿ ಊಟ ಮಾಡುತ್ತಿರುವುದರಿಂದ ಮಧ್ಯಾಹ್ನದ ವೇಳೆಯಲ್ಲಿ ಕಚೇರಿ ಕೆಲಸಕ್ಕೆ ಅಡ್ಡಿ ಉಂಟಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ದೂರಲಾಗಿದೆ.

ವಿವಾದವನ್ನು ಅಲ್ಲಗೆಳೆದಿರುವ ತಹಶೀಲ್ದಾರ್ ಕೆ.ಎನ್‌. ಸುಜಾತಾ, ‘ಕಂದಾಯ ದಿನಾಚರಣೆ ಅಂಗವಾಗಿ ಸಿಬ್ಬಂದಿ ಮಧ್ಯಾಹ್ನ 1.30ಕ್ಕೆ ತೋಟಕ್ಕೆ ಊಟಕ್ಕೆ ಹೋಗಿ ಮಧ್ಯಾಹ್ನ 3 ಗಂಟೆ ವೇಳೆಗೆ ಬಂದಿದ್ದಾರೆ. ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ಕೋವಿಡ್ ಸಮಯದಲ್ಲಿ ಸತತವಾಗಿ ಕೆಲಸ ಮಾಡಿದ್ದ ಕಂದಾಯ ಅಧಿಕಾರಿಗಳು ಕೊಂಚ ಕಾಲ ಒಂದೆಡೆ ಸೇರಿ ಊಟ ಮಾಡಿರುವುದು ತಪ್ಪಲ್ಲ. ಈ ವಿಷಯವನ್ನು ಮೇಲಧಿಕಾರಿಗಳಿಗೆ ಕೂಡ ತಿಳಿಸಲಾಗಿದೆ’
ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.