ADVERTISEMENT

ರಾಷ್ಟ್ರೀಯ ವಿಪತ್ತು ಘೋಷಣೆಗೆ ಹಕ್ಕೋತ್ತಾಯ

ಚೊಚ್ಚಲ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 14:19 IST
Last Updated 17 ಆಗಸ್ಟ್ 2019, 14:19 IST
ಕೋಲಾರದಲ್ಲಿ ಶನಿವಾರ ಆರಂಭವಾದ ರಾಜ್ಯ ಮಟ್ಟದ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಎಲ್.ಹನುಮಂತಯ್ಯ ಮಾತನಾಡಿದರು.
ಕೋಲಾರದಲ್ಲಿ ಶನಿವಾರ ಆರಂಭವಾದ ರಾಜ್ಯ ಮಟ್ಟದ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಎಲ್.ಹನುಮಂತಯ್ಯ ಮಾತನಾಡಿದರು.   

ಕೋಲಾರ: ದಲಿತ ಚಳವಳಿಯ ತವರೂರು ಎಂದೇ ಹೆಸರಾಗಿರುವ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಚೊಚ್ಚಲ ದಲಿತ ಸಾಹಿತ್ಯ ಸಮ್ಮೇಳನ ಶನಿವಾರ ಆರಂಭವಾಗಿದ್ದು, ಸಮ್ಮೇಳನಕ್ಕೆ ಮೊದಲ ದಿನವೇ ಸಾಹಿತ್ಯಾಸಕ್ತರ ದಂಡು ಹರಿದು ಬಂದಿತು.

ದಮನಿತರ ಕೂಗಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಹಮ್ಮಿಕೊಂಡಿರುವ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯು ಆತಿಥ್ಯ ವಹಿಸಿದ್ದು, ಸಾಹಿತಿಗಳು ಹಾಗೂ ಚಿಂತಕರು ಸಾಹಿತ್ಯ ಜಾತ್ರೆಗೆ ಮೆರುಗು ತುಂಬಿದರು.

ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿಯಿರುವ ಹಿನ್ನೆಲೆಯಲ್ಲಿ ಅದ್ಧೂರಿತನಕ್ಕೆ ಅವಕಾಶ ನೀಡದೆ ಸರಳವಾಗಿ ಸಮ್ಮೇಳನ ಆಚರಿಸಲಾಗುತ್ತಿದ್ದು, ಸಮ್ಮೇಳನದಲ್ಲಿ ನೆರೆ ವಿಚಾರವಾಗಿ ಚಿಂತನ ಮಂಥನ ನಡೆಯಿತು. ದಲಿತ ಸಾಂಸ್ಕೃತಿಕ ಚಿಂತನೆ, ಬುಡಕಟ್ಟು ಸಂಸ್ಕೃತಿ, ಜನಪದ ಸಾಹಿತ್ಯದಲ್ಲಿ ದಲಿತ ಪ್ರತಿನಿಧೀಕರಣ, ದಲಿತ ಸಾಹಿತ್ಯದಲ್ಲಿ ರೈತ ಹೋರಾಟ ಕುರಿತಂತೆ ಚರ್ಚೆ ನಡೆಯಿತು.

ADVERTISEMENT

‘ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಆಗಿರುವ ವಿನಾಶವನ್ನು ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಹೆಚ್ಚಿನ ಆರ್ಥಿಕ ನೆರವು ನೀಡಬೇಕು’ ಎಂದು ದಲಿತ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಲ್.ಹನುಮಂತಯ್ಯ ಹಕ್ಕೋತ್ತಾಯ ಮಾಡಿದರು.

ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ‘ರಾಜ್ಯವು ತೀವ್ರ ಅತಿವೃಷ್ಟಿ ಅನುಭವಿಸುತ್ತಿದೆ. ತಮ್ಮದಲ್ಲದ ತಪ್ಪಿಗಾಗಿ ನೆರೆ ಬಂದು ಜನರ ಬದುಕೇ ಮುಳುಗಿ ಹೋಗಿದೆ’ ಎಂದು ವಿಷಾದಿಸಿದರು.

‘ಮಹಾರಾಷ್ಟ್ರದ ಅಣೆಕಟ್ಟು ತುಂಬಿ ಹೆಚ್ಚುವರಿ ನೀರು ಹರಿಬಿಟ್ಟ ಕಾರಣದಿಂದ ಕನ್ನಡಿಗರು ನೆರೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದು ನೋವಿನ ಸಂಗತಿ. ಉತ್ತರ ಕರ್ನಾಟಕದ ಜನಗೆ ಹಲವು ವರ್ಷಗಳಿಗೊಮ್ಮೆ ಈ ಸಂಕಷ್ಟ ಎದುರಾಗುತ್ತದೆ. ವರ್ಷವಿಡೀ ಕುಡಿಯುವ ನೀರಿಗಾಗಿ ಪರದಾಡಿ, ಮಹದಾಯಿ ನೀರಿಗಾಗಿ ಹೋರಾಟ ಮಾಡಿದ್ದವರ ಬದುಕು ಅತಿವೃಷ್ಟಿಯ ನೀರಿನಲ್ಲಿ ಮುಳುಗಿ ಹೋಗಿದ್ದು ವಿಪರ್ಯಾಸ’ ಎಂದು ಮರುಗಿದರು.

‘ನೆರೆಯಿಂದ ಊರಿಗೆ ಊರೇ ನೀರಿನಲ್ಲಿ ಮುಳುಗಿ ಹೋಗಿದೆ, ಬೆಳೆ ನಾಶವಾಗಿದೆ. ಜನ ಮೃತಪಟ್ಟಿದ್ದಾರೆ, ಜಾನುವಾರು ಕಣ್ಮರೆಯಾಗಿವೆ. ಬಡವರ ಮನೆಗಳು ಕುಸಿದಿವೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ತನ್ನೆಲ್ಲಾ ಸಂಪನ್ಮೂಲ ಕ್ರೂಢೀಕರಿಸಿ ಬಡವರಿಗೆ ಮತ್ತೆ ಬದುಕು ಕಟ್ಟಿಕೊಡಬೇಕು. ಕೇಂದ್ರವು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಬಡವರ ಬದುಕು ಕಟ್ಟುವ ಕೈಂಕರ್ಯಕ್ಕೆ ಕೈಜೋಡಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.