ADVERTISEMENT

ಹಸಿರು ಮನೆಯಲ್ಲಿ ಗುಲಾಬಿ ಘಮ...

ಮಳೆ ಕೊಯ್ಲು ಯೋಜನೆ ಅಳವಡಿಸಿ ಕೃಷಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 8:27 IST
Last Updated 20 ಜುಲೈ 2024, 8:27 IST
ಮಾರುಕಟ್ಟೆಗೆ ಸಾಗಿಸಲು ಸಿದ್ಧವಾಗಿರುವ ಗುಲಾಬಿ ಹೂಗಳು 
ಮಾರುಕಟ್ಟೆಗೆ ಸಾಗಿಸಲು ಸಿದ್ಧವಾಗಿರುವ ಗುಲಾಬಿ ಹೂಗಳು    

ಮಾಲೂರು: ನೀರಿನ ಕೊರತೆ ನೀಗಿಸಲು ಸರ್ಕಾರ ಮಳೆ ಕೊಯ್ಲು ಯೋಜನೆ ರೂಪಿಸಿದೆ. ಆದರೆ, ಇಲ್ಲೊಬ್ಬ ರೈತ ಮಳೆ ಕೊಯ್ಲು ಯೋಜನೆ ಅಳವಡಿಸಿಕೊಂಡು ಆ ನೀರಿನಿಂದಲೇ ವ್ಯವಸಾಯ ನಡೆಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ತಾಲ್ಲೂಕಿನ ಕಣುವೆನಹಳ್ಳಿ ಗ್ರಾಮದ ರೈತ ಆರ್.ಶಂಕರ್ ತಮ್ಮ ತೋಟದ ಹಸಿರು ಮನೆ ಮೇಲೆ ಬಿದ್ದ ಮಳೆ ನೀರನ್ನು ಸಂಗ್ರಹಿಸಿ ಬೇಸಾಯ ಮಾಡುವ ಮೂಲಕ ಮಳೆ ಕೊಯ್ಲು ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ.

ಶಂಕರ್‌ ಪದವೀದರಾಗಿದ್ದು, ತಂದೆ ಮಾಡಿಕೊಂಡಿದ್ದ ಕೃಷಿಯನ್ನು ತಮ್ಮ ಮುಖ್ಯ ಕಸುಬನ್ನಾಗಿಸಿಕೊಂಡಿದ್ದಾರೆ. ಭೂಮಿಯಲ್ಲಿ 1,500 ಅಡಿ ಕೊರೆಸಿದ್ದ ಕೊಳವೆಬಾವಿಯಲ್ಲಿ ಒಂದೂವರೆ ಇಂಚು ನೀರು ದೊರೆತಿದ್ದು, ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಮಳೆ ನೀರು ಕೊಯ್ಲು ಪದ್ಧತಿಯಿಂದ ಸಂಗ್ರಹಿಸಿದ ಮಳೆ ನೀರನ್ನು ತೋಟಕ್ಕೆ ಬಳಕೆ ಮಾಡುವ ಯೋಜನೆ ಅರಿವು ಪಡೆದು ಕಳೆದ ವರ್ಷ ತಮ್ಮ ತೋಟದ ಎಕರೆ ಪ್ರದೇಶದಲ್ಲಿ ನಿರ್ಮಿಸಿದ್ದ ಹಸಿರು ಮನೆ ನೀರನ್ನೇ ಬಳಸಿ ಕೃಷಿಗೆ ಮುಂದಾಗಿದ್ದಾರೆ.

ADVERTISEMENT

ನೀರು ಹಿಂಗದಂತೆ ಪ್ಲಾಸ್ಟಿಕ್ ಹಾಳೆ ಬಳಕೆ: ಮಳೆಗಾಲದಲ್ಲಿ ಸುರಿಯುವ ಮಳೆ ನೀರು ಸಂಗ್ರಹಿಸಲು 15 ಅಡಿ ಆಳದ ಹೊಂಡ ನಿರ್ಮಿಸಿದರು. ನೀರು ಭೂಮಿಯಲ್ಲಿ ಹಿಂಗದಂತೆ ಪ್ಲಾಸ್ಟಿಕ್ ಹಾಳೆ ಬಳಸಿ ನೀರು ಸಂಗ್ರಹಿಸಿದ್ದಾರೆ. ಮಳೆ ನೀರು ಸಾರಾಗವಾಗಿ ಒಂದು ಕಡೆ ಹರಿಸುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ನೀರನ್ನು ಹೊಂಡಕ್ಕೆ ಸಾಗಿಸಲು ಚರಂಡಿ ನಿರ್ಮಿಸಲಾಗಿದೆ. ಇದರಿಂದ 3 ಸೆಂ.ಮೀ ಮಳೆಯಾದರೆ 5 ಲಕ್ಷ ಲೀಟರ್‌ ನೀರು ಹೊಂಡದಲ್ಲಿ ಸಂಗ್ರಹವಾಗುತ್ತದೆ. ನೀರಿನೊಂದಿಗೆ ಹರಿದು ಬರುವ ಮಣ್ಣನ್ನು ಪ್ರಥಮ ಹಂತದಲ್ಲೇ ತಡೆದು ನೀರನ್ನು ಮಾತ್ರ ಹೊಂಡಕ್ಕೆ ಬಿಡುವ ವ್ಯವಸ್ಥೆ ಮಾಡಲಾಗಿದೆ. ಹೊಂಡದಲ್ಲಿನ ನೀರನ್ನು ತೋಟಕ್ಕೆ ನೇರವಾಗಿ ಹರಿಸುವ ಬದಲಿಗೆ ಫಿಲ್ಟರ್ ಅಳವಡಿಸುವ ಮೂಲಕ ನೀರಿನಲ್ಲಿರುವ ಕಸ–ಕಡ್ಡಿಗ ಶುದ್ಧೀಕರಿಸಿ ಹನಿ ನೀರಾವರಿ ಪದ್ಧತಿಯಿಂದ ಬೆಳೆಗಳಿಗೆ ಉಪಯೋಗಿಸಲಾಗುತ್ತಿದೆ. 

2.5 ಎಕರೆ ಪ್ರದೇಶದ ಹಸಿರು ಮನೆಯಲ್ಲಿ ಡಚ್ ತಳಿಯ ಗುಲಾಬಿ ನಾಟಿ ಮಾಡಲಾಗಿದೆ. ಇದರಲ್ಲಿ ಸುಮಾರು 10 ರೀತಿಯ ವಿವಿಧ ಬಣ್ಣದ ಗುಲಾಬಿ ಹೂಗಳನ್ನು ಬೆಳೆಯಲಾಗುತ್ತಿದೆ. ಇದರಲ್ಲಿ ಅವಲಂಚ, ತಾಜ್‌ಮಹಲ್, ಜುಮುಲಿ ತಳಿಗಳಿಗೆ ಹೆಚ್ಚು ಬೇಡಿಕೆ ಇದೆ. ವ್ಯಾಪಾರಿಗಳು ತೋಟದ ಬಳಿ ಬಂದು ಒಂದು ಕಟ್ಟು ಹೂವಿನ ಗೊಂಚಲಿಗೆ ₹60 ರಿಂದ ₹150ರಂತೆ ಖರೀದಿಸಿ ಸ್ಥಳದಲ್ಲೇ ಹಣ ನೀಡುತ್ತಾರೆ. ಆಶಾಡ ಹೊರತುಪಡಿಸಿ ಉಳಿದ ವರ್ಷದ ಎಲ್ಲಾ ದಿನಗಳಲ್ಲಿ ಒಂದು ಕಟ್ಟು ಗುಲಾಬಿ ಹೂ ₹200ಕ್ಕೆ ಮಾರಾಟವಾಗುತ್ತದೆ. ಬೆಂಗಳೂರು ಮತ್ತು ಹೊಸೂರು ಹೂವಿನ ಮಾರುಕಟ್ಟೆಗೆ ಸಾಗಿಸಲಾಗುತ್ತದೆ.

ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೆಗೆ ನಿರ್ಮಾಣವಾಗಿರುವ ನೀರಿನ ಹೊಂಡ
ಹಸಿರು ಮನೆಯಲ್ಲಿ ನಾಟಿ ಮಾಡಿರುವ ಡಚ್ ತಳಿಯ ಗುಲಾಬಿ ಹೂ 
ಆರ್.ಶಂಕರ್

ರೈತರು ಕೃಷಿ ಚಟುವಟಿಕೆಗೆ ಕೊಳವೆಬಾವಿಯನ್ನೇ ನಂಬಿಕೊಳ್ಳದೆ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡು ಹನಿ ನೀರಾವರಿ ಬಳಸಿಕೊಂಡು ಬೇಡಿಕೆ ಇರುವ ಬೆಳೆ ಬೆಳೆಯುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು

-ಆರ್.ಶಂಕರ್ ಕಣಿವೆನಹಳ್ಳಿ ರೈತ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.