ADVERTISEMENT

ಸಂತ್ರಸ್ತ ಕುಟುಂಬಕ್ಕೆ ಮನೆ ನಿರ್ಮಾಣಕ್ಕೆ ₹5 ಲಕ್ಷ: ಸಚಿವ ಕೋಟ ಶ್ರೀನಿವಾಸ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 13:08 IST
Last Updated 28 ಸೆಪ್ಟೆಂಬರ್ 2022, 13:08 IST
   

ಕೋಲಾರ: ‘ಅಸ್ಪೃಶ್ಯತೆ ನಿವಾರಣೆ ಉದ್ದೇಶದಿಂದ ರಾಜ್ಯದಾದ್ಯಂತ ಸರ್ಕಾರದಿಂದಲೇ ಬೃಹತ್‌ ಆಂದೋಲನ ನಡೆಸಲಾಗುವುದು. ಈ ನಿಟ್ಟಿನಲ್ಲಿ ಸಿದ್ಧತೆಗಳು ನಡೆಯುತ್ತಿವೆ’ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಒಬ್ಬ ಮನುಷ್ಯನನ್ನು ಮತ್ತೊಬ್ಬ ಮನುಷ್ಯ ಮುಟ್ಟಲಾರದಷ್ಟು ಅಸ್ಪೃಶ್ಯತೆ ಇದ್ದರೆ ಆ ಸಮಾಜವೇ ಪ್ರಶ್ನಾರ್ಹ. ಎಲ್ಲಾ ಪರಿಶಿಷ್ಟರಿಗೆ ಸಮಾನ ಬದುಕಿನ ಹಕ್ಕು ಕಲ್ಪಿಸಲು ಸರ್ಕಾರ ಬದ್ಧವಾಗಿದೆ’ ಎಂದು ಭರವಸೆ ನೀಡಿದರು.

‘ಉಳ್ಳೇರಹಳ್ಳಿಯ ಸಂತ್ರಸ್ತ ಕುಟುಂಬದ ನೆಲೆಗಾಗಿ ಜಿಲ್ಲಾಡಳಿತ ಈಗಾಗಲೇ ನಿವೇಶನ ಗುರುತಿಸಿದೆ. ಮನೆ ನಿರ್ಮಿಸಲು ಇಲಾಖೆಯಿಂದ ವಿಶೇಷ ಅನುದಾನದಡಿ ₹5 ಲಕ್ಷ ಬಿಡುಗಡೆ ಮಾಡಲಾಗುವುದು. ಬಾಲಕನ ಉನ್ನತ ಶಿಕ್ಷಣದವರೆಗಿನ ಎಲ್ಲಾ ಖರ್ಚನ್ನು ಇಲಾಖೆಯೇ ಭರಿಸಲಿದೆ’ ಎಂದರು.

ADVERTISEMENT

ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂತ್ರಸ್ತ ಮಹಿಳೆ ಶೋಭಾ ಅವರನ್ನು ಭೇಟಿಯಾಗಿ ಪುನರ್‌ ವಸತಿ ಯೋಜನೆಯಡಿ ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ₹ 5 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲು ಆದೇಶ ಪತ್ರ ನೀಡಿದರು. ಪದವಿಪೂರ್ವ ಶಿಕ್ಷಣದಿಂದ ಸ್ನಾತಕೋತ್ತರವರೆಗೆ ಉಚಿತ ಶಿಕ್ಷಣಕ್ಕೆ ಅರ್ಹವಾಗಿರುವ ಪ್ರಮಾಣಪತ್ರ ನೀಡಿದರು. ಮನೆಗೆ ಸಮೀಪದಲ್ಲಿರುವ ಇಲಾಖೆಯ ಹಾಸ್ಟೆಲ್‌ನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಅಡುಗೆ ಕೆಲಸ ನೀಡಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಸಂಸದ ಎಸ್‌.ಮುನಿಸ್ವಾಮಿ, ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.