ADVERTISEMENT

ಕೋಲಾರ: ಶ್ರೀನಿವಾಸಪುರ ತಹಶೀಲ್ದಾರ್‌ಗೆ ₹ 25 ಸಾವಿರ ದಂಡ

ಒಂದು ಆರ್‌ಟಿಐ ಅರ್ಜಿಗೆ ಎರಡು ರೀತಿ ಮಾಹಿತಿ ನೀಡಿದ ತಹಶೀಲ್ದಾರ್‌ ವಿರುದ್ಧ ಮಾಹಿತಿ ಆಯೋಗದ ಕ್ರಮ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 19:17 IST
Last Updated 19 ಸೆಪ್ಟೆಂಬರ್ 2025, 19:17 IST
ಸುಧೀಂದ್ರ
ಸುಧೀಂದ್ರ   

ಕೋಲಾರ: ಶ್ರೀನಿವಾಸಪುರ ತಾಲ್ಲೂಕು ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆಗಿರುವ ತಹಶೀಲ್ದಾರ್‌ ಸುಧೀಂದ್ರ ಒಂದು ಆರ್‌ಟಿಐ ಅರ್ಜಿಗೆ ಎರಡೂ ರೀತಿ ಮಾಹಿತಿ ಒದಗಿಸಿರುವುದು ಕಂಡುಬಂದಿದೆ.

ಈ ಸಂಬಂಧ ಮೇಲ್ಮನವಿ ವಿಚಾರಣೆ ನಡೆಸಿರುವ ರಾಜ್ಯ ಮಾಹಿತಿ ಆಯೋಗದ ಮಾಹಿತಿ ಆಯುಕ್ತ ರುದ್ರಣ ಹರ್ತಿಕೋಟೆ, ತಹಶೀಲ್ದಾರ್‌ಗೆ ₹ 25 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ಜೊತೆಗೆ ಶಿಸ್ತು ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಅಲ್ಲದೇ, ಪರಿಹಾರವಾಗಿ ಮೇಲ್ಮನವಿದಾರರಿಗೆ ₹ 10 ಸಾವಿರ ನೀಡಲು ನಿರ್ದೇಶನ ಹೊರಡಿಸಿದ್ದಾರೆ.

ಶ್ರೀನಿವಾಸಪುರ ತಾಲ್ಲೂಕಿನ ಕಸಬಾ ಹೋಬಳಿ ಪಣಸಮಾಕನಹಳ್ಳಿ ಗ್ರಾಮದ ಸರ್ವೇ ನಂಬರ್‌ 83 ಮತ್ತು 84ರಲ್ಲಿನ ಜಮೀನು ಖಾತೆ ಬದಲಾವಣೆ ಕುರಿತು ಹಾಗೂ ಕೋರ್ಟ್‌ ಆದೇಶ ಸಂಖ್ಯೆ 145/2022ಹಾಗೂ 23ರ ಕಡತದ ಎಲ್ಲಾ ಪುಟಗಳ ನಕಲುಗಳನ್ನು ದೃಢೀಕರಿಸಿ ನೀಡುವಂತೆ 2022ರ ಆ.5ರಂದು ಸಾಮಾಜಿಕ ಕಾರ್ಯಕರ್ತ ವೆಂಕಟೇಶ್‌ ಎಂಬುವರು ಆರ್‌ಟಿಐ ಅರ್ಜಿ ಸಲ್ಲಿಸಿ ಮಾಹಿತಿ ಕೋರಿದ್ದರು.

ADVERTISEMENT

30 ದಿನದಲ್ಲಿ ಮಾಹಿತಿ ಒದಗಿಸಬೇಕಾದ ಜವಾಬ್ದಾರಿ ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆಗಿರುವ ತಹಶೀಲ್ದಾರ್‌ ಮೇಲಿದೆ. ಸಕಾಲಕ್ಕೆ ಮಾಹಿತಿ ಒದಗಿಸದ ಕಾರಣ ಅರ್ಜಿದಾರ ಮೇಲ್ಮನವಿ ಸಲ್ಲಿಸಿದ್ದರು. ಜುಲೈ 18ರಂದು ಆಯೋಗ ವಿಚಾರಣೆ ನಡೆಸಿ ಮಾಹಿತಿ ಒದಗಿಸಲು ಸೂಚಿಸಿತ್ತು. 

ಅರ್ಜಿ ಸಂಬಂಧ 2025 ಜುಲೈ 21ರಂದು ಮಾಹಿತಿ ನೀಡಿದ್ದ ತಹಶೀಲ್ದಾರ್‌, ‘ಇದು ಕುಂಟೆ ಜಮೀನಾಗಿದ್ದು, ಸದರಿ ಜಮೀನನ್ನು ಯಾರಿಗೂ ಮಂಜೂರು ಮಾಡಿರುವುದಿಲ್ಲ. ಅದ್ದರಿಂದ ನಕಲು ನೀಡಲು ಅರ್ಹ ಇರುವುದಿಲ್ಲ ಎಂದು ತಿಳುವಳಿಕೆ ಪತ್ರವನ್ನು ಅರ್ಜಿದಾರ ಹಾಗೂ ಆಯೋಗಕ್ಕೆ ಸಲ್ಲಿಸಿದ್ದರು.

2025 ಆ.1ರಂದು ಮತ್ತೊಂದು ಮಾಹಿತಿ ನೀಡಿ, ಪಣಸಮಾಕನಹಳ್ಳಿ ಸರ್ವೇ ನಂ 83 ಮತ್ತು 84ರ ಖಾತೆ ಬದಲಾವಣೆಯಾಗಿದ್ದು, ಕೋರ್ಟ್‌ ಆದೇಶ ಸಂಖ್ಯೆ 145/2022ಹಾಗೂ 23ರ ಕಡತದ ಎಲ್ಲಾ ನಕಲುಗಳನ್ನು ಸಿದ್ಧಪಡಿಸಿ, ಪತ್ರಕ್ಕೆ ಲಗತ್ತಿಸಿ ಕಳುಹಿಸಲಾಗಿದೆ ಎಂದಿದ್ದರು.

ಹೀಗಾಗಿ, ಮೇಲ್ಮನವಿದಾರನಿಗೆ ಎರಡು ರೀತಿ ಮಾಹಿತಿ ಒದಗಿಸಿರುವುದು ಕಂಡುಬಂದಿದ್ದು, ಇದು ಅನುಮಾನಾಸ್ಪದಕ್ಕೆ ದಾರಿ ಮಾಡಿಕೊಟ್ಟಿದೆ.

ಮೇಲ್ಮನವಿದಾರನಿಗೆ ಸರಿಯಾದ ಮಾಹಿತಿಯನ್ನು ಒದಗಿಸದೆ ಎರಡು ರೀತಿ ಮಾಹಿತಿ ನೀಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಮಾಹಿತಿ ಆಯುಕ್ತರು, ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 20(1) ಅಡಿಯಲ್ಲಿ, ಪ್ರತಿವಾದಿಯಾಗಿರುವ ಸುಧೀಂದ್ರ ಅವರಿಗೆ ₹ 25 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.

ದಂಡದ ಮೊತ್ತವನ್ನು ವೇತನದಿಂದ ಕಡಿತಗೊಳಿಸಿ ಸರ್ಕಾರದ ಲೆಕ್ಕ ಶಿರ್ಷೀಕೆ ಖಾತೆಗೆ ಜಮಾ ಮಾಡಿಸಿಕೊಳ್ಳಲು ಜಿಲ್ಲಾಧಿಕಾರಿಗೆ ನಿರ್ದೇಶಿಸಿದ್ದಾರೆ.

ಶಿಸ್ತು ಕ್ರಮಕ್ಕೆ ನಿರ್ದೇಶನ

ಎರಡು ರೀತಿಯ ಮಾಹಿತಿ ನೀಡಿರುವ ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆಗಿರುವ ತಹಶೀಲ್ದಾರ್‌ ಸುಧೀಂದ್ರ ವಿರುದ್ಧ ಕಾನೂನಿನಡಿ ಶಿಸ್ತು ಕ್ರಮ ಕೈಗೊಂಡು 10 ದಿನದಲ್ಲಿ ಅನುಪಾಲನ ವರದಿ ಸಲ್ಲಿಸಬೇಕು ಸರಿಯಾದ ಮಾಹಿತಿ ನೀಡಲು ಸೂಚಿಸಬೇಕು ಎಂದು ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಕಠಾರಿಯಾ ಹಾಗೂ ಜಿಲ್ಲಾಧಿಕಾರಿ ಎಂ.ಆರ್‌.ರವಿ ಅವರಿಗೆ ನಿರ್ದೇಶಿಸಿದ್ದಾರೆ.

ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 19(9)(ಬಿ)ರ ಅಡಿಯಲ್ಲಿ ಅಧಿಕಾರವನ್ನು ಚಲಾಯಿಸಿ ₹ 10 ಸಾವಿರ ಪರಿಹಾರವನ್ನು ನೀಡಲು ಆದೇಶಿಸಿದ್ದು 15 ದಿನಗಳೊಳಗಾಗಿ ಮೇಲ್ಮನವಿದಾರನಿಗೆ ಪಾವತಿ ಮಾಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.